ಥಾಣೆಯಲ್ಲಿ ಬಿಸಿ ಗಾಳಿ ಸಹಿತ ಮಳೆ ನಿರೀಕ್ಷೆ

ಥಾಣೆ,ಏ.೧೬-ದೇಶದ ಬಹುತೇಕ ಭಾಗಗಳಲ್ಲಿ ಇತ್ತೀಚಿನ ದಿನಗಳಲ್ಲಿ ತಾಪಮಾನ ಏರಿಕೆ ಕಂಡಿದೆ . ಆದರೆ, ಕೆಲವೆಡೆ ತುಂತುರು ಮಳೆಯಾಗಿದೆ, ಬಿರುಗಾಳಿ ಸಹ ಸಂಭವಿಸಿದೆ. ಅದೇ ಸಮಯದಲ್ಲಿ ಮಹಾರಾಷ್ಟ್ರದ ಥಾಣೆಯಲ್ಲಿ ಮಿಂಚು ಮತ್ತು ಮಳೆಯಾಗುವ ಸಾಧ್ಯತೆಯನ್ನು ಹವಾಮಾನ ಇಲಾಖೆ ವ್ಯಕ್ತಪಡಿಸಿದೆ. ಇದರಿಂದ ಬಿಸಿಲಿನ ಝಳದಿಂದ ಜನರಿಗೆ ಮುಕ್ತಿ ಸಿಗಲಿದೆ. ಆದರೆ ಸಿಡಿಲು ಬಡಿತದ ಸಮಯದಲ್ಲಿ ಜನರು ಹೆಚ್ಚು ಜಾಗರೂಕರಾಗಿರಬೇಕು ಎಂದು ಸೂಚನೆ ನೀಡಿದೆ.
ಇಂದು ೩ ರಿಂದ ೪ ಗಂಟೆಗಳ ಕಾಲ ಥಾಣೆಯಲ್ಲಿ ಮಿಂಚು ಮತ್ತು ಹಗುರದಿಂದ ಸಾಧಾರಣ ಮಳೆಯ ಜೊತೆಗೆ ಬಲವಾದ ಗಾಳಿಯ ಎಚ್ಚರಿಕೆಯನ್ನು ಹವಾಮಾನ ಇಲಾಖೆ ನೀಡಿದೆ. ಇದರಿಂದ ಜಿಲ್ಲೆಯಲ್ಲಿ ಬಿಸಿಲಿನ ತಾಪದಿಂದ ತಾತ್ಕಾಲಿಕ ಪರಿಹಾರ ದೊರೆಯಲಿದೆ. ಮುಂದಿನ ೩-೪ ಗಂಟೆಗಳಲ್ಲಿ ಥಾಣೆ ಜಿಲ್ಲೆಯ ಪ್ರತ್ಯೇಕ ಸ್ಥಳಗಳಲ್ಲಿ ಗಂಟೆಗೆ ೩೦-೪೦ ಕಿಮೀ ವೇಗದಲ್ಲಿ ಬಿರುಗಾಳಿ ಸಹಿತ ಮಿಂಚು ಮತ್ತು ಲಘುವಾಗಿ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಸೋಮವಾರ ತಿಳಿಸಿದೆ.ಹೊರಗೆ ಹೋಗುವಾಗ ಎಚ್ಚರಿಕೆ ವಹಿಸುವಂತೆ ಹವಾಮಾನ ಇಲಾಖೆ ಸೂಚಿಸಿದೆ. ಮುಂಬೈ ಮತ್ತು ಮಹಾರಾಷ್ಟ್ರದ ಇತರ ಹಲವು ಪ್ರದೇಶಗಳಲ್ಲಿ ಇಂದಿನ ಬಿಸಿಲಿನ ಬಗ್ಗೆ ಹವಾಮಾನ ಇಲಾಖೆ ಎಚ್ಚರಿಸಿದೆ. ಆದಾಗ್ಯೂ, ಇತ್ತೀಚಿನ ದಿನಗಳಲ್ಲಿ ದೇಶದ ಬಹುತೇಕ ಪ್ರದೇಶಗಳು ತೀವ್ರ ಬಿಸಿಲಿನ ಝಳದಿಂದ ಜನರು ಪರದಾಡುತ್ತಿದ್ದಾರೆ. ಬಿಸಿಲ ತಾಪದಿಂದ ಹಲವು ಪ್ರದೇಶಗಳಲ್ಲಿ ಅಂತರ್ಜಲ ಮಟ್ಟ ಕುಸಿದಿದೆ. ಇದರಿಂದ ನೀರಿನ ಸಮಸ್ಯೆ ಉಂಟಾಗಿದೆ. ಅದೇ ಸಮಯದಲ್ಲಿ, ಜಮ್ಮು ಮತ್ತು ಕಾಶ್ಮೀರದ ಸೋನಾಮಾರ್ಗ್‌ನಲ್ಲಿ ಹಿಮಪಾತ ಸಂಭವಿಸಿದೆ, ಆದರೆ ಕಿಶ್ತ್ವಾರ್‌ನಲ್ಲಿ ಮಳೆಯಾಗಿದೆ.