ತ್ಯಾಜ್ಯವನ್ನು ವಿಲೇ ಮಾಡದೇ ಪುರಸಬಾ ಅಧಿಕಾರಿಗಳು

ಕೆ.ಆರ್.ಪೇಟೆ. ಡಿ.29: ಸಾವಿರಾರು ವರ್ಷಗಳ ಇತಿಹಾಸ ಇರುವ ಪಟ್ಟಣದ ದೇವೀರಮ್ಮಣ್ಣಿ ಕೆರೆಯ ಏರಿಯ ಮೇಲೆ ನೀವುಗಳು ಒಮ್ಮೆ ಹೋಗಿಬಂದರೆ ಸಾಕು ಅದರ ಕಥೆಯನ್ನು ನೀವೇ ಹೇಳುತ್ತೀರಿ.
ಪಟ್ಟಣದಿಂದ ನಾಗಮಂಗಲ ಮಾರ್ಗವಾಗಿ ಬೆಂಗಳೂರಿಗೆ ಹಾಗೂ ಮೇಲುಕೋಟೆ ಮಾರ್ಗವಾಗಿ ಮಂಡ್ಯ ತಲುಪಲು ದೇವೀರಮ್ಮಣ್ಣಿ ಕೆರೆಯ ಏರಿಯನ್ನೇ ಎಲ್ಲರೂ ಅವಲಂಭಿಸÀಬೇಕಾಗಿದ್ದು ಪ್ರತೀದಿನ ಸಾವಿರಾರು ಸಂಖ್ಯೆಯ ದ್ವಿಚಕ್ರ ವಾಹನಗಳು, ಕಾರುಗಳು, ಆಟೋಗಳು, ಬಸ್, ಲಾರಿ, ಟ್ರಾಕ್ಟರ್, ಜೆಸಿಬಿ ಸೇರಿದಂತೆ ಪ್ರಮುಖವಾಗಿ ಎಲ್ಲರೂ ಚಲಿಸುವ ಮಾರ್ಗವಾಗಿದೆ. ಆದರೆ ಕೆರೆಯ ಏರಿಯ ಮೇಲೆ ಸುರಿದಿರುವ ತ್ಯಾಜ್ಯವನ್ನು ನೋಡಿದರೆ ಎಲ್ಲರ ಹುಬ್ಬೇರಿಸುವಂತಿದೆ.
ಪುರಸಭಾ ಅಧಿಕಾರಿಗಳ ನಿರ್ಲಕ್ಷ್ಯ.
ಪಟ್ಟಣದ ತ್ಯಾಜ್ಯವನ್ನು ವಿಲೇವಾರಿ ಮಾಡಲು ಸೂಕ್ತ ಜಾಗದ ಕೊರತೆಯೋ, ಅಥವಾ ತ್ಯಾಜ್ಯ ಸುರಿಯುವವರ ಮೇಲೆ ಯಾವುದೇ ಕ್ರಮ ಕೈಗೊಳ್ಳದೇ ಇರುವುದರಿಂದಲೋ. ಪುರಸಭೆಗೆ ಸಿಬ್ಬಂಧಿಯ ಅಥವಾ ವಾಹನಗಳ ಕೊರತೆಯಿಂದಲೋ ಕೆರೆಯ ಏರಿಯ ಮೇಲೆ ಕೆಲವಾರು ತಿಂಗಳಿನಿಂದಲೂ ರಾಶಿರಾಶಿಯಾಗಿ ಬಿದ್ದಿರುವ ಯಾರಿಗೂ ಬೇಡವಾದ ತ್ಯಾಜ್ಯವನ್ನು ವಿಲೇ ಮಾಡದೇ ಪುರಸಬಾ ಅಧಿಕಾರಿಗಳು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಹಳೆಯ ಮನೆ ಒಡೆದ ಇಟ್ಟಿಗೆಯ ರಾಶಿ.
ಪಟ್ಟಣದಲ್ಲಿ ಹಳೆ ಮನೆ ಕೆಡವಿ ಹೊಸ ಮನೆ ನಿರ್ಮಿಸುವ ನಾಗರೀಕರು ತಾವು ಒಡೆದ ಗೋಡೆಯ ಇಟ್ಟಿಗೆ, ಗಾರೆ. ಮಣ್ಣು, ಕಲ್ಲು ಮುಂತಾದ ತ್ಯಾಜ್ಯಗಳನ್ನು ಟ್ರಾಕ್ಟರ್, ಹಾಗೂ ಎತ್ತಿನ ಗಾಡಿ, ಟ್ರಾಕ್ಟರ್‍ಗಳ ಮೂಲಕ ಕೆರೆಯ ಏರಿಯ ಮೇಲೆ ರಾಶಿರಾಶಿಯಾಗಿ ಸುರಿದಿದ್ದು ಅವುಗಳು ಸಣ್ಣ ಸಣ್ಣ ಬೆಟ್ಟದಂತೆ ನಿರ್ಮಾಣವಾಗಿವೆ.
ಟೀ ಅಂಗಡಿಗಳ ಲೋಟ, ಪ್ಲಾಸ್ಟಿಕ್ ತ್ಯಾಜ್ಯ,
ಕೆರೆಯ ಏರಿಯ ಪ್ರಾರಂಭದಿಂದ ಎಡಬಲಗಳಲ್ಲಿ ಪಟ್ಟಣದ ಕೋಳಿ, ಟೀ, ಹೊಟೆಲ್‍ಗಳ ತ್ಯಾಜ್ಯ ಎಲ್ಲೆಂದರಲ್ಲಿ ಬಿಸಾಕಿರುವ ಪರಿಣಾಮ ಪ್ಲಾಸ್ಟಿಕ್ ಹಾಳೆಗಳು, ಲೋಟಗಳು ಗಾಳಿಗೆ ತೂರಿ ಎಲೆಂದರಲ್ಲಿ ಬಿದ್ದಿವೆ. ಪಟ್ಟಣದಲ್ಲಿ ಲೈಸೆನ್ಸ್ ಪಡೆದು ಕೋಳಿ ಅಂಗಡಿ ಇಟ್ಟಿರುವವರು ಕೋಳಿಯ ತ್ಯಾಜ್ಯವನ್ನು ಸಮರ್ಪಕವಾಗಿ ವಿಲೇ ಮಾಡದ ಪರಿಣಾಮ ಕೆರೆಯ ಏರಿಯ ಅಕ್ಕಪಕ್ಕದಲ್ಲಿ ಸುರಿದು ಹೋಗುತ್ತಾರೆ. ಪುರಸಭೆಯ ಅಧಿಕಾರಿಗಳು ಇಂಥಹವರ ಮೇಲೆ ಯಾವುದೇ ಕ್ರಮ ಕೈಗೊಳ್ಳದೇ ಇರುವುದರಿಂದ ವ್ಯಾಪಾರಿಗಳು ಆಗಾಗ ಕೋಳಿ ತ್ಯಾಜ್ಯವನ್ನು ಅಲ್ಲಲ್ಲಿ ಸುರಿದು ಹೋಗುವುದರಿಂದ ದಾರಿಹೋಕರಿಗೆ ವಾಸನೆ ಮೂಗಿಗೆ ಬಡಿಯುತ್ತದೆ.
ಪಟ್ಟಣದ ಸಾವಿರಾರು ಸಂಖ್ಯೆಯ ನಾಗರೀಕರು ಪ್ರತೀದಿನ ಕೆರೆಯ ಏರಿಯ ಮೇಲೆ ವಾಯುವಿಹಾರಕ್ಕೆ ಹೋಗುತ್ತಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಕೋಳಿ ತ್ಯಾಜ್ಯದ ವಾಸನೆ ತಡೆಯಲಾರದೇ ವಾಯುವಿಹಾರಕ್ಕೆ ಕೆರೆಯ ಏರಿಯ ಮೇಲೆ ತೆರಳುವುದನ್ನೇ ಬಿಟ್ಟಿದ್ದಾರೆ. ಆದ್ದರಿಂದ ಕೂಡಲೇ ಪುರಸಭೆಯ ಅಧಿಕಾರಿಗಳು ಈ ಬಗ್ಗೆ ಕ್ರಮವಹಿಸುವಂತೆ ಹಿರಿಯ ನಾಗರೀಕರು ಹಾಗೂ ಸಾರ್ವಜನಿಕರು ಆಗ್ರಹಿಸಿದ್ದಾರೆ.