ತ.ನಾಡಿಗೆ ಕಾವೇರಿ ನೀರು ಬಿಡಲು ಸಾಧ್ಯವಿಲ್ಲ

ಶೆಖಾವತ್ ಸಿಎಂ ಪತ್ರ
(ಸಂಜೆವಾಣಿ ಪ್ರತಿನಿಧಿಯಿಂದ)
ಬೆಂಗಳೂರು,ಸೆ.೧೪:ತಮಿಳುನಾಡಿಗೆ ಕಾವೇರಿ ನೀರು ಹರಿಸಲು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕೇಂದ್ರದ ಜಲಶಕ್ತಿ ಸಚಿವ ಗಜೇಂದ್ರಸಿಂಗ್ ಶೆಖಾವತ್ ಅವರಿಗೆ ಬರೆದಿರುವ ಪತ್ರದಲ್ಲಿ ಹೇಳಿದ್ದಾರೆ.ರಾಜ್ಯದ ರೈತರು, ಜನರು ಮತ್ತು ಜಾನುವಾರುಗಳನ್ನು ಸಂಕಷ್ಟಕ್ಕೆ ದೂಡಿ, ತಮಿಳುನಾಡಿಗೆ ನೀರು ಹರಿಸಲು ಸಾಧ್ಯವಿಲ್ಲ. ಕಾವೇsರಿ ನೀರು ನಿಯಂತ್ರಣ ಸಮಿತಿಯ ತೀರ್ಪನ್ನು ಪಾಲನೆ ಮಾಡಲು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿಗಳು ಪತ್ರದಲ್ಲಿ ಹೇಳಿದ್ದಾರೆ.ಕಾವೇರಿ ನೀರು ನಿಯಂತ್ರಣ ಸಮಿತಿ ನಿರ್ಧರಿಸಿರುವಂತೆ ೧೫ ದಿನಗಳ ಕಾಲ ಕೆಆರ್‌ಎಸ್ ಹಾಗೂ ಕಬಿನಿಯಿಂದ ೫ ಸಾವಿರ ಕ್ಯೂಸೆಕ್ ನೀರನ್ನು ಹರಿಸಲು ಸಾಧ್ಯವಿಲ್ಲ. ಕರ್ನಾಟಕದ ಮನವಿಯನ್ನು ಪರಿಗಣಿಸಿ ಕಾವೇರಿ ನೀರು ನಿಯಂತ್ರಣದ ಸಮಿತಿಯ ನಿರ್ಧಾರವನ್ನು ಮರುಪರಿಶೀಲಿಸುವಂತೆಯೂ ಅವರು ಪತ್ರದಲ್ಲಿ ಕೋರಿದ್ದಾರೆ.ಕರ್ನಾಟಕ ಹಿಂದೆ ಕಾವೇರಿ ನೀರು ನಿಯಂತ್ರಣ ಸಮಿತಿ ನೀಡಿದ್ದ ನಿರ್ದೇಶನವನ್ನು ಪಾಲಿಸಿದೆ. ಈಗ ಅದನ್ನು ಪಾಲಿಸಲು ಆಗಲ್ಲ, ಕಾವೇರಿ ಜಲಾಯನ ಪ್ರದೇಶದಲ್ಲಿ ಬಹುತೇಕ ಸವಲತ್ತುಗಳು ಮುಂಗಾರು ಮಳೆ ಕೊರತೆಯಿಂದ ಬರಕ್ಕೆ ತುತ್ತಾಗಿವೆ ಎಂದು ಅವರು ಪತ್ರದಲ್ಲಿ ಹೇಳಿದ್ದಾರೆ.ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ಸೆ. ೧೨ ರಿಂದ ೧೪ರವರೆಗೂ ಮಳೆಯಾಗುವ ಲಕ್ಷಣಗಳಿಲ್ಲ, ಮೆಟ್ಟೂರು ಜಲಾಶಯದಲ್ಲಿ ಸೆ. ೧೨ ರಂದು ಲಭ್ಯವಾದ ಮಾಹಿತಿಯಂತೆ ೨೪.೨೩೩ ಟಿಎಂಸಿ ನೀರು ಸಂಗ್ರಹವಿದೆ. ಪ್ರಸ್ತುತ ಬಿಡುಗಡೆಯಾಗಿರುವ ನೀರನ್ನು ಪರಿಗಣಿಸಿದರೆ ತಮಿಳುನಾಡಿನ ಅವಶ್ಯಕತೆಯನ್ನು ಪೂರೈಸಲು ಸಾಕಾಗುಷ್ಟು ನೀರು ಲಭ್ಯವಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ರದಲ್ಲಿ ತಿಳಿಸಿದ್ದಾರೆ.ಕರ್ನಾಟಕ ಬೆಳೆಗಳ ರಕ್ಷಣೆಗೆ ೭೦ ಟಿಎಂಸಿ, ಕುಡಿಯುವ ನೀರಿಗೆ ೩೩ ಹಾಗೂ ಕೈಗಾರಿಕೆಗಳಿಗೆ ೩ ಟಿಎಂಸಿ ನೀರು ಅಗತ್ಯವಿದೆ. ನಮ್ಮ ಸಂಗ್ರಹ ೫೩ ಟಿಎಂಸಿ ಮಾತ್ರ ಇದ್ದು, ನಮ್ಮ ಅವಶ್ಯಕತೆಗಳಿಗೆ ಈ ನೀರು ಸಾಕಾಗುತ್ತಿಲ್ಲ ಎಂದು ಪತ್ರದಲ್ಲಿ ಹೇಳಿದ್ದಾರೆ.ಜೂನ್ ತಿಂಗಳಿನಿಂದ ಸೆಪ್ಟಂಬರ್ ಮಧ್ಯದವರೆಗೂ ೯೨ ದಿನಗಳ ಕಾಲ ೧೦೦ ಟಿಎಂಸಿ ನೀರನ್ನು ತಮಿಳುನಾಡು ಬಳಸಿಕೊಂಡಿದ್ದು, ಇದು ಹಿಂದೆ ೧೯೮೭-೮೮, ೨೦೦೨-೨೦೦೩, ೨೦೧೨-೧೩, ೨೦೧೬-೧೭, ೨೦೧೭-೧೮ರ ಬರ ಪರಿಸ್ಥಿತಿಯಲ್ಲಿ ಬಳಕೆಯಾದ ನೀರಿಗಿಂತಲೂ ಹೆಚ್ಚಾಗಿದೆ. ಕರ್ನಾಟಕದ ಜಲಾಶಯಗಳಲ್ಲಿ ಸಂಕಷ್ಟದ ಸ್ಥಿತಿ ಇದ್ದರೂ ತಮಿಳುನಾಡು ಭತ್ತವನ್ನು ವ್ಯಾಪಕವಾಗಿ ಬೆಳೆಯುತ್ತಿದೆ ಎಂಬುದನ್ನು ಮುಖ್ಯಮಂತ್ರಿಗಳು ಪತ್ರದಲ್ಲಿ ಕೇಂದ್ರ ಗೃಹಶಕ್ತಿ ಸಚಿವರ ಗಮನಕ್ಕೆ ತಂದಿದ್ದಾರೆ.