ತೌತೆ ಚಂಡಮಾರುತ: ನೀರು ಪಾಲಾದ 300 ಕ್ವಿಂಟಾಲ್ ಉಳ್ಳಾಗಡ್ಡಿ

ಕಲಬುರಗಿ,ಮೇ.19-ತೌತೆ ಚಂಡಮಾರುತದಿಂದಾಗಿ ನಿನ್ನೆ ಸುರಿದ ಭಾರಿ ಮಳೆಗೆ ಆಳಂದ ತಾಲ್ಲೂಕಿನ ಮಾಡ್ಯಾಳ ಗ್ರಾಮದ ರೈತ ರಮೇಶ ಕಲಶೆಟ್ಟಿ ಅವರ ತೋಟದಲ್ಲಿನ ಸುಮಾರು 300 ಕ್ವಿಂಟಾಲ್ ಉಳ್ಳಾಗಡ್ಡಿ ನೀರು ಪಾಲಾಗಿದೆ.
ಕೈಗೆ ಬಂದ ತುತ್ತು ಬಾಯಿಗೆ ಬರದೆ ರೈತ ರಮೇಶ ಕಲಶೆಟ್ಟಿ ಕಂಗಾಲಾಗಿದ್ದಾರೆ. ರೈತ ರಮೇಶ ಕಲಶೆಟ್ಟಿ ಅವರು ತಮ್ 2 ಎಕರೆ 20 ಗುಂಟೆ ಜಮೀನಿನಲ್ಲಿ 2 ಲಕ್ಷ ರೂಪಾಯಿ ವೆಚ್ಚಮಾಡಿ ಬಂಪರ್ ಬೆಳೆ ತೆಗೆದಿದ್ದರು. ಇನ್ನೇನು ರಾಶಿ ಮಾಡಿ ಮಾರಾಟದ ಸಿದ್ಧತೆ ಮಾಡಿಕೊಳ್ಳುತ್ತಿರುವಾಗಲೇ ತೌತೆ ಚಂಡಮಾರುದಿಂದಾಗಿ ಸುರಿದ ಭಾರೀ ಮಳೆಯಿಂದಾಗಿ ಸುಮಾರು 300 ಕ್ವಿಂಟಾಲ್ ಗೂ ಅಧಿಕ ಉಳ್ಳಾಗಡ್ಡಿ ನೀರು ಪಾಲಾಗಿ ಹೋಗಿದೆ.
ಕಳೆದ ವರ್ಷ ಲಾಕ್ ಡೌನ್ ನಿಂದಾಗಿ ಸಂಕಷ್ಟ ಅನುಭವಿಸಿದ್ದ ರೈತ ರಮೇಶ ಕಲಶೆಟ್ಟಿ ಅವರು, ಈ ವರ್ಷವಾದರೂ ಈ ಸಂಕಷ್ಟದಿಂದ ಪಾರಾಗುವ ನಿರೀಕ್ಷೆಯನ್ನಿಟ್ಟುಕೊಂಡಿದ್ದರು. ಆದರೆ ತೌತೆ ಚಂಡಮಾರುತದಿಂದಾಗಿ ಸುರಿದ ಮಳೆ ಉಳ್ಳಾಗಡ್ಡಿಯನ್ನು ನೀರು ಪಾಲಾಗಿಸುವುದರ ಮೂಲಕ ಗಾಯದ ಮೇಲೆ ಬರೆ ಎಳೆದಂತೆ ಮಾಡಿದೆ.
ಮಾರುಕಟ್ಟೆಯಲ್ಲಿ ಉಳ್ಳಾಗಡ್ಡಿ ಬೆಲೆ ಕ್ವಿಂಟಾಲ್ ಗೆ 1000 ದಿಂದ 800ರವರೆಗೆ ಇದೆ. ಅಷ್ಟು ಬೆಲೆ ದೊರೆತಿದ್ದರೂ ಸಾಕಿತ್ತು. ಖರ್ಚುವೆಚ್ಚವಾದರೂ ನೀಗಿಸಬಹುದಿತ್ತು. ಆದರೆ ತೌತೆ ಚಂಡಮಾರುತದಿಂದಾಗಿ ಸುರಿದ ಮಳೆಯಿಂದಾಗಿ ಕೈಗೆ ಬಂದಿದ್ದ ಬೆಳೆ ನೀರು ಪಾಲಾಗಿದೆ ಎಂದು ರೈತ ರಮೇಶ ಕಲಶೆಟ್ಟಿ ಅಳಲು ತೋಡಿಕೊಂಡರು.
ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿ ಕಂಗಾಲಾಗಿರುವ ರೈತನಿಗೆ ಸರ್ಕಾರ ಅಗತ್ಯವಾದ ನೆರವು ಕಲ್ಪಿಸಬೇಕಿದೆ.