ತ್ಯಾಗ, ಅಹಿಂಸೆಯ ಸಾಕಾರಮೂರ್ತಿ ವರ್ಧಮಾನ ಮಹಾವೀರ

ಕಲಬುರಗಿ:ಎ.25: ನಮ್ಮ ದೇಶದಲ್ಲಿ ಅನೇಕ ಮಹನೀಯರು ಸಮಾಜ ಸುಧಾರಣೆಗಾಗಿ ಶ್ರಮಿಸಿದ್ದಾರೆ. ತ್ಯಾಗ, ಅಹಿಂಸೆ, ಭಾತೃತ್ವ ಭಾವನೆಯನ್ನು ಎಲ್ಲರಲ್ಲಿಯೂ ಮೂಡಿಸಿ, ನಿರಂತರವಾಗಿ ಸಮಾಜ ಸುಧಾರಣೆಗಾಗಿ ಶ್ರಮಿಸಿದ ವರ್ಧಮಾನ ಮಹಾವೀರರ ಕೊಡುಗೆ ಪ್ರಮುಖವಾಗಿದೆಯೆಂದು ಉಪನ್ಯಾಸಕ, ಚಿಂತಕ ಎಚ್.ಬಿ.ಪಾಟೀಲ ಹೇಳಿದರು.

ನಗರದ ಶಹಾಬಜಾರನಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಸರಳವಾಗಿ ಜರುಗಿದ ‘ವರ್ಧಮಾನ ಮಹಾವೀರ ಜಯಂತಿ’ಯ ನಿಮಿತ್ಯ ಅವರ ಭಾವಚಿತ್ರಕ್ಕೆ ನಮನಗಳನ್ನು ಸಲ್ಲಿಸಿ ಅವರು ಮಾತನಾಡುತ್ತಿದ್ದರು.

   ವರ್ಧಮಾನ ಮಹಾವೀರರು 5 ಪ್ರತಿಜ್ಞೆಗಳನ್ನು ಮತ್ತು ನಡವಳಿಕೆಯ 3 ನಿಯಮಗಳನ್ನು ಬೋಧಿಸಿದರು. ಇವುಗಳನ್ನು ತ್ರಿರತ್ನಗಳೆಂದು ಕರೆಯುತ್ತಾರೆ. ಪಂಚ ಪ್ರತಿಜ್ಞೆಗಳೆಂದರೆ, ಅಹಿಂಸೆ, ಸತ್ಯ, ಅಸ್ತೇಯ, ಅಪರಿಗ್ರಹ, ಬ್ರಹ್ಮಚರ್ಯಗಳಾಗಿವೆ. ತ್ರಿರತ್ನಗಳೆಂದರೆ, ಸಮ್ಯಕಜ್ಞಾನ, ಸಮ್ಯಕ ದರ್ಶನ, ಸಮ್ಯಕಚಾರಿತ್ರಗಳಾಗಿವೆಯೆಂದರು.

    ಮುಖ್ಯ ಶಿಕ್ಷಕ ಸಾಗರ ಪಾಟೀಲ ಮಾತನಾಡಿ, ಜೈನಧರ್ಮ ಪರಂಪರೆಯ ಕುರಿತು ಅವರು ಬಾಲ್ಯದಲ್ಲಿಯೇ ಆಳವಾದ ಅಧ್ಯಯನವನ್ನು ಮಾಡಿದರು. ರಾಜ ಮನೆತನದಲ್ಲಿ ಬೆಳೆದವರಾದರೂ ಕೂಡಾ, ಅರಮನೆಯ ಸುಖ, ಭೋಗಗಳಲ್ಲಿ ತೊಡಗದೆ, ತ್ಯಾಗಿಗಳ, ವಿರಾಗಿಗಳ ಸಂಪರ್ಕ ಹೆಚ್ಚಾಗುತ್ತಾ ಸಾಗಿ, ವೈರಾಗ್ಯದತ್ತ ಮನಸ್ಸು ಒಲಿಯಿತು. ಸತತ 12 ವರ್ಷಗಳ ಕಾಲ ಘೋರ ತಪಸ್ಸನ್ನು ಮಾಡಿ, 'ಕೈವಲ್ಯ ಜ್ಞಾನೋದಯ'ವನ್ನು ಪಡೆದು 'ವರ್ಧಮಾನ ಮಹಾವೀರ'ರಾದರೆಂದರು.

ಕಾರ್ಯಕ್ರಮದಲ್ಲಿ ಪ್ರಮುಖರಾದ ನರಸಪ್ಪ ಬಿರಾದಾರ ದೇಗಾಂವ, ಅಣ್ಣಾರಾಯ ಮಂಗಾಣೆ, ದೇವೇಂದ್ರಪ್ಪ ಗಣಮುಖಿ, ದಾನಯ್ಯಸ್ವಾಮಿ ಇದ್ದರು.