ನವದೆಹಲಿ,ಸೆ.26- ತಮಿಳುನಾಡಿಗೆ ಮುಂದಿನ 18 ದಿನಗಳ ಕಾಲ ಮತ್ತೆ ಮೂರು ಸಾವಿರ ಕ್ಯೂಸೆಕ್ ನೀರು ಹರಿಸುವಂತೆ ಕರ್ನಾಟಕಕ್ಕೆ ಕಾವೇರಿ ನೀರು ನಿಯಂತ್ರಣಾ ಸಮಿತಿ ಆದೇಶಿಸಿದೆ.
ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವುದನ್ನು ವಿರೋಧಿಸಿ ಬೆಂಗಳೂರು ಬಂದ್ ನಡೆಯುತ್ತಿರುವ ಹೊತ್ತಲ್ಲೇ ಮತ್ತೆ ನೀರು ಹರಿಸುವಂತೆ ಸಿಡಬ್ಲ್ಯೂ ಆರ್ ಸಿ ಆದೇಶಿಸಿರುವುದು ರಾಜ್ಯ ಸರ್ಕಾರವನ್ನು ಮತ್ತಷ್ಡು ಸಂಕಷ್ಟಕ್ಕೆ ತಳ್ಳಿದೆ.
ವಿಡಿಯೋ ಕಾನ್ಫರೆನ್ಸ್ ಮೂಲಕ ಸಿಡಬ್ಲ್ಯೂ ಆರ್ ಸಿ ಸಭೆ ಇಂದು ನಡೆಯಿತು. ಮುಂದಿನ ತಿಂಗಳು ಅ.15ರವರೆಗೆ 3000 ಕ್ಯೂಸೆಕ್ ನೀರನ್ನು, ತಮಿಳುನಾಡಿನ ಬಿಳಿಗೊಂಡ್ಲುವಿಗೆ ಹರಿಸುವಂತೆ ಸೂಚಿಸಿದೆ.
ರಾಜ್ಯದ 161 ತಾಲೂಕುಗಳನ್ನು ತೀವ್ರ ಬರ ಪೀಡಿತ ಮತ್ತು 34 ತಾಲೂಕುಗಳನ್ನು ಮಧ್ಯಮ ಬರ ಪೀಡಿತ ಎಂದು ಘೋಷಿಸಿದೆ. ಇಂತಹ ಪರಿಸ್ಥಿತಿಯಲ್ಲಿ ನೀರು ಬಿಡಲು ಸಾಧ್ಯವಿಲ್ಲ ಎಂದು ವಾದಿಸಿತು.
ಕಳೆದ ಜೂನ್‌ನಿಂದ ಸೆಪ್ಟೆಂಬರ್‌ವರೆಗೂ 123 ಟಿಎಂಸಿ ನೀರನ್ನು ಹರಿಸಬೇಕಿತ್ತು. ಕರ್ನಾಟಕ ಇದುವರೆಗೆ 40 ಟಿಎಂಸಿ ನೀರು ಹರಿಸಿದೆ. ಹೀಗಾಗಿ ಬಾಕಿ 83 ಟಿಎಂಸಿ ನೀರು ಕೂಡಲೇ ಬಿಡುಗಡೆ ಮಾಡಬೇಕು ಎಂದು ತಮಿಳುನಾಡು ಪಟ್ಟುಹಿಡಿಯಿತು.
ಸಮಿತಿ ಯಾವುದೇ ಕಾರಣಕ್ಕೂ ನೀರಿನ ಪ್ರಮಾಣವನ್ನು ಕಡಿಮೆ ಮಾಡಬಾರದು. ಅಕ್ಟೋಬರ್ ತಿಂಗಳ 22 ಟಿಎಂಸಿ ನೀರನ್ನು ಕರ್ನಾಟಕ ಹರಿಸಬೇಕು. ರಾಜ್ಯಕ್ಕೆ ಹರಿಸಬೇಕಾದ ನೀರನ್ನು ಹರಿಸುವಂತೆ ಕರ್ನಾಟಕಕ್ಕೆ ಆದೇಶಿಸಬೇಕು ಎಂದು ತಮಿಳುನಾಡು ಒತ್ತಾಯಿಸಿತು.
ಎರಡು ಕಡೆ ವಾದ ಆಲಿಸಿದ ಸಿಡಬ್ಲ್ಯೂ ಆರ್ ಸಿ ತಮಿಳುನಾಡಿಗೆ 3000 ಕ್ಯೂಸೆಕ್ ನೀರು ಹರಿಸುವಂತೆ ಸೂಚಿಸಿ 12 ಸಾವಿರ ಕ್ಯೂಸೆಕ್ ನೀರು ಹರಿಸಬೇಕೆಂಬ ತಮಿಳುನಾಡಿನ ಬೇಡಿಕೆಯನ್ನು ತಿರಸ್ಕರಿಸಿತು.
ಡಿಕೆಶಿ ಪ್ರತಿಕ್ರಿಯೆ
12 ಸಾವಿರ ಕ್ಯೂಸೆಕ್ ನೀರು ಬಿಡಬೇಕೆಂಬ ತಮಿಳು ನಾಡು ಬೇಡಿಕೆಯನ್ನು ಸಿಡಬ್ಲ್ಯೂ ಆರ್ ಸಿ ತಿರಸ್ಕರಿಸಿರುವುದಕ್ಕೆ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ.