ತ್ವರಿತಗತಿಯಲ್ಲಿ ಕಡತಗಳ ವಿಲೇಗೆ ಒತ್ತು ಕೊಡಿ: ರಾಮಚಂದ್ರನ್ ಆರ್

ಬೀದರ ನ 4: ಸಾರ್ವಜನಿಕರು ಕಚೇರಿಗೆ ಸಲ್ಲಿಸುವ ಪ್ರತಿಯೊಂದು ಕಡತಗಳನ್ನು ಕಾಲಮಿತಿಯೊಳಗಡೆ ವಿಲೇವಾರಿಗೊಳಿಸಲು ಗಮನ ಕೊಡಬೇಕು ಎಂದು ಜಿಲ್ಲಾಧಿಕಾರಿಗಳಾದ ರಾಮಚಂದ್ರನ್ ಆರ್ ಅವರು ಅಧಿಕಾರಿಗಳು ಮತ್ತು ಸಿಬ್ಬಂದಿಗೆ ತಿಳಿಸಿದರು.
ನವೆಂಬರ್ 2ರಂದು ಹುಮನಾಬಾದ್ ತಾಲೂಕಿನಲ್ಲಿ ಪ್ರವಾಸ ಕೈಗೊಂಡ ವೇಳೆಯಲ್ಲಿ ಪಟ್ಟಣದ ತಹಸೀಲ್ ಕಚೇರಿಗೆ ಭೇಟಿ ನೀಡಿದ ವೇಳೆ ಅವರು ಮಾತನಾಡಿದರು.
ತಹಸೀಲ್ ಕಚೇರಿಯ ನಾನಾ ಶಾಖೆಗಳಿಗೆ ಭೇಟಿ ನೀಡಿದ ಜಿಲ್ಲಾಧಿಕಾರಿಗಳು, ಆಯಾ ಶಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಮಾತನಾಡಿಸಿ ಅವರ ಕಾರ್ಯವೈಖರಿಯ ಬಗ್ಗೆ ತಿಳಿದುಕೊಂಡರು.
ಜನರು ಅಂದರೇನೆ ಸರ್ಕಾರ. ನಾವು ಜನಸೇವಕರು. ಇದನ್ನು ಅರಿತು ನಾವು ಪ್ರಾಮಾಣಿಕವಾಗಿ ಕಚೇರಿಯಲ್ಲಿ ಕೆಲಸ ಮಾಡಬೇಕು. ಸರ್ಕಾರದಿಂದ ನಾನಾ ಸೌಲಭ್ಯಗಳನ್ನು ಕೋರಿ ಬರುವ ಸಾರ್ವಜನಿಕರೊಂದಿಗೆ ಅಧಿಕಾರಿಗಳು ಹಾಗು ಸಿಬ್ಬಂದಿಯು ಸರಿಯಾಗಿ ನಡೆದುಕೊಳ್ಳಬೇಕು. ಜನರ ಅಹವಾಲನ್ನು ತಾಳ್ಮೆಯಿಂದ ಆಲಿಸಬೇಕು ಎಂದು ಇದೆ ವೇಳೆ ಜಿಲ್ಲಾಧಿಕಾರಿಗಳು ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಸಲಹೆ ಮಾಡಿದರು.
ಕಚೇರಿ ಸೌಂದರ್ಯೀಕರಣಕ್ಕೆ ಒತ್ತು ಕೊಡಿ: ತಹಸೀಲ್ ಕಚೇರಿಯ ಒಳಾಂಗಣ ಮತ್ತು ಹೊರಾಂಗಣದಲ್ಲಿ ಸಂಚರಿಸಿದ ಜಿಲ್ಲಾಧಿಕಾರಿಗಳು, ಕಚೇರಿಯ ಕಟ್ಟಡವನ್ನು ಸದಾಕಾಲ ಶುಚಿಯಾಗಿಟ್ಟುಕೊಳ್ಳಬೇಕು. ತಾವು ಕುಳಿತುಕೊಳ್ಳುವ ಆಯಾ ಕಡೆಗಳಲ್ಲಿ ಕಡತಗಳನ್ನು ಶಿಸ್ತಿನಿಂದ ಇಡಬೇಕು ಎಂದು ಕಚೇರಿಯಲ್ಲಿದ್ದ ಎಲ್ಲ ಸಿಬ್ಬಂದಿಗೆ ಸಲಹೆ ಮಾಡಿದರು. ತಹಸೀಲ್ ಕಚೇರಿಯ ಗೋಡೆಯ ಮೇಲಿನ ವರ್ಲಿ ಕಲೆಯನ್ನು ಉಳಿಸಿಕೊಂಡು ಹೋಗಲು ತಿಳಿಸಿದರು.
ಮೆಚ್ಚುಗೆ: ಶಾಸಕರಾದ ರಾಜಶೇಖರ ಪಾಟೀಲ ಅವರು ವಿಶೇಷ ಪ್ರಯತ್ನ ವಹಿಸಿ, ಕೆಕೆಆರ್ ಡಿಬಿಯ ಅನುದಾನದಿಂದ ತಹಸೀಲ್ ಕಚೇರಿಯ ಮುಂದೆ ಅಚ್ಚುಕಟ್ಟಾಗಿ ನಿರ್ಮಾಣಗೊಂಡಿದ್ದ ರಸ್ತೆಯನ್ನು ನೋಡಿ ಜಿಲ್ಲಾಧಿಕಾರಿಗಳು ಇದೆ ವೇಳೆ ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ರುದ್ರೇಶ ಗಾಳಿ, ಹುಮನಾಬಾದ್ ತಹಸೀಲ್ದಾರರಾದ ನಾಗಯ್ಯ ಹಿರೇಮಠ ಹಾಗೂ ಇತರರು ಇದ್ದರು.