ತ.ನಾಡಿಗೆ 5 ಸಾವಿರ ಕ್ಯೂಸೆಕ್ ನೀರು ಬಿಡಿ ಕರ್ನಾಟಕಕ್ಕೆ ಸಿಡಬ್ಲ್ಯೂ ಆರ್ ಸಿ ಸೂಚನೆ

ನವದೆಹಲಿ,ಸೆ.12-ತಮಿಳುನಾಡಿಗೆ ಪ್ರತಿ ದಿನ ಐದು ಸಾವಿರ ಕ್ಯೂಸೆಕ್ ನೀರು ಹರಿಸುವಂತೆ ಕಾವೇರಿ ನದಿ ನೀರು ನಿರ್ವಹಣಾ ಸಮಿತಿ ಕರ್ನಾಟಕಕ್ಕೆ ಸೂಚನೆ ನೀಡಿದೆ.
ಈ ಸೂಚನೆಗೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಕರ್ನಾಟಕದ ಅಧಿಕಾರಿಗಳು, ಯಾವುದೇ ಕಾರಣಕ್ಕೂ ನೀರು ಬಿಡಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ತಮಿಳುನಾಡಿಗೆ ನೀರು ಹರಿಸುವ ಬಗ್ಗೆ ಕಾವೇರಿ ನೀರು ನಿಯಂತ್ರಣ ಸಮಿತಿ ಸಭೆ ವಿಡಿಯೋ ಕಾನ್ಫರೆನ್ಸ್​ ಮೂಲಕ ಇಂದು ನಡೆದ ಸಮಿತಿ ಸಭೆಯಲ್ಲಿ ಕರ್ನಾಟಕ ಹಾಗೂ ತಮಿಳುನಾಡು ಅಧಿಕಾರಿಗಳು ಭಾಗಿಯಾಗಿದ್ದರು.
ಈ ಸಭೆಯಲ್ಲಿ ಮತ್ತೆ ತಮಿಳುನಾಡಿಗೆ ನೀರು ಹರಿಸಲು ಸೂಚನೆ ನೀಡಿರುವುದು ಕರ್ನಾಟಕದಲ್ಲಿ ಅದರಲ್ಲೂ ಮಂಡ್ಯದಲ್ಲಿ ರೈತರ ಆಕ್ರೋಶಕ್ಕೆ ಕಾರಣವಾಗಿದೆ.
ನಾಳೆ ಮತ್ತು ನಾಡಿದ್ದು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಸಭೆ ನಡೆಯಲಿದ್ದು ಈ ಸಂಬಂಧ ಪ್ರಾಧಿಕಾರ ಆದೇಶ ಹೊರಡಿಸಲಿದೆ.
ಪ್ರಸ್ತುತ ಕೆಆರ್ ಎಸ್ ಜಲಟಶಯದಲ್ಲಿ 21 ಟಿಎಂಸಿ ನೀರು ಮಾತ್ರವಿದೆ. ಆದರೂ ತಮಿಳುನಾಡಿಗೆ ನೀರು ಬಿಡುವಂತೆ ಸೂಚಿಸಿರುವ ಕಾವೇರಿ ನಿರ್ವಹಣಾ ಸಮಿತಿ ನಿರ್ಧಾರಕ್ಜೆ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ನಮ್ಮ ಬಳಿ ನೀರಿಲ್ಲ:ಡಿಕೆಶಿ

ತಮಿಳುನಾಡಿಗೆ ಪ್ರತಿದಿನ 5 ಸಾವಿರ ಕ್ಯೂಸೆಕ್ಸ್ ನೀರು ಹರಿಸಿ ಎಂದು ಕಾವೇರಿ ನೀರು ನಿಯಂತ್ರಣ ಸಮಿತಿ ಹೇಳಿದೆ. ಆದರೆ ನಮ್ಮ ಬಳಿ ನೀರಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದೇವೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸ್ಪಷ್ಟಪಡಿಸಿದರು.
ಕಾವೇರಿ ನೀರು ನಿಯಂತ್ರಣ ಸಮಿತಿಯ ಆದೇಶದ ಬೆನ್ನಲ್ಲೇ ಬೆಂಗಳೂರಿನಲ್ಕಿ ಪ್ರತಿಕ್ರಿಯೆ ನೀಡಿರುವ ಅವರು, ನಾಳೆ ಅಥವಾ ಗುರುವಾರ ಕಾವೇರಿ ನೀರಾವರಿ ಪ್ರಾಧಿಕಾರದ ಸಭೆ ನಡೆಯಬಹುದು ಅಲ್ಲಿ ನಮ್ಮ ನಿಲುವನ್ನು ಸ್ಪಷ್ಟವಾಗಿ ತಿಳಿಸುತ್ತೇವೆ. ನಾನು ಮತ್ತು ಮುಖ್ಯಮಂತ್ರಿಗಳು ಚರ್ಚೆ ನಡೆಸಿ ನೀರು ಬಿಡಲು ಯಾವುದೇ ಕಾರಣಕ್ಕೂ ಸಾಧ್ಯವಿಲ್ಲ ಎಂದು ತೀರ್ಮಾನಕ್ಕೆ ಬಂದಿರುವುದಾಗಿ ಹೇಳಿದರು.
ತಮಿಳುನಾಡು 12 ಸಾವಿರ ಕ್ಯೂಸೆಕ್ಸ್ ಬೇಡಿಕೆ ಇಟ್ಟಿತ್ತು. ಅದನ್ನು 5 ಸಾವಿರ ಕ್ಯೂಸೆಕ್ ಗೆ ಇಳಿಸಿದ್ದಾರೆ. ಮೊದಲು ಕುಡಿಯುವ ನೀರಿಗೆ ಆದ್ಯತೆ ನಂತರ ರೈತರಿಗೆ ಹರಿಸುವ ಬಗ್ಗೆ ಯೋಚನೆ ಮಾಡುತ್ತೇವೆ. ಬೆಂಗಳೂರಿಗೆ ಮಳೆ ಬಿದ್ದಾಗ ಆಶಾಭಾವನೆ ಮೂಡಿತ್ತು, ಈಗ ಮಳೆ ಬರದೆ ಸಂಕಷ್ಟ ಎದುರಾಗಿದೆ ಎಂದರು.
ಸುಪ್ರೀಂಕೋರ್ಟಿಗೆ ಅಫಿಡವಿಟ್ ಹಾಕಿದ್ದೆವು, ಅವರು ನಾವು ಮಧ್ಯಸ್ಥಿಕೆ ವಹಿಸುವುದಿಲ್ಲ ಎಂದು ಎರಡೂ ರಾಜ್ಯಗಳಿಗೆ ತಿಳಿಸಿದ್ದಾರೆ. ವಾಸ್ತವಾಂಶವನ್ನು ಎಲ್ಲರಿಗೂ ತಿಳಿಸಿದ್ದೇವೆ. ದೆಹಲಿಯಲ್ಲಿ ಇರುವ ನಮ್ಮ ಕಾನೂನು ತಜ್ಞರ ಬಳಿ ಮಾತನಾಡುತ್ತೇನೆ. ನಾವು ಕದ್ದು ಮುಚ್ಚಿ ಏನನ್ನೂ ಮಾಡುತ್ತಿಲ್ಲ. ರಾಜ್ಯಕ್ಕೆ ಭೇಟಿ ನೀಡಿ ನಮ್ಮ ಪರಿಸ್ಥಿತಿ ನೋಡಿ ಎಂದು ಹೇಳಿದ್ದೇವೆ ಎಂದರು.
ಕಾವೇರಿ ನೀರಿನ ವಿಚಾರದಲ್ಲಿ ರಾಜಕಾರಣ ಮಾಡಲಾಗುತ್ತಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವರು, ನ್ಯಾಯಾಧೀಶರ ವಿರುದ್ಧ ಹಾಗೂ ಸಮಿತಿಯಲ್ಲಿ ಹಿರಿಯ ಅಧಿಕಾರಿಗಳ ಆರೋಪ ಮಾಡುವುದು ತಪ್ಪು. ವಿರೋಧ ಪಕ್ಷದವರ ಬಗ್ಗೆ ಹೆಚ್ಚು ಹೇಳುವುದಿಲ್ಲ, ಸಹಕಾರ ಕೊಡಿ ಎಂದು ಕೇಳುತ್ತೇನೆ. ಜನ ನಮ್ಮ ಬೆಂಬಲಕ್ಕೆ ನಿಲ್ಲುವ ಎನ್ನುವ ನಂಬಿಕೆ ಇದೆ ಎಂದು ಹೇಳಿದರು.