ತ.ನಾಡಿಗೆ ನೀರು:ಜೆಡಿಎಸ್ ಆಕ್ರೋಶ

ಮಂಡ್ಯ, ಸೆ.೨-ತಮಿಳುನಾಡಿಗೆ ನಿರಂತರವಾಗಿ ನೀರು ಹರಿದು ಕೆಆರ್‌ಎಸ್ ಜಲಾಶಯದ ನೀರಿನ ಮಟ್ಟ ಕುಸಿಯುತ್ತಿದ್ದು, ತಕ್ಷಣ ನಿಲ್ಲಿಸುವಂತೆ ಆಗ್ರಹಿಸಿ ಹೋರಾಟ ಆರಂಭಿಸಿರುವ
ಜೆಡಿಎಸ್ ಪಕ್ಷದ ನಾಯಕರು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.ನಗರದ ಸರ್.ಎಂ.ವಿ ಪ್ರತಿಮೆ ಎದುರು ನಡೆಸುತ್ತಿರುವ ಹೋರಾಟಕ್ಕೆ ಬೆಂಬಲ ಸೂಚಿಸಿರುವ ಜೆಡಿಎಸ್ ನಾಯಕರು, ಇಂದಿನಿಂದ ಧರಣಿ ನಡೆಸಿ ತಮಿಳುನಾಡು ಹಾಗೂ ಕಾವೇರಿ ನೀರು ನಿರ್ವಹಣಾ ಮಂಡಳಿ ವಿರುದ್ಧ ಘೋಷಣೆ ಕೂಗಿದರು.ಈ ವೇಳೆ ಜೆಡಿಎಸ್ ಮುಖಂಡ ಸಿ.ಎಸ್.ಪುಟ್ಟರಾಜು ಮಾತನಾಡಿ, ಹಿಂದಿನಿಂದಲೂ ಕಾವೇರಿ ಹೋರಾಟ ಪಕ್ಷಾತೀತವಾಗಿ ನಡೆದಿದೆ. ಕಾವೇರಿ ಅಚ್ಚುಕಟ್ಟು ಪ್ರದೇಶದಲ್ಲಿ ರೈತರಿಗೆ ಮೋಸವಾಗುತ್ತಿದೆ ಎಂದು ಕಿಡಿಕಾರಿದರು.ರೈತರು ಬೇಕಿದ್ದರೆ ಕೋರ್ಟ್‌ಗೆ ಹೋಗಲಿ ಎಂದು ಹೇಳಿದ್ದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಈಗ ದೆಹಲಿಯಲ್ಲಿ ವಕೀಲರ ತಂಡವನ್ನು ಭೇಟಿ ಮಾಡಿದ್ದಾರೆ. ನೀರು ಹೋದ ಮೇಲೆ ಎಚ್ಚೆತ್ತುಕೊಂಡಿರುವುದು ನಾಚಿಕೆಗೇಡಿನ ಸಂಗತಿ. ಅವರಿಗೆ ಆತ್ಮಸಾಕ್ಷಿ ಇದ್ದರೆ ಕೂಡಲೇ ರಾಜೀನಾಮೆ ಕೊಡಬೇಕು ಎಂದು ಸಮಿತಿಯ ಅಧ್ಯಕ್ಷ ಕೆ.ಎಸ್.ನಂಜುಂಡೇಗೌಡ ಒತ್ತಾಯಿಸಿದರು.ಮತ್ತೊಂದೆಡೆ, ರೈತಸಂಘದ ಸದಸ್ಯರು ಕೆಆರ್‌ಎಸ್ ಜಲಾಶಯದ ನಾರ್ತ್‌ಬ್ಯಾಂಕ್ ಬಳಿ ನಡೆಸುತ್ತಿರುವ ಅಹೋರಾತ್ರಿ ಧರಣಿ ೪ನೇ ದಿನಕ್ಕೆ ತಲುಪಿದೆ. ಹೋರಾಟದ ನೇತೃತ್ವ ವಹಿಸಿರುವ ಶಾಸಕ ದರ್ಶನ್ ಪುಟ್ಟಣ್ಣಯ್ಯ ರಾತ್ರಿ ಬೃಂದಾವನ ಪ್ರವೇಶ ದ್ವಾರದಲ್ಲೇ ಮಲಗಿ ನಿದ್ರಿಸಿದರು.

ಮುಂಗಾರು ಕೈಕೊಟ್ಟ ಹಿನ್ನೆಲೆ, ೯೯ ಅಡಿಗೆ ಕೆಆರ್ ಎಸ್ ನೀರಿನ ಮಟ್ಟ ಕುಸಿದಿದೆ. ಮಂಗಳವಾರ ರಾತ್ರಿ ೧೦೧.೭೮ ಅಡಿ ಇದ್ದ ನೀರಿನ ಮಟ್ಟ,ಇಂದು ೯೯.೮೬ ಅಡಿಗೆ ಕುಸಿತವಾಗಿದೆ.ಮಂಗಳವಾರ ರಾತ್ರಿಯಿಂದ ತಮಿಳುನಾಡಿಗೆ ರಾಜ್ಯ ಸರ್ಕಾರ ನೀರು ಬಿಡುತ್ತಿದ್ದು, ೨೨ ಟಿಎಂಸಿಗೆ ನೀರಿನ ಪ್ರಮಾಣ ಇಳಿಮುಖವಾಗಿದೆ.

ಇಂದಿನ ನೀರಿನ ಮಟ್ಟ

ಗರಿಷ್ಠ ಮಟ್ಟ – ೧೨೪.೮೦ ಅಡಿಗಳು
ಇಂದಿನ ಮಟ್ಟ – ೯೯.೮೬ ಅಡಿಗಳು
ಗರಿಷ್ಠ ಸಾಂದ್ರತೆ – ೪೯.೪೫೨
ಇಂದಿನ ಸಾಂದ್ರತೆ – ೨೨.೭೦೦ ಟಿಎಂಸಿ
ಒಳ ಹರಿವು – ೨,೮೭೦ ಕ್ಯೂಸೆಕ್
ಹೊರ ಹರಿವು – ೭,೧೨೮ ಕ್ಯೂಸೆಕ್