ತ.ನಾಡಲ್ಲಿ ನಡ್ಡಾ ಚುನಾವಣಾ ಪ್ರಚಾರ

ಚೆನ್ನೈ,ಮಾ.೨೬- ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ತಮಿಳುನಾಡಿನಲ್ಲಿ ಎಐಎಡಿಎಂಕೆ ಹಾಗೂ ಬಿಜೆಪಿ ಮೈತ್ರಿಕೂಟದ ಪರವಾಗಿ ಇಂದು ಅಬ್ಬರದ ಪ್ರಚಾರ ನಡೆಸಿದರು.
ಶತಾಯ-ಗತಾಯ ತಮಿಳುನಾಡಿನಲ್ಲಿ ಕಮಲ ಅರಳಿಸುವ ಪಣ ತೊಟ್ಟಿರುವ ಬಿಜೆಪಿ ನಾಯಕರುಗಳು ತಮಿಳುನಾಡಿನಲ್ಲಿ ಸಾರ್ವಜನಿಕ ಸಭೆಗಳಲ್ಲಿ ಪಾಲ್ಗೊಂಡು ಬಿರುಸಿನ ಪ್ರಚಾರ ನಡೆಸಿದ್ದಾರೆ. ಈಗಾಗಲೇ ಪ್ರಧಾನಿ ಮೋದಿ, ಕೇಂದ್ರ ಗೃಹಸಚಿವ ಅಮಿತ್ ಶಾ ಒಂದು ಸುತ್ತಿನ ಪ್ರಚಾರ ಮುಗಿಸಿದ್ದಾರೆ. ಇಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ತಮಿಳುನಾಡಿನ ತಿರುವಕುಡಿಯ ತಿಟ್ಟಕುಡಿ ಮತ್ತು ಬುದಲೂರಿನಲ್ಲಿ ಸಾರ್ವಜನಿಕ ಸಭೆಗಳಲ್ಲಿ ಪಾಲ್ಗೊಂಡು ಬಿಜೆಪಿ ಅಭ್ಯರ್ಥಿ ಪರ ಮತ ಯಾಚಿಸಿದರು. ನಂತರ ಅವರು ಹಾರ್‌ಬೋರ್‌ನಲ್ಲಿ ರೋಡ್ ಶೋ ಸಹ ನಡೆಸಿದರು.
ತಮಿಳುನಾಡಿನಲ್ಲಿ ಏ. ೬ ರಂದು ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದೆ. ಈ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಎಐಎಡಿಎಂಕೆ ಮೈತ್ರಿ ಮಾಡಿಕೊಂಡು ಸುಮಾರು ೨೦ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿದೆ.’
ತಮಿಳುನಾಡಿನಲ್ಲಿ ಬಿಜೆಪಿಗೆ ಹೇಳಿಕೊಳ್ಳುವಂತಹ ನೆಲೆ ಇಲ್ಲ. ಹಾಗಾಗಿ, ಎಐಎಡಿಂಎಂಕೆಯನ್ನು ಊರುಗೋಲು ಮಾಡಿಕೊಂಡು ಪಕ್ಷವನ್ನು ಬೆಳೆಸುವ ಚಿಂತನೆ ಬಿಜೆಪಿ ನಾಯಕರದ್ದಾಗಿದ್ದು, ಈ ಚುನಾವಣೆಯಲ್ಲಿ ಕೆಲ ಕ್ಷೇತ್ರಗಳಲ್ಲಿ ಗೆಲ್ಲಲು ಬಿಜೆಪಿ ನಾಯಕರು ಗಮನ ಕೇಂದ್ರೀಕರಿಸಿ ಅದರಂತೆ ಹಲವು ದೊಡ್ಡ ನಾಯಕರುಗಳು ಬಿಜೆಪಿ ಪರ ತಮಿಳುನಾಡಿನಲ್ಲಿ ಪ್ರಚಾರ ನಿರತರಾಗಿದ್ದಾರೆ.
ತಮಿಳುನಾಡಿನಲ್ಲಿ ಇಂದು ಪ್ರಚಾರ ಮುಗಿದ ನಂತರ ನಾಳೆ ಜೆಪಿ ನಡ್ಡಾ ಅವರು ಕೇರಳದ ಕಣ್ಣೂರಿನಲ್ಲಿ ಬಿಜೆಪಿ ಪರ ಪ್ರಚಾರ ನಡೆಸಲಿದ್ದಾರೆ.