ತ.ನಾಡಿಗೆ ಕಾವೇರಿ ನೀರು ಮಂಡ್ಯದಲ್ಲಿ ರೈತರ ಕಿಚ್ಚು

ಮಂಡ್ಯ,ಆ.೨೨: ತಮಿಳುನಾಡಿಗೆ ಕಾವೇರಿ ನೀರು ಬಿಟ್ಟಿರುವುದನ್ನು ವಿರೋಧಿಸಿ ಸಕ್ಕರೆನಾಡು ಮಂಡ್ಯದಲ್ಲಿ ಅನ್ನದಾತರ ಆಕ್ರೋಶ ಸ್ಫೋಟಗೊಂಡಿದೆ. ನೂರಾರು ರೈತರು ಮಂಡ್ಯದಲ್ಲಿ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಲು ಮುಂದಾದರು. ಈ ವೇಳೆ ಪೊಲೀಸರು ಪ್ರತಿಭಟನಾನಿರತರನ್ನು ಬಂಧಿಸಲು ಯತ್ನಿಸಿದ ವೇಳೆ ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ವಾಗ್ವಾದ, ಮಾತಿನ ಚಕಮಕಿ ನಡೆಯಿತು. ಬಳಿಕ ರೈತರನ್ನು ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಬಂಧಿಸಿ ಕರೆದೊಯ್ದರು.
ರಾಜ್ಯಸರ್ಕಾರದ ಕ್ರಮ ವಿರೋಧಿಸಿ ನಿನ್ನೆ ಬಿಜೆಪಿ ಸಂಸದೆ ಸುಮಲತಾ ನೇತೃತ್ವದಲ್ಲಿ ಭಾರಿ ಪ್ರತಿಭಟನೆ ನಡೆಸಲಾಗಿತ್ತು. ಇಂದು ಈ ಭಾಗದ ರೈತರು ಬೆಂಗಳೂರು-ಮೈಸೂರು ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿ, ರಾಜ್ಯಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತು. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು,ರೈತರನ್ನು ಬಂಧಿಸಲು ಮುಂದಾದರು, ಈ ಸಂದರ್ಭದಲ್ಲಿ ರೈತರು ಸರ್ಕಾರದ ವಿರುದ್ಧ ಘೋಷಣೆ ಕೂಗಿ ಪ್ರತಿಭಟನೆ ಹತ್ತಿಕ್ಕಲು ಸರ್ಕಾರ ಯತ್ನಿಸುತ್ತಿದೆ ಎಂದು ಆರೋಪಿಸಿ ಪೊಲೀಸರ ಜತೆ ವಾಗ್ವಾದಕ್ಕಿಳಿದರು. ಈ ವೇಳೆ ಕೆಲಕಾಲ ಆತಂಕದ ಪರಿಸ್ಥಿತಿ ನಿರ್ಮಾಣವಾಯಿತು. ಬಳಿಕ ಪೊಲೀಸರು ಪ್ರತಿಭಟನಾನಿರತ ರೈತರನ್ನು ಬಂಧಿಸಿ ಕರೆದೊಯ್ದರು.
ಇದೇ ವೇಳೆ ಇಂಡುವಾಳು ಗ್ರಾಮದಿಂದ ಮತ್ತೊಂದು ರೈತರ ಗುಂಪು, ಎತ್ತಿನಗಾಡಿ, ಟ್ರ್ಯಾಕ್ಟರ್‌ಗಳೊಂದಿಗೆ ತೆರಳಿ ಹೆದ್ದಾರಿ ತಡೆಯಲು ಮುಂದಾದರು. ಪ್ರತಿಭಟನೆ ನಡೆಸದಂತೆ ಪೊಲೀಸರು ಬ್ಯಾರಿಕೇಡ್‌ಗಳನ್ನು ಹಾಕಿದ್ದರು. ಪೊಲೀಸರ ಭದ್ರತೆಯನ್ನು ಲೆಕ್ಕಿಸದೆ ಪ್ರತಿಭಟನಾಕಾರರು ರಸ್ತೆ ತಡೆಗೆ ಮುಂದಾದರು. ತಕ್ಷಣ ಪೊಲೀಸರು ಪ್ರತಿಭಟನಾನಿರತರನ್ನು ವಶಕ್ಕೆ ಪಡೆದರು. ಪ್ರತಿಭಟನೆ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೆ ಅಡ್ಡಿಯಾಗಿ ಸವಾರರು ಪರದಾಡುವಂತಾಯಿತು.