ತ್ಯಾಜ್ಯ ನಿರ್ವಹಣೆ ಮಾದರಿ ಜಿಲ್ಲೆಗೆ ಸಜ್ಜು-ಡಿಸಿ.ಲತಾ

ಚಿಕ್ಕಬಳ್ಳಾಪುರ.ನ೪:ತ್ಯಾಜ್ಯ ನಿರ್ವಹಣೆಯಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯನ್ನು ಮಾದರಿ ಜಿಲ್ಲೆಯನ್ನಾಗಿಸಲು ಜಿಲ್ಲಾಡಳಿತ ಸಜ್ಜಾಗಿದೆ ಎಂದು ಜಿಲ್ಲಾಧಿಕಾರಿ ಆರ್ ಲತಾ ಅವರು ಹೇಳಿದರು.
ಅವರು ನಗರ ಹೊರ ವಲಯದ ಪುಟ್ಟ ತಿಮ್ಮನಹಳ್ಳಿಯಲ್ಲಿರುವ ಘನತ್ಯಾಜ್ಯ ವಸ್ತು ವಿಲೇವಾರಿ ಘಟಕಕ್ಕೆ ಭೇಟಿ ನೀಡಿದ ಅವರು, ತ್ಯಾಜ್ಯ ನಿರ್ವಹಣೆ, ಎರೆಹುಳು ಗೊಬ್ಬರ ಘಟಕ, ನಾಟಿ ಹಸು, ಸಾವಯವ ಗೊಬ್ಬರದಿಂದ ಬೆಳೆದ ಸೊಪ್ಪು, ಮಿಶ್ರ ಬೆಳೆ, ರಾಗಿಯನ್ನು ಪರಿವೀಕ್ಷಣೆ ಮಾಡಿದರು.
ನಗರ ವ್ಯಾಪ್ತಿಯಲ್ಲಿ ಸಂಗ್ರಹವಾಗುವ ಕಸ ಪರಿಣಾಮಕಾರಿಯಾಗಿ ವಿಲೇವಾರಿ ಮಾಡುವ ಹೊಣೆ ಸ್ಥಳೀಯ ನಗರಸಭೆಯದಾಗಿರುತ್ತದೆ. ಈ ನಿಟ್ಟಿನಲ್ಲಿ ಚಿಕ್ಕಬಳ್ಳಾಪುರ ನಗರಸಭೆ ಒಂದು ಹೆಜ್ಜೆ ಮುಂದಾಗಿಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿದೆ. ಚಿಕ್ಕಬಳ್ಳಾಪುರದ ನಾಗರಿಕರು ಮನೆಯಲ್ಲೇ ತ್ಯಾಜ್ಯ ವಿಂಗಡಿಸಿ ಕಸದ ಗಾಡಿಗೆ ನೀಡುತ್ತಿದ್ದಾರೆ. ಇದರಿಂದ ತ್ಯಾಜ್ಯ ಮರುಬಳಕೆಗೆ ಸಹಕಾರಿಯಾಗಿದೆ ಎಂದರು.
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ೧೫ ಎಕರೆ ಜಾಗವನ್ನು ಘನ ತ್ಯಾಜ್ಯ ನಿರ್ವಹಣೆ ಘಟಕಕ್ಕೆ ಮೀಸಲಿರಿಸಲಾಗಿದೆ. ಈ ಹಿನ್ನಲೆಯಲ್ಲಿ ಉತ್ತಮ ರೀತಿಯಲ್ಲಿ ಕಸ ವಿಂಗಡಣೆ ಮಾಡಬಹುದಾಗಿದ್ದು, ಈಗಾಗಲೇ ಹಸಿ ಕಸ ಮತ್ತು ಒಣ ಕಸವನ್ನು ಪ್ರತ್ಯೇಕಿಸಿ, ಹಸಿ ಕಸದಿಂದ ಗೊಬ್ಬರವನ್ನು ತಯಾರಿಸಲಾಗುತ್ತಿದ್ದು, ಸಾವಯವ ಗೊಬ್ಬರದ ಮೂಲಕ ಮಿಶ್ರ ಬೆಳೆಯನ್ನು ಬೆಳೆಯಲು ಕ್ರಮ ಕೈಗೊಳ್ಳಲಾಗಿದ್ದು, ನಗರದ ಪೌರಕಾರ್ಮಿಕರಿಗೆ ಇದನ್ನು ವಿತರಿಸಲಾಗುವುದು. ಅಲ್ಲದೇ, ತ್ಯಾಜ್ಯ ಎಂದಿಗೂ ತ್ಯಾಜ್ಯವಲ್ಲ ಅದೊಂದು ಸಂಪನ್ಮೂಲ ಎಂದು ತೋರಿಸುವ ಉದ್ದೇಶದಿಂದ ನಗರಸಭೆಯಿಂದ ಈ ಕಾರ್ಯ ಕೈಗೊಳ್ಳಲಾಗಿದೆ. ತ್ಯಾಜ್ಯ ವಿಂಗಡಣೆಯಲ್ಲಿ ಜಿಲ್ಲೆಯನ್ನು ಮಾದರಿ ಜಿಲ್ಲೆಯನ್ನಾಗಿ ಮಾಡುವ ಉದ್ದೇಶ ಹೊಂದಾಲಾಗಿದೆ ಎಂದು ಅವರು ತಿಳಿಸಿದರು.
ಸುಮಾರು ೧೫ ವರ್ಷಗಳಿಂದ ಕಸ ಸಂಗ್ರಹಿಸಿ ಈ ಜಾಗದಲ್ಲಿ ಸುರಿಯಲಾಗಿದೆ. ಈ ಅವಧಿಯಲ್ಲಿ ಸಂಗ್ರಹವಾಗಿರುವಂತಹ ಕಸವನ್ನು ಹಸಿ ಕಸ ಮತ್ತು ಒಣ ಕಸ ಎಂದು ವಿಂಗಡಿಸಿಲ್ಲ. ಆದರೆ ಕಸ ಕತ್ತರಿಸುವ ಮತ್ತು ಜರಡಿ ಹಿಡಿಯುವ ಯಂತ್ರಗಳ ಮೂಲಕ ಪ್ಲಾಸ್ಟಿಕ್ ಮತ್ತು ಗೊಬ್ಬರ ಕಸವನ್ನು ವಿಂಗಡಣೆ ಮಾಡಲಾಗುತ್ತದೆ. ಈ ಮೂಲಕ ಯಾವುದೇ ಕಸವನ್ನು ವ್ಯರ್ಥವಾಗದಂತೆ ಮರು ಬಳಕೆ ಮಾಡಲು ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.
ನಗರಸಭೆ ನೂತನ ಅಧ್ಯಕ್ಷ ಆನಂದ್ ರೆಡ್ಡಿ ಬಾಬು ನಗರಸಭೆ ಪೌರಾಯುಕ್ತ ಲೋಹಿತ್ ಇದ್ದರು.