ತ್ರಿವರ್ಣ ಧ್ವಜವು ಭಾರತದಲ್ಲಿರುವ ಎಲ್ಲರಿಗೂ ಒಂದೇ ಎಂದು ಸಾರುವ ಹೆಮ್ಮೆಯ ಸಂಕೇತ

ವಿಜಯಪುರ, ಆ.5-ಕೇಸರಿ, ಬಿಳಿ, ಹಸಿರು ಬಣ್ಣ ಹಾಗೂ ನಡುವೆ ಅಶೋಕ ಚಕ್ರ ಇರುವ ಭಾರತ ದೇಶದ ತ್ರಿವರ್ಣ ಧ್ವಜವು ಭಾರತದಲ್ಲಿರುವ ಎಲ್ಲರಿಗೂ ಒಂದೇ ಎಂದು ಸಾರುವ ಹೆಮ್ಮೆಯ ಗೌರವ ಹಾಗೂ ಸಮಾನತೆಯನ್ನು ಸಾರುವ ಸಂಕೇತದ ಚಿಹ್ನೆಯಾಗಿದೆ ಎಂದು ಭಾರತ ಸೇವಾದಳದ ವಲಯ ಸಂಘಟಿಕ ನಾಗೇಶ್ ಡೋಣೂರ ಅಭಿಮತ ವ್ಯಕ್ತಪಡಿಸಿದರು.

75ನೇ ಸ್ವಾತಂತ್ರ್ಯದ “ಅಮೃತ್ ಮಹೋತ್ಸವ” ಹರ್ ಘರ್ ತಿರಂಗಾ ಅಭಿಯಾನದಡೆಯಲ್ಲಿ ಭಾರತ್ ಸೇವಾದಳ ಜಿಲ್ಲಾ ಸಮಿತಿ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ವಿಜಯಪುರ ಇವರ ಸಂಯುಕ್ತ ಆಶ್ರಯದಲ್ಲಿ ವಿಜಯಪುರ ನಗರದ ಎಲ್ಲಾ ಶಾಲಾ ಕಾಲೇಜು ಮುಖ್ಯಸ್ಥರಿಗೆ ಸರ್ಕಾರಿ ಪದವಿಪೂರ್ವ ಕಾಲೇಜ್ ಸಭಾ ಭವನದಲ್ಲಿ ಗುರುವಾರ ಆಯೋಜಿಸಲಾದ ರಾಷ್ಟ್ರಧ್ವಜ, ರಾಷ್ಟ್ರಗೀತೆ ಮಾಹಿತಿ ಕಾರ್ಯಗಾರದಲ್ಲಿ ಮಾತನಾಡಿದರು.

ಹಾಗೇ ಅವರು ರಾಷ್ಟ್ರಧ್ವಜದ ನೀತಿ ಸಂಹಿತೆ, ಹಾಗೂ ನಿಯಮಗಳು, ಧ್ವಜಾರೋಹಣ, ಧ್ವಜಾಅವರೋಹಣ ಹಾಗೂ ರಾಷ್ಟ್ರ ಗೀತೆ ಕುರಿತು ಪ್ರಾತ್ಯಕ್ಷಿಕೆ ತರಬೇತಿ ನೀಡಿದರು.

ಕಾರ್ಯಕ್ರಮದಲ್ಲಿ ನಗರ ವಲಯ ಬಿ.ಇ.ಓ.ಎಮ್.ಬಿ ಮೋರಟಗಿ, ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಕೆ.ಜಿ ತೆಲಬಕ್ಕನವರ, ನಗರ ವಲಯ ದೈಹಿಕ ಶಿಕ್ಷಣಾಧಿಕಾರಿ ಎಸ್.ಜೆ ಬಿರಾದಾರ, ಶಿಕ್ಷಣ ಸಂಯೋಜಕ ಸುಭಾನಷರೀಪ ಆರ್, ಹಾಗೂ ವಿಜಯಪುರ ನಗರದ ಎಲ್ಲಾ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರು ಉಪಸ್ಥಿತರಿದ್ದರು.