ತ್ರಿಪುರಾದಲ್ಲಿ ಬಿಜೆಪಿ ದಾಳಿ ವಿರೋಧಿಸಿ ಕಮ್ಯುನಿಸ್ಟ್ ಕಾರ್ಯಕರ್ತರಿಂದ ಪ್ರತಿಭಟನೆ

ಕಲಬುರಗಿ.ಮಾ.07: ತ್ರಿಪುರಾ ರಾಜ್ಯದಲ್ಲಿ ಬಿಜೆಪಿಯು ಭಯೋತ್ಪಾದಕರಂತೆ ವಿರೋಧ ಪಕ್ಷದ ಕಾರ್ಯಕರ್ತರ ಮೇಲೆ ದಾಳಿ ಮಾಡುತ್ತಿದೆ ಎಂದು ಆರೋಪಿಸಿ ಭಾರತ್ ಕಮ್ಯುನಿಸ್ಟ್ (ಮಾರ್ಕ್‍ಸಿಸ್ಟ್) ಪಕ್ಷದ ಕಾರ್ಯಕರ್ತರು ಮಂಗಳವಾರ ನಗರದ ಸರ್ದಾರ್ ವಲ್ಲಭಬಾಯಿ ಪಟೇಲ್ ವೃತ್ತದಲ್ಲಿ ಪ್ರತಿಭಟನಾ ಪ್ರದರ್ಶನ ಮಾಡಿದರು.
ಕಾ, ಎಂ.ಬಿ. ಸಜ್ಜನ್, ಕಾ. ಭೀಮಶೆಟ್ಟಿ ಯಂಪಳ್ಳಿ, ಕಾ. ನಾಗಯ್ಯಸ್ವಾಮಿ, ಕಾ, ಗೌರಮ್ಮ ಪಾಟೀಲ್ ಮುಂತಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ತ್ರಿಪುರ ರಾಜ್ಯದಲ್ಲಿ ಆಡಳಿತ ಪಕ್ಷವಾದ ಬಿಜೆಪಿ ವಿಧಾನಸಭಾ ಚುನಾವಣೆಯಲ್ಲಿ ತನಗಾದ ಹಿನ್ನೆಡೆಯ ಹತಾಶೆಯಿಂದ ಫಲಿತಾಂಶದ ನಂತರ ಸಿಪಿಐಎಂ ಹಾಗೂ ಎಡ ಮತ್ತು ಪ್ರಜಾಸತ್ತಾತ್ಮಕ ಶಕ್ತಿಗಳು ಹಾಗೂ ವಿರೋಧ ಪಕ್ಷಗಳ ಕಾರ್ಯಕರ್ತರ ಮೇಲೆ ಹಾಗೂ ಅವರ ಆಸ್ತಿಗಳು, ಕಚೇರಿಗಳ ಮೇಲೆ ತೀವ್ರತರವಾದ ಭಯೋತ್ಪಾದಕ ಗುಂಡಾ ದಾಳಿಯನ್ನು ಮಾಡುತ್ತಿವೆ ಎಂದು ಪ್ರತಿಭಟನೆಕಾರರು ಆರೋಪಿಸಿದರು.
ತಕ್ಷಣವೇ ಗೂಂಡಾ ದಾಳಿಯನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದ ಅವರು, ಕೂಡಲೇ ಅಲ್ಲಿನ ಸರ್ಕಾರವು ಕಾನೂನು ಸುವ್ಯವಸ್ಥೆಯನ್ನು ಕಾಪಾಡಬೇಕು ಎಂದು ಒತ್ತಾಯಿಸಿದರು.
ಬಿಜೆಪಿ ಕಳೆದ ಚುನಾವಣೆಯಲ್ಲಿ ಗಳಿಸಿದುದಕ್ಕಿಂತ ಅದರ ಮತಗಳಿಕೆ ಈ ಬಾರಿ ಶೇಕಡಾ 10ರಷ್ಟು ಕಡಿತಗೊಂಡಿದೆ. ಗೆದ್ದ ಹನ್ನೊಂದು ಸ್ಥಾನಗಳನ್ನು ಕಳೆದುಕೊಂಡಿದೆ. ಅದಕ್ಕಾಗಿಯೇ ದುಷ್ಕøತ್ಯ ಎಸಗುತ್ತಿದೆ. ದಾಳಿಯಲ್ಲಿ ಸುಮಾರು ಜನರನ್ನು ಕೊಲ್ಲಲಾಗಿದೆ. ನೂರಾರು ಕಚೇರಿಗಳು ಹಾಗೂ ಆಸ್ತಿಗಳ ಮೇಲೆ ದಾಳಿ ಎಸಗಿ ಬೆಂಕಿ ಹಚ್ಚಲಾಗಿದೆ. ನೂರಾರು ಜನರು ಗಾಯಗೊಂಡಿದ್ದಾರೆ. ತಕ್ಷಣವೇ ದುಷ್ಕøತ್ಯದಲ್ಲಿ ತೊಡಿಗದವರನ್ನು ಬಂಧಿಸಬೇಕು ಎಂದು ಅವರು ಆಗ್ರಹಿಸಿದರು.
ಹತ್ಯೆಯಾದ ಸಂತ್ರಸ್ತ ಕುಟುಂಬಗಳಿಗೆ ತಲಾ 25 ಲಕ್ಷ ರೂ.ಗಳ ಪರಿಹಾರ ಕೊಡುವಂತೆ, ಗಾಯಗೊಂಡವರಿಗೆ ಹಾಗೂ ಆಸ್ತಿ ಹಾನಿಯಾದವರಿಗೆ ಸೂಕ್ತ ಪರಿಹಾರ ಘೋಷಿಸುವಂತೆ ಅವರು ಒತ್ತಾಯಿಸಿದರು.