ತ್ರಿವೇಣಿ ಸಂಗಮ ಕ್ಷೇತ್ರದ ಅಭಿವೃದ್ಧಿಗೆ ನಾನು ಬದ್ಧ

ಕೆ.ಆರ್.ಪೇಟೆ.ಮಾ.15: ಮೂರು ನದಿಗಳು ಒಂದಾಗಿ ಸೇರುವ ಪವಿತ್ರ ತ್ರಿವೇಣಿ ಸಂಗಮ ಕ್ಷೇತ್ರವು ಮುಂದಿನ ದಿನಗಳಲ್ಲಿ ರಾಜ್ಯದ ಸುಪ್ರಸಿದ್ಧ ಯಾತ್ರಾ ಸ್ಥಳವಾಗಿ ಅಭಿವೃದ್ಧಿಯಾಗಲಿದೆ. ತ್ರಿವೇಣಿ ಸಂಗಮ ಕ್ಷೇತ್ರದ ಅಭಿವೃದ್ಧಿಗೆ ನಾನು ಬದ್ಧನಿದ್ದೇನೆ. ರಸ್ತೆ, ವಿದ್ಯುತ್, ಕುಡಿಯುವ ನೀರು ಸೇರಿದಂತೆ ಕ್ಷೇತ್ರದ ಅಭಿವೃದ್ಧಿಗೆ ಬೇಕಾದ ಎಲ್ಲಾ ಮೂಲಭೂತ ಸೌಲಭ್ಯಗಳನ್ನು ಒದಗಿಸಿಕೊಡಲಾಗುವುದು ಎಂದು ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸಿ.ನಾರಾಯಣಗೌಡ ಹೇಳಿದರು.
ಅವರು ತಾಲೂಕಿನ ಪುರ, ಅಂಬಿಗರಹಳ್ಳಿ ಮತ್ತು ಸಂಗಾಪುರ ಗ್ರಾಮಗಳ ಸಮೀಪದಲ್ಲಿರುವ ಪವಿತ್ರ ತ್ರಿವೇಣಿ ಸಂಗಮ ಕ್ಷೇತ್ರದಲ್ಲಿ ಮಹಾ ಶಿವರಾತ್ರಿಯ ಅಂಗವಾಗಿ ಆಯೋಜಿಸಿದ್ದ ಜಾಗರಣೆಯ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಉದ್ಘಾಟಿಸಿ ನೆರೆದಿದ್ದ ಭಕ್ತರನ್ನು ಉದ್ಧೇಶಿಸಿ ಮಾತನಾಡಿದರು.
ಹೇಮಾವತಿ, ಕಾವೇರಿ ಮತ್ತು ಲಕ್ಷ್ಮಣ ತೀರ್ಥ ಸೇರಿದಂತೆ ಮೂರು ನದಿಗಳು ಒಂದಾಗಿ ಸೇರುವ ಪವಿತ್ರ ತ್ರಿವೇಣಿ ಸಂಗಮ ಕ್ಷೇತ್ರದ ಮಣ್ಣಿಗೆ ವಿಶೇಷವಾದ ಶಕ್ತಿಯಿದೆ. ಸಂಗಮನಾಥಸ್ವಾಮಿ, ಪಾರ್ವತಿ ಅಮ್ಮ ಮತ್ತು ಬಾಲಕ ಮಹದೇಶ್ವರರು ಪವಾಡ ಮಾಡಿರುವ ಈ ನೆಲಕ್ಕೆ ಅಪಾರವಾದ ಶಕ್ತಿಯಿದೆ. ಮುಂದಿನ ದಿನಗಳಲ್ಲಿ ಸಂಗಮ ಕ್ಷೇತ್ರವು ರಾಜ್ಯದಲ್ಲಿಯೇ ಮಾದರಿಯಾಗಿ ತೀರ್ಥಕ್ಷೇತ್ರವಾಗಿ ಅಭಿವೃದ್ಧಿಹೊಂದಲಿದೆ. ಆದ್ದರಿಂದ ಸಂಗಮೇಶ್ವರ ಕ್ಷೇತ್ರದ ಭಕ್ತರು ಅಭಿವೃದ್ಧಿಗೆ ಕೈಜೋಡಿಸಿ ಶ್ರೀಕ್ಷೇತ್ರವು ತಾನೇತಾನಾಗಿ ಅಭಿವೃದ್ಧಿಯಾಗುತ್ತದೆ
ಆದ್ದರಿಂದ ತ್ರಿವೇಣಿ ಸಂಗಮ ಕ್ಷೇತ್ರದ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ದುಡಿಯುತ್ತಿರುವ ರಾಷ್ಟ್ರಪ್ರಶಸ್ತಿ ಪುರಸ್ಕೃತ ಅಂ.ಚಿ.ಸಣ್ಣಸ್ವಾಮಿಗೌಡರು ಹತಾಶರಾಗಬೇಕಿಲ್ಲ, ನೀವು ನೇತೃತ್ವ ವಹಿಸಿಕೊಂಡು ಕ್ಷೇತ್ರಕ್ಕೆ ಅತೀ ಜರೂರಾಗಿ ಆಗಬೇಕಾಗಿರುವ ಕೆಲಸ-ಕಾರ್ಯಗಳ ಬಗ್ಗೆ ಮಾಹಿತಿ ನೀಡಿ ನಾನು ನಿಮ್ಮೊಂದಿಗೆ ಇರುತ್ತೇನೆ. ಈ ಹಿಂದೆ ನಡೆದ ಮಹಾಕುಂಭ ಮೇಳದಲ್ಲಿ ಲಕ್ಷ-ಲಕ್ಷ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಪಣ್ಯಸ್ನಾನ ಮಾಡಿದರು.
ನಿರೀಕ್ಷೆಗೂ ಮೀರಿ ಕುಂಭಮೇಳವು ಯಶಸ್ವಿಯಾ ಯಿತು. ನಾನು ಮಹದೇಶ್ವರರ ದೇವಸ್ಥಾನದ ಕಾಮಗಾರಿಗೆ 10 ಲಕ್ಷರೂ ನೀಡುತ್ತೇನೆ. ಇನ್ನಾರು ತಿಂಗಳಲ್ಲಿ ಕಾಮಗಾರಿ ಸಂಪೂರ್ಣಗೊಳಿಸಿ ದೇವಾಲಯವನ್ನು ಲೋಕಾರ್ಪಣೆಗೊಳಿಸೋಣ ಭಕ್ತರು ಸಹಕರಿಸಿದರೆ ಕುಂಭಮೇಳವನ್ನೂ ಮಾಡೋಣ ಆ ಭಗವಂತನಿದ್ದಾನೆ ಎಲ್ಲವೂ ಒಳ್ಳೆಯದಾಗುತ್ತದೆ ಸರ್ಕಾರದಿಂದ ಆಗಬೇಕಾದ ಕೆಲಸ-ಕಾರ್ಯಗಳನ್ನು ಮಂಜೂರು ಮಾಡಿಸಿ ಹಣಬಿಡುಗಡೆ ಮಾಡಿಸಿಕೊಡುತ್ತೇನೆ ಎಂದರು.
ಅಂ.ಚಿ.ಸಣ್ಣಸ್ವಾಮಿಗೌಡ ಮಾತನಾಡಿ ಕೃಷ್ಣರಾಜಸಾಗರದ ಹಿನ್ನೀರಿನಲ್ಲಿ ಬೋಟಿಂಗ್ ಸೌಲಭ್ಯ ಕಲ್ಪಿಸಿ ವೇಣುಗೋಪಾಲಸ್ವಾಮಿ ದೇವಸ್ಥಾನ, ಭೂವರಹನಾಥ ದೇವಸ್ಥಾನ, ತ್ರಿವೇಣಿ ಸಂಗಮ ಕ್ಷೇತ್ರಕ್ಕೆ ಭಕ್ತರು ಹೋಗಿ ಬರುವಂತೆ ಸೌಲಭ್ಯ ಮಾಡಿಕೊಟ್ಟರೆ ಪವಿತ್ರ ತ್ರಿವೇಣಿ ಸಂಗಮ ಕ್ಷೇತ್ರವು ಸಮಗ್ರವಾಗಿ ಅಭಿವೃದ್ಧಿಯಾಗುವ ಜೊತೆಗೆ ಪ್ರವಾಸೋಧ್ಯಮ ಕ್ಷೇತ್ರಕ್ಕೂ ಪೆÇ್ರೀತ್ಸಾಹ ದೊರೆಯುತ್ತದೆ. ಆದ್ದರಿಂದ ಮಾನ್ಯ ಸಚಿವರು ಕೃಷ್ಣರಾಜಸಾಗರದ ಹಿನ್ನೀರಿನಲ್ಲಿ ತ್ರಿವೇಣಿ ಸಂಗಮಕ್ಕೆ ಬೋಟಿಂಗ್ ಸೌಲಭ್ಯ ಕಲ್ಪಿಸಿಕೊಟ್ಟು ಸಹಾಯ ಮಾಡಬೇಕು. ಶ್ರೀ ಕ್ಷೇತ್ರಕ್ಕೆ ಭಕ್ತಾಧಿಗಳು ಬಂದು ಹೋಗಲು ಅನುಕೂಲವಾಗುವಂತೆ ರಸ್ತೆ, ವಿದ್ಯುತ್, ಶುದ್ಧ ಕುಡಿಯುವ ನೀರಿನ ಸೌಲಭ್ಯವನ್ನು ಕಲ್ಪಿಸಿಕೊಡಬೇಕು ಎಂದು ಮನವಿ ಮಾಡಿದರು.
ಮಂಡ್ಯ ಮೂಡಾ ಅಧ್ಯಕ್ಷ ಕೆ.ಶ್ರೀನಿವಾಸ್, ತಾ.ಸ.ನೌ ಸಂಘದ ಅಧ್ಯಕ್ಷ ಸಿ.ಕೆ.ಶಿವರಾಮೇಗೌಡ, ಗೌರವಾಧ್ಯಕ್ಷ ಪದ್ಮೇಶ್,ಕಸಾಪ ಅಧ್ಯಕ್ಷ ಪೂರ್ಣಚಂದ್ರ, ಪಿ.ಜೆ.ಕುಮಾರ್ ಸೋಮನಹಳ್ಳಿ ಗ್ರಾ.ಪಂ. ಅಧ್ಯಕ್ಷ ನಾಗರಾಜು, ಸಚಿವರ ಆಪ್ತ ಸಹಾಯಕರಾದ ದಯಾನಂದ, ಗ್ರಾಮಾಂತರ ಠಾಣೆಯ ಪಿಎಸ್‍ಐ ಸುರೇಶ್ ಸೇರಿದಂತೆ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು. ರಾತ್ರಿಯಿಡೀ ಪೂಜಾ ಕಾರ್ಯಕ್ರಮಗಳು ನೆರವೇರಿದವು ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರನ್ನು ಸನ್ಮಾನಿಸಿ ಗೌರವಿಸಲಾಯಿತು.