ಕಲಬುರಗಿ:ಜೂ.22:ಶಾರೀರಿಕವಾಗಿ ಮಾನಸಿಕವಾಗಿ ಮತ್ತು ಬೌಧ್ಧಿಕವಾಗಿ ಹೊಂದಾಣಿಸಿಕೊಂಡು ಜೀವನವನ್ನು ನಡೆಸುವ ಮಾರ್ಗವನ್ನು ದರ್ಶಿಸುವ ಸೂತ್ರವೇ ಯೋಗ. ಬದುಕನ್ನು ನಿರೋಗಿಯಾಗಿ ಜೀವಿಸುವ ಮಾರ್ಗವನ್ನು ಯೋಗದ ಮೂಲಕ ಕಲಿತುಕೊಳ್ಳಬಹುದು ಎಂದು ಖ್ಯಾತ ಆಯುರ್ವೇದ ವೈದ್ಯೆ ಮತ್ತು ಹಿಂಗುಲಾಂಬಿಕ ಆಯುರ್ವೇದ ಕಾಲೇಜಿನ ಅಧೀಕ್ಷಕರು ಮತ್ತು ಪ್ರಾಧ್ಯಾಪಕರಾದ ಡಾ.ವಿಜಯಲಕ್ಷ್ಮಿ.ಎನ್.ಹರನೂರ್ ಅವರು ತಿಳಿಸಿದರು.
ನಗರದ ಸಂಗಮೇಶ್ವರ ಮಹಿಳಾ ಮಂಡಳದಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ನಡೆದ ಸಮಾರಂಭದಲ್ಲಿ ಮಾತನಾಡಿದ ಅವರು ಮಾನವ ಕುಲಕ್ಕೆ ಭಾರತದ ಕೊಡುಗೆಯಾದ ಯೋಗವನ್ನು ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಭಾಗಿಯಾದ ಖ್ಯಾತ ಯೋಗ ಶಿಕ್ಷಕಿ ಮತ್ತು ಪ್ರಾಕೃತಿಕ ಚಿಕಿತ್ಸೆಯಲ್ಲಿ ವಿಶೇಷ ತರಬೇತಿಯನ್ನು ಹೊಂದಿದ ಡಾ.ನೇಹಾ.ಎಮ್.ಪಾಟೀಲ್ ಪ್ರಾಯೋಗಿಕವಾಗಿ ಯೋಗದ ಮೂಲಕ ಮಧುಮೇಹ ರೋಗ ಅತಿಯಾದ ರಕ್ತದೊತ್ತಡ ಇತ್ಯಾದಿಗಳನ್ನು ದೂರವಿಡಬಹುದೆಂದು ತಿಳಿಸಿದರು.
ಮಹಿಳಾ ಮಂಡಲದ ಅಧ್ಯಕ್ಷರಾದ ಶ್ರೀಮತಿ.ವೈಶಾಲಿ ದೇಶಮುಖ್,ಉಪಾಧ್ಯಕ್ಷೆ ಡಾ.ಮಹಾದೇವಿ ಮಲಕರೆಡ್ಡಿ, ಕಾರ್ಯದರ್ಶಿ ಶ್ರಿಮತಿ.ಶಾಂತಾ ಭೀಮ್ ಸೇನ್, ಸದಸ್ಯೆಯರಾದ ಶ್ರೀಮತಿ.ಸುಶ್ಮಾ ನವಣಿ, ಶ್ರಿಮತಿ.ಪುಷ್ಪಾ ಗುಗ್ವಾಡ್, ಶ್ರೀಮತಿ.ರೇಶ್ಮಾ, ಶ್ರೀಮತಿ.ನಿರ್ಮಲಾ ಪಾಟೀಲ್, ಶ್ರೀಮತಿ.ಶಾರದಾ ಭಟ್,ಡಾ.ಲಕ್ಶ್ಮೀ ಶಂಕರ್ ಜೋಶಿ, ಕುಮಾರಿ.ಶ್ವೇತಾ ಮತ್ತಿತರು ಇದ್ದರು.