ತ್ರಿಶಂಕು ಸ್ಥಿತಿಯಲ್ಲಿ ಮಕ್ಕಳು, ಶಿಕ್ಷಕರು ಆಟಕ್ಕಿರದ ನಿರ್ಬಂಧ ಪಾಠಕ್ಕೆ

ಹೊಸಪೇಟೆ ಡಿ 30 :ಆಯಾ ವಿಷಯಗಳ ಕುರಿತ ಭೋಧನೆ, ಕಥೆ ಹೇಳುವುದು, ಗ್ರಂಥಾಲಯಕ್ಕೆ ಕರೆದೊಯ್ಯುವುದು, ಮಕ್ಕಳನ್ನು ಒಟ್ಟುಗೂಡಿಸಿ ಆಟವಾಡಿಸುವುದು ಜೊತೆಗೆ ಗಾರ್ಡನಿಂಗ್ ಮಾಡಿಸುವುದು ಇದೆಲ್ಲವನ್ನು ಶಿಕ್ಷಕರು ಮಕ್ಕಳನ್ನು ಒಟ್ಟಿಗಿಸಿ ಮಾಡಬೇಕು. ಆದರೆ ಶಾಲೆಗೆ ಕರೆಸಿ ಪಾಠ ಮಾತ್ರ ಮಾಡುವಂತಿಲ್ಲ. ಇದು ನೂತನವಾಗಿ ಶಿಕ್ಷಣ ಇಲಾಖೆ ಹೊರಡಿಸಿರುವ ಕಾರ್ಯಪಟ್ಟಿ.
ಕೋವಿಡ್19 ಸಾಂಕ್ರಾಮಿಕ ರೋಗ ಭಾಧೆಯಿಂದ ಪ್ರಪಂಚ ಸ್ತಬ್ಧವಾಗಿರುವುದಲ್ಲದೇ ಪ್ರತಿಯೊಂದು ಕ್ಷೇತ್ರದಲ್ಲೂ ಮಾರಕ ಬದಲಾವಣೆಗಳು ಉಂಟಾಗಿವೆ. ಅದರಲ್ಲೂ ಶಿಕ್ಷಣ ಇಲಾಖೆಯಲ್ಲಿ ಉಂಟಾದ ಪ್ರತಿಕೂಲ ಪರಿಣಾಮ ಭವಿಷ್ಯದ ಬಗ್ಗೆ ಕಂಗಾಲಾಗುವಂತೆ ಮಾಡಿದೆ.
ಬೇರೆಲ್ಲಾ ಕ್ಷೇತ್ರದಲ್ಲಿನ ವಾತಾವರಣ ಕೋವಿಡ್19 ಬಂದಾಗಿನಿಂದ ಸಾವರಿಸಿಕೊಂಡು ಸದ್ಯ ಒಂದು ಹಂತದಲ್ಲಿ ಚೇತರಿಕೆ ಕಾಣುತ್ತಿದ್ದರೂ. ಶಿಕ್ಷಣ ಕೇತ್ರದಲ್ಲಿ ಮಾತ್ರ ಪ್ರತಿದಿನ ಪರಿಸ್ಥಿಗಳನ್ನು ನಿಭಾಯಿಸುವಲ್ಲಿ ಪರಿತಾಪ ಅನುಭವಿಸುವಂತಾಗಿದೆ. ಚಿಕ್ಕ ವಯಸ್ಸಿನ ಮಕ್ಕಳಿಗೆ ನೇರವಾಗಿ ಉತ್ತೀರ್ಣಗೊಳಿಸಿದ್ದರೂ, ಶೈಕ್ಷಣಿಕ ಕ್ಷೇತ್ರದಲ್ಲೇ ಮಹತ್ವದ ಘಟ್ಟಗಳಾಗಿರುವ ಎಸ್.ಎಸ್.ಎಲ್.ಸಿ, ದ್ವಿತೀಯ ಪಿಯುಸಿ ಹಾಗೂ ಅಂತಿಮ ವರ್ಷಗಳ ವೃತ್ತಿಪರ ಕೋರ್ಸ್ ಪರೀಕ್ಷೆಗಳು ಸಹ ಒಂದೆಡೇ ನಡೆಸಲಾಗದೇ ಮತ್ತೊಂದೆಡೆ ನೇರವಾಗಿ ಮುಂದಿನ ಹಂತಕ್ಕೆ ತೇರ್ಗಡೆಗೊಳಿಸಲಾಗದೇ ಸರ್ಕಾರ ಮತ್ತು ಶಿಕ್ಷಣ ಇಲಾಖೆಯು ಸಹ ಕಾಲಾವಕಾಶವನ್ನು ಪಡೆದುಕೊಂಡು ಸುದೀರ್ಘ ಚಿಂತನೆಯಲ್ಲಿ ತೊಡಗಿದೆ. ಇವುಗಳ ಮಧ್ಯೆ ಪ್ರಾಥಮಿಕ ಶಾಲೆಗಳಿಗೆ ಅದರಲ್ಲೂ ಗ್ರಾಮ ಮಟ್ಟದ ಶಾಲೆಗಳಿಗೆ ಪ್ರತಿಬಾರಿ ಹೊಸ ಹೊಸ ನಿಬಂಧನೆಗಳನ್ನು ಯೋಜಿತ ಕಾರ್ಯಗಳನ್ನು ನೀಡುತ್ತಿವೆ.
ಪಾಠಕ್ಕಿರದ ನಿರ್ಬಂಧ ಆಟಕ್ಕೆ: ಶಾಲೆಗಳಿಗೆ ಕರೆಸಿ ಪಾಠ ಮಾಡುವುದಕ್ಕೆ ಒಂಬತ್ತು ತಿಂಗಳವರೆಗೂ ಸರ್ಕಾರ ನಿಷೇಧ ಹೇರಿತ್ತು. ಪರ್ಯಾಯವಾಗಿ ಮಕ್ಕಳಿಗೆ ನೇರವಾಗಿಯೇ ಮುಂಬಡ್ತಿಯನ್ನು ನೀಡಲಾಗಿತ್ತು. 10ನೇ ಮತ್ತು ದ್ವಿತೀಯ ವಿದ್ಯಾರ್ಥಿಗಳಿಗೆ ಮಾತ್ರ ಪರೀಕ್ಷೆಗಳನ್ನು ನಡೆಸಿ ಯಶಸ್ವಿಯಾಗಿತ್ತು. ಉಳಿದ ವಿದ್ಯಾರ್ಥಿಗಳಿಗೆ ಆನ್ಲೈನ್ ತರಗತಿಗಳ ಮೂಲಕ ಬೋಧನೆ ನಡೆಸಲಾಗಿದ್ದರೂ, ಹಳ್ಳಿಗಳಲ್ಲಿನ ಮಕ್ಕಳಿಗೆ ಹಾಗೂ ಆನ್ಲೈನ್ ಸೌಲಭ್ಯ ವಂಚಿತ ಮಕ್ಕಳ ಸಲುವಾಗಿ ಸರ್ಕಾರವೇ ವಿದ್ಯಾಗಮ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಕಾರ್ಯಕ್ರಮ ಯಶಸ್ವಿಯಾದರೂ ಹೆಚ್ಚಾದ ಕೋವಿಡ್19 ಪ್ರಕರಣಗಳಿಂದ ವಿದ್ಯಾಗಮವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿತು.
ಗ್ರಾಮೀಣ ಭಾಗದ ಶಾಲೆಗಳಿಗೆ ನೂತನವಾಗಿ ಓದುವ ಬೆಳಕು ಕಾರ್ಯಕ್ರಮ ಜಾರಿಗೊಳಿಸಿದ ಸರ್ಕಾರವು ಗ್ರಂಥಾಲಯಗಳಿಗೆ ಮಕ್ಕಳನ್ನು ನೋಂದಾಯಿಸಿ ಪುಸ್ತಕ ಓದಿಸಲು ಪ್ರೇರೆಪಿಸುವುದು, ಅದೇ ರೀತಿಯಾಗಿ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕಗಳ ಜೊತೆ ಇತರ ಪುಸ್ತಕಗಳನ್ನು, ವಿವಿಧ ಮಹನೀಯರ ಪುಸ್ತಕಗಳನ್ನು ಓದಿಸಿ ನಂತರ ಅದರ ಸಾರಾಂಶ ಬರೆಸುವುದು. ಪುಸ್ತಕ ಜೋಳಿಗೆ ಮೂಲಕ ಪುಸ್ತಕ ಸಂಗ್ರಹ ಮಾಡುವ ಕಾರ್ಯಕ್ರಮವನ್ನು ಶಿಕ್ಷಕರಿಗೆ ಸುತ್ತೋಲೆ ಮೂಲಕ ನೀಡಲಾಗಿದೆ. ಸೀಮಿತ ಮಕ್ಕಳನ್ನು ಒಟ್ಟುಗೂಡಿಸಿ ಬೋಧನೆ, ಕತೆ ಹೇಳುವುದು, ಗಂಥಾಲಯ, ಕ್ರೀಡೆ ಹಾಗೂ ಗಾರ್ಡನಿಂಗ್ ನಡೆಸಲು ಶಿಕ್ಷಕರಿಗೆ ಸೂಚಿಸಿದೆ. ಇದೆಲ್ಲಾ ಕಾರ್ಯಕ್ರಮಗಳನ್ನು ಸುರಕ್ಷತೆಯಿಂದಲೇ ನಡೆಸಲು ಸಹ ಸೂಚಿಸಿದೆ. ಮಕ್ಕಳನ್ನು ಸೇರಿಸಿಕೊಂಡು ಆಟವಾಡಿಸಲು ಇರದ ನಿರ್ಬಂಧ ಶಾಲೆಗೆ ಕರೆಸಿ ಪಾಠ ಮಾಡಲು ಏಕಿದೆ ಎಂಬುದು ಕೆಲ ಶಿಕ್ಷಕರ ಪ್ರಶ್ನೆಯಾಗಿದೆ.
ವಿದ್ಯಾಗಮವೇ ಚಂದ ಎನ್ನುತಿದೆ ಶಿಕ್ಷಕವರ್ಗ: ಕೋವಿಡ್19 ಸಾಂಕ್ರಾಮಿಕ ಹಿನ್ನಲೆಯಲ್ಲಿ ಹಮ್ಮಿಕೊಂಡಿದ್ದ ವಿದ್ಯಾಗಮ ಕಾರ್ಯಕ್ರಮವನ್ನು ಅದೇ ಕೋವಿಡ್19 ಕಾರಣವೊಡ್ಡಿ ಸ್ಥಗಿತಗೊಳಿಸಿತ್ತು. ಕೆಲವು ಕಡೆಗಳಲ್ಲಿ ಪ್ರಕರಣಗಳು ಕಂಡುಬಂದರೂ ವಿದ್ಯಾಗಮ ಕಾರ್ಯಕ್ರಮವೇ ಸೂಕ್ತವಾಗಿತ್ತು ಎನ್ನುತಿದೆ ಕೆಲಶಿಕ್ಷಕ ವೃಂದ.
ಜ.01ರಿಂದ ಶಾಲೆ ಶುರು: ಸರಿಸುಮಾರು 09 ತಿಂಗಳ ಕಾಲ ಶಾಲಾ ಕಾಲೇಜುಗಳು ಪುನಃ ತೆರೆಯುತ್ತಿವೆ. ಯುಜಿಸಿ ಮಾರ್ಗಸೂಚಿ ಅನ್ವಯ ಅಂತಿಮ ವರ್ಷದ ಪದವಿ ಹಾಗೂ ಸ್ನಾತಕೋತ್ತರ ತರಗತಿಗಳು ಈಗಾಗಲೇ ಶುರುವಾಗಿದ್ದರು. ವಿದ್ಯಾರ್ಥಿಗಳ ಗೈರು ಹೆಚ್ಚೇ ಇದೆ. ಇನ್ನೂ ಜ.01ರಿಂದ ಎಲ್ಲಾ ಶಾಲೆ ಸಹ ಪುನಾರಾರಂಭವಾಗುತ್ತಿದ್ದು, ವಿದ್ಯಾರ್ಥಿಗಳನ್ನು ಸ್ವಾಗತಿಸಲು ಶಾಲೆಗಳು ಹಾಗೂ ಬೋಧಕ ವೃಂದ ಸಜ್ಜಾಗಿದೆ.
ಕೋವಿಡ್19 ಎರಡನೇ ಅಲೆಯ ಮಧ್ಯದಲ್ಲೂ ವ್ಯಾಪಕ ಪರ-ವಿರೋಧಗಳ ನಡುವೆ ಶಾಲೆಗಳು ಆರಂಭವಾಗುತ್ತಿದ್ದು, ಜಿಲ್ಲೆಯಲ್ಲಿಯೂ ಸಹ ಈಗಾಗಲೇ ಶಿಕ್ಷಣ ಇಲಾಖೆಯ ಮಾರ್ಗಸೂಚಿ ಅನ್ವಯ ಶಾಲಾರಂಭಕ್ಕೆ ಸಿದ್ಧತೆ ನಡೆಯುತ್ತಿದೆ. ಅದೇ ರೀತಿಯಾಗಿ ವಿದ್ಯಾಗಮ ಕಾರ್ಯಕ್ರಮವು ಸಹ 6 ರಿಂದ 9ನೇ ತರಗತಿಗಳಿಗೆ ಜ.01ರಿಂದ ಹಾಗೂ 1 ರಿಂದ 5ನೆ ತರಗತಿಗಳಿಗೆ ಜ.14ರಿಂದ ಆರಂಭಕ್ಕೆ ಸುತ್ತೋಲೆ ಹೊರಡಿಸಲಾಗಿದೆ.
ಒಟ್ಟಾರೆಯಾಗಿ ಭವಿಷ್ಯದ ಹಾಗೂ ಕರ್ತವ್ಯದ ತ್ರಿಶಂಕು ಸ್ಥಿತಿಯಲ್ಲಿದ್ದ ವಿದ್ಯಾರ್ಥಿಗಳ, ಶಿಕ್ಷಕರ ವೃಂದಕ್ಕೆ ಶಾಲಾರಂಭ ಸಾಫಲತೆ ನೀಡುವುದೋ ಕಾದುನೋಡಬೇಕಿದೆ.