‘ತ್ಯಾಜ್ಯ ವಿಂಗಡಿಸದೆ ಪಚ್ಚನಾಡಿಗೆ ತರುವಂತಿಲ್ಲ

ಮಂಗಳೂರು, ಅ.೨೯- ಘನತ್ಯಾಜ್ಯ ವಿಲೇವಾರಿಗೆ ಸಂಬಂಧಿಸಿ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿರುವ ಮಂಗಳೂರು ಮಹಾನಗರ ಪಾಲಿಕೆ, ಪಚ್ಚನಾಡಿ ಸಂಸ್ಕರಣಾ ಘಟಕಕ್ಕೆ ನಗರದ ಹೊರಗಿನಿಂದ ಬರುತ್ತಿರುವ ತ್ಯಾಜ್ಯ ವಿಂಗಡೆಯಾಗದೆ ಸ್ವೀಕರಿಸದಿರಲು ನಿರ್ಧರಿಸಿದೆ. ಮೇಯರ್ ದಿವಾಕರ ಪಾಂಡೇಶ್ವರ ಅಧ್ಯಕ್ಷತೆಯಲ್ಲಿ ನಡೆದ ಮನಪಾ ಸಾಮಾನ್ಯ ಸಭೆಯಲ್ಲಿ ಈ ಕುರಿತು ನಿರ್ಣಯ ಕೈಗೊಳ್ಳಲಾಗಿದೆ.
ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ವಾರ್ಡ್‌ಗಳಲ್ಲಿ ಈಗಾಗಲೇ ಮನೆಗಳ ತ್ಯಾಜ್ಯ ವಿಂಗಡಣೆ ಮೂಲಕ ಸಂಗ್ರಹಿಸಲು ಕ್ರಮ ವಹಿಸಲಾಗಿದೆ. ಇದೀಗ ಬಂಟ್ವಾಳ, ಉಳ್ಳಾಲ, ಕೋಟೆಕಾರು ಹಾಗೂ ಇತರ ೧೫ ಗ್ರಾಮ ಪಂಚಾಯತ್‌ಗಳ ತ್ಯಾಜ್ಯವನ್ನು ವಿಂಗಡಿಸದೆ ತರುವ ವಾಹನಗಳನ್ನು ಪಚ್ಚನಾಡಿ ತ್ಯಾಜ್ಯ ಘಟಕಕ್ಕೆ ಪ್ರವೇಶಿದಂತೆ ಕ್ರಮ ವಹಿಸಲಾಗುವುದು ಎಂದು ಆಯುಕ್ತ ಅಕ್ಷಯ್ ಶ್ರೀಧರ್‌ರವರು ಸಭೆಯಲ್ಲಿ ತಿಳಿಸಿದರು. ಸಭೆಯ ಆರಂಭದಲ್ಲಿ ಮೇಯರ್ ದಿವಾಕರ ಪಾಂಡೇಶ್ವರ ಮಾತನಾಡುತ್ತಾ, ಪಚ್ಚನಾಡಿ ತ್ಯಾಜ್ಯ ಕುಸಿತವಾದ ಮಂದಾರ ಪ್ರದೇಶದ ಸಂತ್ರಸ್ತ ರಿಗೆ ಪರಿಹಾರ ನೀಡುವ ಸಲುವಾಗಿ ಸರಕಾರದಿಂದ ೨೦ ಕೋಟಿ ರೂ. ಬಿಡುಗಡೆಯಾಗಿರುವ ಬಗ್ಗೆ ಅಭಿನಂದನೆ ಸಲ್ಲಿಸಿದರು. ಮಾಜಿ ಮೇಯರ್ ಭಾಸ್ಕರ್ ಕೂಡಾ ಅನುದಾನ ಬಿಡುಗಡೆಗೆ ಅಭಿನಂದನೆ ಸಲ್ಲಿಸುತ್ತಾ, ಸಂತ್ರಸ್ತರ ಭೂಮಿಗೆ ಉತ್ತಮ ಮೌಲ್ಯ ನೀಡಬೇಕು. ತಾತ್ಕಾಲಿಕ ವಸತಿ ಸಮುಚ್ಚಯದಲ್ಲಿ ವಾಸಿಸುತ್ತಿರುವವರಿಗೆ ಅದನ್ನ ಉಚಿತವಾಗಿ ನೀಡಬೇಕು ಎಂದು ಒತ್ತಾಯಿಸಿದರು. ವಿಪಕ್ಷ ನಾಯಕ ಅಬ್ದುಲ್ ರವೂಫ್ ಪ್ರತಿಕ್ರಿಯಿಸಿ, ಮಂದಾರ ವಿಷಯದಲ್ಲಿ ಸರಕಾರ ಪರಿಹಾರ ನೀಡುವಲ್ಲಿ ವಿಳಂಬ ಮಾಡಿದಾಗ ಸಂತ್ರಸ್ತರು ನ್ಯಾಯಾಲಯದ ಮೆಟ್ಟಿಲೇರಿದ್ದರು. ಆ ಸಂದರ್ಭ ನ್ಯಾಯಾಲಯ ಪಾಲಿಕೆಗೆ ಛೀಮಾರಿ ಹಾಕಿದ್ದಲ್ಲದೆ, ಪಾಲಿಕೆಯನ್ನು ಅಡವಿಟ್ಟಾದರೂ ಪರಿಹಾರ ನೀಡಬೇಕು ಎಂದು ಆದೇಶಿಸಿದಾಗ ಸರಕಾರ ಪರಿಹಾರ ನೀಡಲೇಬೇಕಾದ ಪರಿಸ್ಥಿತಿ ಎದುರಾಯಿತು. ಇಂತಹ ಪರಿಸ್ಥಿತಿಗೆ ಕಾರಣವಾದ ಅಧಿಕಾರಿಗಳ ವಿರುದ್ಧ ಮನಪಾ ಏನು ಕ್ರವು ಕೈಗೊಂಡಿದೆ ಎಂದು ಪ್ರಶ್ನಿಸಿದರು. ಸದಸ್ಯ ಸುಧೀರ್ ಶೆಟ್ಟಿ ಮಾತನಾಡಿ, ಪಚ್ಚನಾಡಿ ಡಂಪಿಂಗ್ ಯಾರ್ಡ್‌ನಲ್ಲಿ ಕಳೆದ ೨೦ ವರ್ಷಗಳಿಂದ ೬ ಲಕ್ಷ ಮೆಟ್ರಿಕ್ ಟನ್ ಕಸ ತುಂಬಿದೆ. ಪಾಲಿಕೆಯ ಹೊರಗಿನ ಗ್ರಾಮ ಪಂಚಾಯತ್‌ಗಳಿಂದಲೂ ಇಲ್ಲಿಗೆ ಕಸ ಬರುತ್ತಿದೆ ಎಂದು ಆಕ್ಷೇಪಿಸಿದರು. ಈ ಸಂದರ್ಭ ವಿಪಕ್ಷ ನಾಯಕರಾದ ಅಬ್ದುಲ್ ರವೂಫ್, ಸದಸ್ಯರಾದ ಶಶಿಧರ ಹೆಗ್ಡೆ ಮೊದಲಾದವರು ನಾಳೆಯಿಂದ ಪಾಲಿಕೆ ವ್ಯಾಪ್ತಿಯ ಹೊರಗಿನಿಂದ ಬರುವ ತ್ಯಾಜ್ಯವನ್ನು ನಿಷೇಧಿಸೋಣ ಎಂದರು.
ಈ ಸಂದರ್ಭ ಪಾಲಿಕೆ ಆಯುಕ್ತ ಅಕ್ಷಯ್ ಶ್ರೀಧರ್ ಮಾತನಾಡಿ, ತಕ್ಷಣ ಹೊರಗಿನಿಂದ ಬರುವ ತ್ಯಾಜ್ಯ ನಿಲ್ಲಿಸಿದರೆ ಅವರಿಗೂ ತೊಂದರೆ ಆಗಲಿದೆ. ಹಾಗಾಗಿ ಕಾಲಾವಕಾಶ ನೀಡಿ ಕ್ರಮ ಕೈಗೊಳ್ಳಬಹುದಾಗಿದೆ. ತಕ್ಷಣಕ್ಕೆ ಶೇ. ೧೦೦ರಷ್ಟು ಕಸ ವಿಂಗಡಿಸಿಯೇ ಪಚ್ಚನಾಡಿಗೆ ತರುವಂತೆ ನೋಟೀಸು ನೀಡಲಾಗುವುದು. ಜತೆಗೆ ಪಂಚಾಯತ್‌ಗಳಿಂದ ಬಾಕಿ ಇರುವ ತ್ಯಾಜ್ಯ ಸಂಸ್ಕರಣಾ ಶುಲ್ಕವನ್ನು ಪಾವತಿಸುವಂತೆಯೂ ನೋಟಿಸ್ ನಲ್ಲಿ ತಿಳಿಸಲಾಗುವುದು ಎಂದರು. ಸಭೆಯಲ್ಲಿ ಉಪ ಮೇಯರ್ ಜಾನಕಿ ಯಾನೆ ವೇದಾವತಿ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಶರತ್ ಕುಮಾರ್, ಪೂರ್ಣಿಮಾ, ಕಿರಣ್ ಕುಮಾರ್, ಜಗದೀಶ್ ಶೆಟ್ಟಿ ಉಪಸ್ಥಿತರಿದ್ದರು.