ತ.ನಾಡಿಗೆ ಕಾವೇರಿ ನೀರು ಅಹೋರಾತ್ರಿ ರೈತರ ಧರಣಿ

ಮಂಡ್ಯ, ಆ.೩೧-ತಮಿಳುನಾಡಿಗೆ ಕಾವೇರಿ ನೀರು ಬಿಡುವ ಆದೇಶವನ್ನು ವಿರೋಧಿಸಿ ಕರ್ನಾಟಕದ ರೈತರ ಗುಂಪೊಂದು ಅಹೋರಾತ್ರಿ ಮೇಣದ ಬತ್ತಿ ಹಿಡಿದು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ತಮಿಳುನಾಡಿಗೆ ಕರ್ನಾಟಕ ೫೦೦೦ ಕ್ಯೂಸೆಕ್ ನೀರು ಬಿಡಬೇಕು ಎಂಬ ಕಾವೇರಿ ನೀರು ನಿಯಂತ್ರಣ ಸಮಿತಿಯ ಶಿಫಾರಸಿಗೆ ತಮ್ಮ ಆಕ್ಷೇಪವಿದೆ ಎಂದು ಪ್ರತಿಭಟನಾಕಾರರು ದೂರಿದ್ದಾರೆ.
ಕಾಂಗ್ರೆಸ್ ಬೆಂಬಲಿತ ಪಕ್ಷೇತರ ಶಾಸಕ ದರ್ಶನ್ ಪುಟ್ಟಣ್ಣಯ್ಯ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ರೈತರ ಹಿತ ಕಡೆಗಣಿಸಿ ತಮಿಳುನಾಡಿಗೆ ನೀರು ಹರಿಸುತ್ತಿರುವ ರಾಜ್ಯ ಸರ್ಕಾರದ ನಡೆಯನ್ನು ತೀವ್ರವಾಗಿ ಖಂಡಿಸಿದ ಜೆಡಿಎಸ್ ನಾಯಕರು, ಎರಡು ದಿನಗಳೊಳಗೆ ನೀರು ನಿಲ್ಲಿಸದಿದ್ದಲ್ಲಿ ಶನಿವಾರ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
೧೩೫ ಸ್ಥಾನಗಳನ್ನು ಗೆದ್ದಿದ್ದೇವೆ ಎಂಬ ಅಹಂನಿಂದ ಬೇಕಾಬಿಟ್ಟಿ ಆಡಳಿತ ನಡೆಸುತ್ತಿದ್ದಾರೆ. ಈಗಾಗಲೇ ರೈತರು ಸಾಲ ಸೂಲ ಮಾಡಿ ಒಟ್ಟಲು ಹಾಗೂ ನಾಟಿ ಮಾಡಿದ್ದಾರೆ. ಇಲ್ಲಿಯ ರೈತರ ಬೆಳೆಗಳನ್ನು ರಕ್ಷಿಸದೆ ತಮಿಳುನಾಡಿನವರು ಮೂರನೇ ಬೆಳೆಯಾಗಿ ಬೆಳೆಯುವ ಕುರುವೈ ಬೆಳೆಗೆ ನೀರು ಹರಿಸಿ ಅಲ್ಲಿಂದಲೇ ಅಕ್ಕಿ ತರುವ ಯೋಚನೆ ಮಾಡಿದ್ದಾರೆ ಎಂದು ಟೀಕಿಸಿದ್ದಾರೆ.