ತ್ಯಾಗದ ಬದುಕಿನಲ್ಲಿ ಪ್ರೇಮ ಅರಳಬಲ್ಲದು: ಪೂಜ್ಯ ಬಸವಲಿಂಗ ಅವಧೂತರು

ಔರಾದ :ಜು.20: ಕಾಮ, ಕ್ರೋಧ ಲೋಭ ಮೋಹದಿಂದ ಹೊರಬಂದು ತ್ಯಾಗದ ಬದುಕು ಮೈಗೂಡಿಸಿಕೊಂಡರೆ ಕಷ್ಟದಲ್ಲಿಯೂ ಪ್ರೇಮ ಅರಳುತ್ತದೆ ಎಂದು ಮಲ್ಲಯ್ಯಗಿರಿ ಪೂಜ್ಯ ಬಸವಲಿಂಗ ಅವಧೂತರು ಪ್ರತಿಪಾದಿಸಿದರು.

ಔರಾದ ತಾಲೂಕಿನ ಚಟ್ನಾಳ ಗ್ರಾಮದಲ್ಲಿ ಚಂದ್ರಮಹಾರಾಜ ತಾಂಡಾದ ಝಾಪಾ ಮಹಾರಾಜ ಅವರು ಚಟ್ನಾಳ ಗ್ರಾಮದ ಭವಾನಿ ಮಂದಿರದಲ್ಲಿ ಕೈಗೊಂಡಿದ್ದ 21 ದಿನಗಳ ಮೌನ ಅನುಷ್ಠಾನ ಸಮಾಪ್ತಿ ಸಮಾರಂಭದ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ಮನುಷ್ಯನಲ್ಲಿ ದಯೆ ಕರುಣೆ ಇದ್ದರೆ ಜೀವನ ಸಮೃದ್ಧವಾಗಬಲ್ಲದು. ಬಸವಾದಿ ಸಮಕಾಲೀನ ಕಾಯಕ ವರ್ಗದ ಶರಣರಿಗೆ ಬದುಕಿನ ಯಾವುದೇ ಜಂಜಾಟ ಇರಲಿಲ್ಲ. ಎಲ್ಲರಿಗೂ ದಯೆ, ಪ್ರೀತಿ , ನ್ಯಾಯ ಒದಗಿಸುವ ಉದ್ದೇಶದಿಂದ ಸರಳ ಜೀವನ ನಡೆಸಿದರು ಎಂದು ಹೇಳಿದರು.

ದುಶ್ಚಟಗಳಿಂದ ದೂರವಿದ್ದು ಆರೋಗ್ಯವಂಥ ಜೀವನ ನಡೆಸಿದರೆ ಬದುಕು ಸಾರ್ಥಕವಾಗುತ್ತದೆ ಎಂದು ತಿಳಿಸಿದರು.

ಮೌನ ಅನುಷ್ಠಾನ ಸಮಾಪ್ತಿಗೊಳಿಸಿದ ಪೂಜ್ಯ ಝಾಪಾ ಮಹಾರಾಜ ಅವರು ಮುಂದಿನ ದಿನಗಳಲ್ಲಿ ಹೀಗೆ ಮೌನವೃತ್ತ ಆಚರಿಸುವೆ, ಯಾರ ಒತ್ತಡ ಇಲ್ಲದೆ ವೈಯಕ್ತಿಕವಾಗಿ ಅನುಷ್ಠಾನ ಕೈಗೊಂಡಿರುವೆ. ಸಮಾಜದ ಒಳಿತಿಗಾಗಿ ಈ ಕಾರ್ಯ ಮುಂದುವರೆಸುವೆ ಎಂದು ಮಾತನಾಡದೆ ಕಾಗದನಲ್ಲಿ ಬರೆದು ಆಶೀರ್ವಚನ ನೀಡಿದರು.

ಈ ಸಂದರ್ಭದಲ್ಲಿ ರಾಜಕುಮಾರ್ ಮೂಲಗೆ, ಪುಂಡಲಿಕ ಗಣಮುರ್ಕೆ, ಗಂಗಶೆಟ್ಟಿ ಮೂಲಗೆ, ರಾಜಕುಮಾರ್ ಧನಗರ್, ದತ್ತಾತ್ರಿ ಪಾಟೀಲ್, ಮಹಾದೇವ ಪಾಟೀಲ್, ಸಂದೀಪ ಮೂಲಗೆ, ಮಹಾದೇವ ಮಸೂರೆ, ಸಂಜೀವಕುಮಾರ ಪಾಟೀಲ್, ತುಳಸಿರಾಮ ಧನಗರ್, ಮಹಾದೇವ ಮೂಲಗೆ, ಚಂದ್ರಪ್ಪ ಕುಂಬಾರ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ನೂರಾರು ಭಕ್ತರು ಪಾಲ್ಗೊಂಡಿದ್ದರು.