
ಲಕ್ಷ್ಮೇಶ್ವರ,ಆ.30: ಸಮೀಪದ ಮುಕ್ತಿಮಂದಿರ ಧರ್ಮಕ್ಷೇತ್ರದಲ್ಲಿ ತ್ರಿಕೋಟಿ ಲಿಂಗ ಸ್ಥಾಪನೆಗೆ ಮುಹೂರ್ತ ಕೂಡಿ ಬಂದಿದ್ದು ಸೆಪ್ಟೆಂಬರ್ 13ರಂದು ಭೂಮಿಪೂಜೆ ನೆರವೇರಿಸಲಾಗುವುದು’ ಎಂದು ಕ್ಷೇತ್ರದ ಪಟ್ಟಾಧ್ಯಕ್ಷರಾದ ವಿಮಲರೇಣುಕ ವೀರಮುಕ್ತಿಮುನಿ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.
ಪಟ್ಟಣದ ರಂಭಾಪುರಿ ಜ.ವೀರಗಂಗಾಧರ ಸಮುದಾಯ ಭವನದಲ್ಲಿ ಜರುಗಿದ ಪೂರ್ವಭಾವಿ ಸಭೆಯಲ್ಲಿ ಅವರು ಈ ಮಾಹಿತಿ ನೀಡಿದರು. ಸೆಪ್ಟೆಂಬರ್ 13ರಂದು ಬೆಳಿಗ್ಗೆ 10ರಿಂದ 11ರ ಒಳಗಾಗಿ ಭೂಮಿಪೂಜೆ ನಡೆಯಲಿದ್ದು ಈ ಕಾರ್ಯಕ್ರಮಕ್ಕೆ ರಾಜ್ಯದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಸೇರಿದಂತೆ ಹಾಲಿ ಮತ್ತು ಮಾಜಿ ಸಚಿವರು, ಶಾಸಕರು, ಸಂಸದರು, ಮಾಜಿ ಮುಖ್ಯಮಂತ್ರಿಗಳು ಮತ್ತು ನಾಡಿನ ವಿವಿಧ ಮಠಗಳ ಹರಗುರು ಚರಮೂರ್ತಿಗಳು ಆಗಮಿಸುವರು' ಎಂದ ಅವರು
ಲಿಂ.ರಂ.ಜ. ವೀರಗಂಗಾಧರ ಸ್ವಾಮೀಜಿಯವರು ತ್ರಿಕೋಟಿ ಲಿಂಗ ಸ್ಥಾಪಿಸುವ ಕನಸು ಕಂಡಿದ್ದರು. ಅವರ ಕನಸು ಇದೀಗ ಈಡೇರುವ ದಿನ ಹತ್ತಿರವಾಗಿದೆ. ಈ ಮಹತ್ ಕಾರ್ಯಕ್ಕೆ ನಾಡಿನ ಎಲ್ಲ ಭಕ್ತರು ಕೈಜೋಡಿಸಬೇಕು’ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಮಾಜಿ ಶಾಸಕ ಜಿ.ಎಸ್. ಗಡ್ಡದೇವರಮಠರು ಮುಕ್ತಿಮಂದಿರದಲ್ಲಿ ವೈಜ್ಞಾನಿಕ ರೀತಿಯಲ್ಲಿ ತ್ರಿಕೋಟಿ ಶಿವಲಿಂಗ ಸ್ಥಾಪನೆ ನಡೆಯಲು ಎಲ್ಲ ವ್ಯವಸ್ಥೆ ಮಾಡಲಾಗುತ್ತಿದೆ. ತ್ರಿಕೋಟಿ ಲಿಂಗ ಸ್ಥಾಪನೆ ನಂತರ ಮುಕ್ತಿಮಂದಿರ ಒಂದು ಪ್ರಸಿದ್ಧ ಪ್ರವಾಸಿತಾಣ ಆಗಲಿದೆ'
ಭೂಮಿಪೂಜೆ ಸಮಾರಂಭದಲ್ಲಿ ವಿವಿಧ ಮಠಗಳ ಶಿವಾಚಾರ್ಯರು ಆಗಮಿಸಲಿದ್ದಾರೆ’ ಎಂದರು.
ಅಧ್ಯಕ್ಷತೆ ವಹಿಸಿದ್ದ ಮಾಜಿ ಶಾಸಕ ಜಿ.ಎಂ. ಮಹಾಂತಶೆಟ್ಟರ ಮಾತನಾಡಿ ಮುಕ್ತಿಮಂದಿರದಲ್ಲಿ ತ್ರಿಕೋಟಿ ಲಿಂಗ ಸ್ಥಾಪಿಸಬೇಕು ಎಂಬುದು ವೀರ ಗಂಗಾಧರ ಗುರುಗಳ ವೀರ ಸಂಕಲ್ಪ ಆಗಿತ್ತು. ಅವರ ಸಂಕಲ್ಪ ಈಡೇರುವ ನಿಟ್ಟಿನಲ್ಲಿ ಕೆಲಸ ಕಾರ್ಯಗಳು ನಡೆಯುತ್ತಿವೆ' ಎಂದ ಅವರು
ಮುಕ್ತಿಮಂದಿರದಲ್ಲಿ ನಿರಂತರವಾಗಿ ಅನ್ನ ದಾಸೋಹ ನಡೆಯುವಂತೆ ವ್ಯವಸ್ಥೆ ಮಾಡಬೇಕು’ ಎಂದು ಹೇಳಿದರು.
ವಿಧಾನಪರಿಷತ್ ಸದಸ್ಯ ಪ್ರೊ.ಎಸ್.ವಿ. ಸಂಕನೂರ, ಶಾಸಕ ಡಾ.ಚಂದ್ರು ಲಮಾಣಿ, ಎಸ್.ಪಿ. ಬಳಿಗಾರ, ಡಿ.ಬಿ. ಬಳಿಗಾರ, ಸೋಮಣ್ಣ ಡಾಣಗಲ್ಲ, ವಿ.ಜಿ. ಪಡಿಗೇರಿ, ವಿಜಯಣ್ಣ ಮಹಾಂತಶೆಟ್ಟರ, ಪೂರ್ಣಾಜಿ ಖರಾಟೆ, ಚನ್ನಪ್ಪ ಕೋಲಕಾರ, ಮಾತನಾಡಿದರು. ಈ ಸಂದರ್ಭದಲ್ಲಿ ಮಳೆಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ, ಚಂಬಣ್ಣ ಬಾಳಿಕಾಯಿ, ಬಸವರಾಜ ಬೆಂಡಿಗೇರಿ, ಬಸಣ್ಣ ಕೊಟಗಿ, ನಿಂಗಪ್ಪ ಬನ್ನಿ, ಜಯಕ್ಕ ಕಳ್ಳಿ, ಎಂ.ಸಿದ್ಧಲಿಂಗಯ್ಯ, ಎಸ್.ಪಿ. ಪಾಟೀಲ, ಬಸಣ್ಣ ಮೆಣಸಿನಕಾಯಿ, ಎಂ.ಕೆ. ಕಳ್ಳಿಮಠ, ಶೇಕಪ್ಪ ಹುರಕಡ್ಲಿ, ವಿರುಪಾಕ್ಷಪ್ಪ ಮುದಕಣ್ಣವರ ಇದ್ದರು.