ತ್ಯಾಜ್ಯ ನಿರ್ವಹಣೆ: ಸವಾಲು ಹಾಗೂ ಸಾಧ್ಯತೆಗಳು ಎಂಬ ವಿಚಾರ ಸಂಕಿರಣ

ಮಂಗಳೂರು, ಎ.೯-ರಾಮಕೃಷ್ಣ ಮಿಷನ್ ಮಾರ್ಗದರ್ಶನದಲ್ಲಿ ಕಳೆದ ಐದಾರು ವರ್ಷಗಳಿಂದ ಮಂಗಳೂರಿನ ಸ್ವಚ್ಛತೆಗಾಗಿ ಅನೇಕ ಕಾರ್ಯಕರ್ತರು ಶ್ರಮಿಸುತ್ತಿರುವುದು ತಮಗೆ ತಿಳಿದಿದೆ. ಕಳೆದ ವರ್ಷ ಸ್ವಚ್ಛ ಮಂಗಳೂರು ಅಭಿಯಾನ ಸಮಾರೋಪವಾದ ಬಳಿಕ ಸ್ವಚ್ಛತೆಗೆ ಸಂಬಂಧಿಸಿದಂತೆ ಮತ್ತಷ್ಟು ರಚನಾತ್ಮಕವಾದ ಕಾರ್ಯಚಟುವಟಿಕೆಗಳನ್ನು ಹಮ್ಮಿಕೊಳ್ಳಬೇಕೆಂಬ ಸದಾಶಯದೊಂದಿಗೆ, ಮಂಗಳ ಸಂಪನ್ಮೂಲ ನಿರ್ವಹಣಾ ಸಂಸ್ಥೆ ಎಂಬ ಸ್ಟಾರ್ಟ್ ಅಪ್ ಒಂದನ್ನು ಆರಂಭಿಸಲಾಯಿತು. ಪ್ರಮುಖವಾಗಿ ಕಳೆದ ಒಂದು ವರ್ಷದಿಂದ ತ್ಯಾಜ್ಯವನ್ನು ಸಂಪನ್ಮೂಲವನ್ನಾಗಿ ಪರಿವರ್ತಿಸುವ ವಿಶೇಷ ಪ್ರಯೋಗಗಳನ್ನು ಮಾಡಲಾಯಿತು. ತ್ಯಾಜ್ಯ ನಿರ್ವಹಣೆ ಎಂಬುದು ಮಹಾನಗರಗಳಿಗೆ ದೊಡ್ದ ಹೊರೆಯಾಗಿರುವ ಈ ದಿನಮಾನಗಳಲ್ಲಿ, ಅತ್ಯಂತ ತ್ಯಾಜ್ಯ ನಿರ್ವಹಣೆಗೆ ಸಂಬಂಧಿಸಿದಂತೆ ವಿಶಿಷ್ಠವಾದ ಯೋಜನೆಯನ್ನು ಈ ಸ್ಟಾರ್ಟ್‌ಅಪ್ ನಗರಪಾಲಿಕೆಗಳ ಮುಂದೆ ಪ್ರಸ್ತುತಪಡಿಸುತ್ತಿದೆ. ಈಗಾಗಲೇ ಸ್ಟಾರ್ಟ್‌ಅಪ್ ಮೂಲಕ ಹಲವು ಯಶಸ್ವಿ ಯೋಜನೆಗಳು ಕಳೆದ ಒಂದು ವರ್ಷದಿಂದ ನಿರಂತರವಾಗಿ ನಡೆದು, ತ್ಯಾಜ್ಯ ಸಮಸ್ಯೆ ಪರಿಹರಿಸುವುದರ ಜೊತೆಗೆ ಪರಿಸರ ಸಂರಕ್ಷಣೆ, ಉದ್ಯೋಗ ಸೃಷ್ಟಿ, ಸಂಪನ್ಮೂಲಗಳ ಮರುಉತ್ಪಾದನೆ ಇನ್ನಿತರ ಕ್ಷೇತ್ರಗಳಲ್ಲಿ ಅಸಾಧಾರಣ ಸಾಧನೆ ಮಾಡಲು ಸಶಕ್ತವಾಗಿದೆ ಎಂದು ತಿಳಿಸಲು ಹೆಮ್ಮೆಯೆನಿಸುತ್ತದೆ.
ಈ ಹಿನ್ನಲೆಯಲ್ಲಿ ದಿನಾಂಕ ೧೦-೪-೨೦೨೧ ಶನಿವಾರದಂದು ಬೆಳಿಗ್ಗೆ ೧೦ ಗಂಟೆಗೆ ಘನತ್ಯಾಜ್ಯ ನಿರ್ವಹಣೆ: ಸವಾಲು ಹಾಗೂ ಸಾಧ್ಯತೆಗಳು ಎಂಬ ವಿಷಯದ ಕುರಿತ ವಿಚಾರ ಸಂಕಿರಣವನ್ನು ದಿ ಓಷ್ಯನ್ ಪರ್ಲ್ ಹೋಟೆಲ್ ಕೋಡಿಯಾಲ್‌ಬೈಲ್ ಇಲ್ಲಿಯ ಸಭಾಭವನದಲ್ಲಿ ಆಯೋಜಿಸಲಾಗಿದೆ. ನಮ್ಮ ತ್ಯಾಜ್ಯ ನಮ್ಮ ಹೊಣೆ, ತ್ಯಾಜ್ಯವಲ್ಲ ಸಂಪನ್ಮೂಲ, ತ್ಯಾಜ್ಯಮುಕ್ತ ಗ್ರಾಮ, ತ್ಯಾಜ್ಯಮುಕ್ತ ಆವರಣ ಎನ್ನುವ ವಿಷಯಗಳನ್ನು ಈ ಕಾರ್ಯಕ್ರಮದಲ್ಲಿ ಚರ್ಚಿಸಲ್ಪಡುತ್ತವೆ. ರಾಣೆಬೆನ್ನೂರಿನ ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ಸ್ವಾಮಿ ಪ್ರಕಾಶಾನಂದಜಿ ಕಾರ್ಯಕ್ರಮದ ಸಾನಿಧ್ಯ ವಹಿಸಲಿದ್ದಾರೆ. ಮಂಗಳೂರು ಮಹಾನಗರ ಪಾಲಿಕೆಯ ಮಹಾಪೌರರಾದ ಶ್ರೀ ಪ್ರೇಮಾನಂದ ಶೆಟ್ಟಿ ವಿಚಾರ ಸಂಕಿರಣವನ್ನು ಉದ್ಘಾಟಿಸಲಿರುವರು. ಮುಖ್ಯ ಅಭ್ಯಾಗತರಾಗಿ ದಾವಣಗೆರೆ ಮಹಾನಗರ ಪಾಲಿಕೆಯ ಮಹಾಪೌರರಾದ ಶ್ರೀ ವೀರೇಶ್ ಎಸ್ ಟಿ ಭಾಗಿಯಾಗಲಿದ್ದಾರೆ. ಮಾಜಿ ವಿಧಾನ ಪರಿಷತ್ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಪ್ರಾಸ್ತಾವಿಕ ಮಾತುಗಳನ್ನಾಡಲಿದ್ದಾರೆ. ವಿಶೇಷ ಅತಿಥಿಯಾಗಿ ಮನಪಾ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಶ್ರೀ ಸಂದೀಪ್ ಗರೋಡಿ ಭಾಗಿಯಾಗಲಿದ್ದಾರೆ. ಸ್ವಚ್ಛ ಮಂಗಳೂರು ಅಭಿಯಾನದ ಸಂಚಾಲಕ ಸ್ವಾಮಿ ಏಕಗಮ್ಯಾನಂದಜಿ, ರಂಜನ್ ಬೆಳ್ಳರಪಾಡಿ, ಶ್ರೀ ಪಿ ಎಚ್ ಪ್ರಕಾಶ್ ಶೆಟ್ಟಿ ವಿಷ್ಣು ಶರ್ಮ, ಅರ್ಜುನ್ ಮಸ್ಕರೇನ್ಹಸ್ ಹಾಗೂ ಸಚಿನ್ ಶೆಟ್ಟಿ ವಿಚಾರ ಸಂಕಿರಣದಲ್ಲಿ ತಮ್ಮ ವಿಚಾರಗಳನ್ನು ಮಡಿಸಲಿದ್ದಾರೆ. ಬೆಳಿಗ್ಗೆ ೧೦ ಗಂಟೆಯಿಂದ ೧೨-೩೦ ರವರೆಗೆ ಜರುಗುವ ವಿಚಾರ ಸಂಕಿರಣದ ಬಳಿಕ ಖ್ಯಾತ ಜಾದೂಗಾರ ಕುದ್ರೋಳಿ ಗಣೇಶ್ ಅವರಿಂದ ಮೈಂಡ್ ರೀಡಿಂಗ್ ಮ್ಯಾಜಿಕ್ ಎಂಬ ವಿಶೇಷ ಮನರಂಜನಾ ಕಾರ್ಯಕ್ರಮ ನಡೆಯಲಿದೆ.