ತ್ರಿಹಾರ್ ಜೈಲಿನಲ್ಲಿ ವಿಐಪಿ ಸತ್ಕಾರ

ನವದೆಹಲಿ, ನ. ೧೯- ಆಮ್ ಆದ್ಮಿ ಪಕ್ಷದ ಸಚಿವ ಸತೇಂದ್ರ ಜೈನ್ ಅವರಿಗೆ ತ್ರಿಹಾರ್ ಜೈಲಿನಲ್ಲಿ ವ್ಯಕ್ತಿಯೊಬ್ಬರು ಮಸಾಜ್ ಮಾಡುತ್ತಿರುವ ಹಳೆಯ ವಿಡಿಯೋ ತುಣುಕನ್ನು ಬಿಜೆಪಿ ಇಂದು ಬಿಡುಗಡೆ ಮಾಡಿದೆ.
ಜೈಲಿನಲ್ಲಿ ಸತೇಂದ್ರ ಅವರಿಗೆ ವಿಐಪಿ ಸೌಕರ್ಯ ನೀಡಿರುವ ಆರೋಪದ ಮೇಲೆ ಕೆಲ ದಿನಗಳ ಹಿಂದೆ ತ್ರಿಹಾರ್ ಜೈಲಿನ ವರಿಷ್ಠಾಧಿಕಾರಿ ಅಜಿತ್ ಕುಮಾರ್ ಅವರನ್ನು ಅಮಾನತು ಗೊಳಿಸಲಾಗಿತ್ತು. ಇದರ ಬೆನ್ನಲ್ಲೇ ಮತ್ತೊಂದು ವಿಡಿಯೋ ಬಿಡುಗಡೆಯಾಗಿದೆ. ಈ ವಿಡಿಯೋ ಹಳೆಯದಾಗಿದ್ದು, ಘಟನೆ ಸಂಬಂಧಿಸಿದಂತೆ ಅಧಿಕಾರಿಗಳು ಮತ್ತು ಜೈಲು ಸಿಬ್ಬಂದಿ ವಿರುದ್ಧ ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ. ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ಸತೇಂದ್ರ ಅವರಿಗೆ ಜೈಲಿನಲ್ಲಿ ವಿಐಪಿ ಸೌಕರ್ಯ ನೀಡಲಾಗುತ್ತಿದೆ. ಬಂಧಿಖಾನೆಯಲ್ಲಿ ಮಸಾಜ್ ಮಾಡುವ ಸೌಲಭ್ಯಗಳನ್ನು ನೀಡಲಾಗುತ್ತಿದೆ ಎಂದು ಜಾರಿ ನಿದೇಶನಾಲಯ ಆರೋಪಿಸಿದೆ.
ಜೈಲಿನಲ್ಲಿ ಐಷಾರಾಮಿ ಜೀವನ ನಡೆಸಿರುವ ಕುರಿತು ಹಣಕಾಸು ಸಂಸ್ಥೆ ನ್ಯಾಯಾಲಯಕ್ಕೆ ಪುರಾವೆಗಳನ್ನು ಸಲ್ಲಿಸಿದೆ. ಅಪರಿಚಿತ ವ್ಯಕ್ತಿಗಳು ಸತೇಂದ್ರ ಜೈಲಿಗೆ ಮಸಾಜ್ ಹಾಗೂ ವಿಶೇಷ ಆಹಾರವನ್ನು ನೀಡಲಾಗುತ್ತಿದೆ ಎಂದು ಇಡಿ ಪರ ಹಾಜರಾದ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್.ವಿ. ರಾಜು ಹೇಳಿದ್ದಾರೆ. ಈ ಹಿಂದೆ ಜೈನ್‌ಗೆ ವಿಶೇಷ ಸೌಲಭ್ಯ ನೀಡಿದ ಆರೋಪಗಳನ್ನು ಆಪ್ ತಳ್ಳಿ ಹಾಕಿತ್ತು. ಈ ಆರೋಪಗಳು ಆಧಾರರಹಿತ ಎಂದು ತಿರುಗೇಟು ನೀಡಿತ್ತು.