ತ್ರಿಪುರ ವಿಧಾನಸಭೆಯಲ್ಲಿ ನೀಲಿ ಚಿತ್ರ ಗದ್ದಲ

ಅಗರ್ತಲಾ,ಜ.೮- ತ್ರಿಪುರಾ ವಿಧಾನಸಭೆಯ ಬಜೆಟ್ ಅಧಿವೇಶನದಲ್ಲಿ ನೀಲಿ ಚಿತ್ರದ ವಿಡಿಯೋ ನೋಡಿ ಸಿಕ್ಕಿಬಿದ್ದ ಬಿಜೆಪಿ ಶಾಸಕರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಪ್ರತಿಪಕ್ಷಗಳು ಶುಕ್ರವಾರ ಕೋಲಾಹಲ ಸೃಷ್ಟಿಸಿದರು.
ಇದರ ಪರಿಣಾಮವಾಗಿ, ಅಧಿವೇಶನದಲ್ಲಿ ಅಶಿಸ್ತಿನ ಆರೋಪದ ಮೇಲೆ ಸ್ಪೀಕರ್ ಐವರು ಶಾಸಕರನ್ನು ಅಮಾನತುಗೊಳಿಸಿದರು. ಹಿಂದಿನ ಅಧಿವೇಶನದಲ್ಲಿ ಬಿಜೆಪಿ ಶಾಸಕ ಜದಬ್ ಲಾಲ್ ನಾಥ್ ನೀಲಿ ಚಿತ್ರ ನೋಡಿ ಸಿಕ್ಕಿಬಿದ್ದಿದ್ದರು. ಬಿಜೆಪಿ ಶಾಸಕರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಸದನಕ್ಕೆ ಮುತ್ತಿಗೆ ಹಾಕಿದ ಪ್ರತಿಪಕ್ಷಗಳ ನಾಯಕರು ಕಲಾಪಕ್ಕೆ ಅಡ್ಡಿಪಡಿಸಿದ್ದರಿಂದ ಸ್ಪೀಕರ್ ಬಿಸ್ವ ಬಂಧು ಸೇನಾ ಅವರು ತಮ್ಮ ಸ್ಥಾನಗಳಿಗೆ ಮರಳುವಂತೆ ವಿಪಕ್ಷ ಸದಸ್ಯರಿಗೆ ಪದೇ ಪದೇ ಮನವಿ ಮಾಡಿದರು.
ಸಭಾಧ್ಯಕ್ಷರ ಮಾತನ್ನು ಕೇಳದೆ ಪ್ರತಿಭಟನೆ ಮುಂದುವರಿಸಿದ ಪ್ರತಿಪಕ್ಷಗಳ ಶಾಸಕರು ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಈ ವೇಳೆ ಸದನದಲ್ಲಿ ಗದ್ದಲ ಉಂಟಾಯಿತು. ಮೇಜುಗಳ ಮೇಲೆ ನಿಂತು ಶಾಸಕರು ಘೋಷಣೆಗಳನ್ನು ಕೂಗಿದರು ಎಂದು ತಿಳಿದುಬಂದಿದೆ.