ತ್ರಿವಿಧ ದಾಸೋಹಿ ಸಿದ್ಧಗಂಗಾ ಶ್ರೀಗಳ ಕಾರ್ಯ ಅವಿಸ್ಮರಣೀಯ : ಡಾ. ಕೋರೆ

ಔರಾದ್: ಜ.22:ಲೋಕಕಲ್ಯಾಣಕ್ಕಾಗಿ ದಣಿವರಿಯದೆ ತಮ್ಮ ಬದುಕನ್ನೇ ಮುಡುಪಾಗಿಟ್ಟು ಸಿದ್ದಗಂಗೆಯನ್ನು ಅಕ್ಷರಶಃ ಶಿಕ್ಷಣ ಕಾಶಿಯನ್ನಾಗಿಸಿ ವಿಶ್ವ ವಿಖ್ಯಾತಗೊಳಿಸಿದ ತ್ರಿವಿಧ ದಾಸೋಹಿ, ಕಾಯಕ ಯೋಗಿ, ನಡೆದಾಡುವ ದೇವರು ಎಂದೇ ನಾಡಿನ ಉದ್ದಗಲಕ್ಕೂ ಪ್ರಸಿದ್ದರಾಗಿದ್ದ ಲಿಂಗೈಕ್ಯ ಡಾ. ಶ್ರೀ ಶಿವಕುಮಾರ ಸ್ವಾಮೀಜಿ ಅವರ ಕಾರ್ಯ ಅವಿಸ್ಮರಣೀಯವಾದದ್ದು ಎಂದು ಉಪನ್ಯಾಸಕ ಡಾ. ಅಶೋಕ ಕೋರೆ ಹೇಳಿದರು.

ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ರವಿವಾರ ಡಾ. ಶಿವಕುಮಾರ ಸ್ವಾಮೀಜಿಯವರ ಪುಣ್ಯಸ್ಮರಣೆ ಹಾಗೂ ನಿಜಶರಣ ಅಂಬಿಗರ ಚೌಡಯ್ಯ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿದ್ವತ್ತಿಗೆ, ಜ್ಞಾನ ಸಂಪತ್ತಿಗೆ ಜಾತಿ ಆಧಾರವಲ್ಲ. ಅದು ಜಾತಿ, ಎಲ್ಲೆ ಮೀರಿ ಬೆಳೆಯಬಹುದು, ಯಾವುದೇ ವೃತ್ತಿಯಾದರೂ ಅದರ ಬಗ್ಗೆ ಕೀಳರಿಮೆ ಹೊಂದದೆ ಅಭಿಮಾನವಿರಬೇಕು. ಈ ಬಗ್ಗೆ ಅಂಬಿಗರ ಚೌಡಯ್ಯ ಅವರನ್ನು ನೋಡಿ ಕಲಿಯಬೇಕು. ಅಂಬಿಗ ವೃತ್ತಿ ಮಾಡುತ್ತಿದ್ದರೂ ತನ್ನ ಜ್ಞಾನ ದೀವಿಗೆಯಿಂದ ಜಗತ್ತಿಗೆ ದಿಗ್ದರ್ಶನ ಮಾಡಿದ ನಿಜಶಿವಶರಣ ಅವರಾಗಿದ್ದರು.

12ನೇ ಶತಮಾನದ ಬಸವಣ್ಣನವರ ಅನುಯಾಯಿಗಳಲ್ಲಿ ಅಂಬಿಗರ ಚೌಡಯ್ಯನವರು ಪ್ರಮುಕರಲ್ಲಿ ಒಬ್ಬರಾಗಿದ್ದರು ಅವರು ನೇರ, ನಿಷ್ಠೂರ, ತರ್ಕ ವಚನಗಳಿಂದ ಸಮಾಜದ ಅಂಕು-ಡೊಂಕುಗಳನ್ನು ತಿದ್ದುವಲ್ಲಿ ಶ್ರೇಷ್ಠರಾಗಿದ್ದರು ಎಂದು ಹೇಳಿದರು.

ಈ ಸಂದರ್ಭದಲ್ಲಿ ಉಪನ್ಯಾಸಕ ಡಾ. ಸಂಜೀವಕುಮಾರ ತಾಂದಳೆ, ಡಾ. ದಯಾನಂದ ಬಾವಗೆ, ವಿರಶಟ್ಟಿ ಸೇರಿದಂತೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.