ತ.ನಾಡು ಮಾಜಿ ಸಚಿವರ ನಿವಾಸದ ಮೇಲೆ ಇಡಿ ದಾಳಿ

ಚೆನ್ನೈ,ಸೆ.೧೩- ಅಕ್ರಮ ಆಸ್ತಿ ಗಳಿಕೆ ಹಾಗೂ ಭ್ರಷ್ಟಾಚಾರ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಜಾರಿ ನಿರ್ದೇಶನಾಲಯ ಮತ್ತು ಭ್ರಷ್ಟಾಚಾರ ನಿಗ್ರಹದಳದ ಅಧಿಕಾರಿಗಳು ತಮಿಳುನಾಡು ಮಾಜಿ ಸಚಿವರ ನಿವಾಸದ ಮೇಲೆ ದಾಳಿ ನಡೆಸಿ ಬಿಸಿಮುಟ್ಟಿಸಿದ್ದಾರೆ.
ಮಾಜಿ ಸಚಿವರಾದ ಎಸ್.ಪಿ. ವೇಲುಮಣಿ ಹಾಗೂ ವಿಜಯಭಾಸ್ಕರ್ ಅವರ ನಿವಾಸ ಹಾಗೂ ಇವರಿಬ್ಬರಿಗೆ ಸಂಬಂಧಿಸಿದ ಸ್ಥಳಗಳ ಮೇಲೆ ಏಕಕಾಲಕ್ಕೆ ದಾಳಿ ಮಾಡಿ ಮಹತ್ವದ ದಾಖಲೆಗಳನ್ನು ಪರಿಶೀಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
೨೦೨೦ರಲ್ಲಿ ನಡೆದ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ವಿಜಯಭಾಸ್ಕರ್ ಅವರ ಚೆನ್ನೈ, ಸೇಲಂ ನಿವಾಸ ಸೇರಿದಂತೆ ೧೩ಕ್ಕೂ ಹೆಚ್ಚು ಕಡೆಗಳಲ್ಲಿ ಶೋಧಕಾರ್ಯ ಮುಂದುವರೆಸಲಾಗಿದೆ.
ಅಣ್ಣಾ ಡಿಎಂಕೆಯ ಮಾಜಿ ಆರೋಗ್ಯ ಸಚಿವ ವಿಜಯಭಾಸ್ಕರ್ ವಿರುದ್ಧ ಭ್ರಷ್ಟಾಚಾರ ನಿಗ್ರಹ ದಳ ಮೊಕದ್ದಮೆ ದಾಖಲಿಸಿಕೊಂಡಿತ್ತು. ಮತ್ತೊಬ್ಬ ಮಾಜಿ ಸಚಿವ ವೇಲುಮಣಿ ಗ್ರಾಮೀಣ ಪ್ರದೇಶದಲ್ಲಿ ಬೀದಿ ದೀಪ ಅಳವಡಿಕೆ ಗುತ್ತಿಗೆ ನೀಡುವ ಯೋಜನೆಯಲ್ಲಿ ೫೦೦ ಕೋಟಿ ರೂ. ಅವ್ಯವಹಾರ ನಡೆದಿರುವ ಆರೋಪ ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಕೊಯಮತ್ತೂರು, ಸುಕನಪುರಂ, ತೊಂಡಮುತ್ತೂರು ಮತ್ತು ವಡವಳ್ಳಿ ನಿವಾಸಗಳ ಮೇಲೆ ಭ್ರಷ್ಟಾಚಾರ ನಿಗ್ರಹ ದಳ ದಾಳಿ ನಡೆಸಿ ಶೋಧಕಾರ್ಯ ಕೈಗೊಂಡಿದೆ.