ತೌಕ್ತೆ ಚಂಡಮಾರುತ : ಕೆಲ ಜಿಲ್ಲೆಗಳಲ್ಲಿ ರೆಡ್ ಅಲರ್ಟ್

ಬೆಂಗಳೂರು, ಮೇ ೧೫- ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತ ಹಿನ್ನೆಲೆಯಲ್ಲಿ ತೌಕ್ತೆ ಚಂಡಮಾರುತದ ಪರಿಣಾಮದಿಂದ ರಾಜ್ಯ ಹಲವು ಕಡೆ ಮಳೆಯಾಗುತ್ತಿದೆ.
ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಭಾರೀ ಮಳೆಯಾಗುತ್ತಿದೆ. ಮಂಗಳೂರು ನಗರ ಸೇರಿದಂತೆ ಜಿಲ್ಲೆಯ ಎಲ್ಲಾ ಭಾಗಗಳಲ್ಲೂ ನಿನ್ನೆ ರಾತ್ರಿಯಿಂದಲೇ ಮಳೆಯಾಗುತ್ತಿದೆ. ಅರಬ್ಬೀ ಸಮುದ್ರದಲ್ಲಿ ಅಲೆಗಳ ಅಬ್ಬರ ಹೆಚ್ಚಾಗಿದ್ದು, ಹವಾಮಾನ ಇಲಾಖೆಯು ದಕ್ಷಿಣಕನ್ನಡ ಜಿಲ್ಲೆಯಲ್ಲಿ ಇಂದು (ಮೇ ೧೫) ಮತ್ತು ನಾಳೆ (ಮೇ ೧೬) ರೆಡ್ ಅಲರ್ಟ್ ಘೋಷಣೆ ಮಾಡಿದೆ.
ಶಿವಮೊಗ್ಗ ನಗರದ ಸುತ್ತಮುತ್ತ ತುಂತುರು ಮಳೆಯಾಗಿದೆ. ಬೆಳಿಗ್ಗೆಯಿಂದ ಮೊಡ ಕವಿದ ವಾತಾವರಣವಿದ್ದು, ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸಿದೆ. ಇನ್ನು ಕಾಫಿನಾಡು ಚಿಕ್ಕಮಗಳೂರಿನಲ್ಲೂ ಚಂಡಮಾರುತದ ಎಫೆಕ್ಟ್?ನಿಂದ ತುಂತುರು ಮಳೆಯಾಗಿದೆ.
೨ದಿನ ರೆಡ್ ಅಲರ್ಟ್:
ಚಿಕ್ಕಮಗಳೂರು ನಗರ, ಮೂಡಿಗೆರೆ, ಕೊಪ್ಪ, ಎನ್.ಆರ್.ಪುರ ಸೇರಿದಂತೆ ಹಲವೆಡೆ ಜಿಟಿಜಿಟಿ ಮಳೆಯಾಗುತ್ತಿದೆ. ಇಲ್ಲೂ ಕೂಡಾ ೨ ದಿನ ರೆಡ್ ಅಲರ್ಟ್ ಘೋಷಣೆಯಾಗಿದ್ದು, ಮಲೆನಾಡು ಭಾಗದ ಜನರು ಎಚ್ಚರದಿಂದ ಇರುವಂತೆ ಜಿಲ್ಲಾಡಳಿತ ಸೂಚನೆ ನೀಡಿದೆ.
ತೀವ್ರ ಗಾಳಿ, ಚಳಿ ಜೊತೆ ಸಾಧಾರಣ ಮಳೆಯಾಗುತ್ತಿರುವ ಕಾರಣ ಕೊಡಗಿನ ಜನರು ಬೀದಿಗೆ ಇಳಿಯದೆ ಮನೆಯಲ್ಲೇ ಕುಳಿತಿದ್ದಾರೆ. ಇಂದು ಜಿಲ್ಲೆಯಾದ್ಯಂತ ಬೆಳಗ್ಗೆ ೬ ರಿಂದ ೧೦ ಗಂಟೆವರೆಗೆ ಮಾತ್ರ ಹಾಲು ಪೇಪರ್ ಲಭ್ಯವಾಗಿದ್ದು, ಎಲ್ಲಾ ಸೇವೆಗಳು ಬಂದ್ ಆಗಿವೆ. ಮಂಡ್ಯದಲ್ಲೂ ಕೂಡಾ ಜಿಟಿಜಿಟಿ ಮಳೆಯಾಗುತ್ತಿದೆ. ಜಿಲ್ಲೆಯಾದ್ಯಂತ ಬೆಳಿಗ್ಗೆಯಿಂದ ಬಿಟ್ಟು ಬಿಟ್ಟು ಮಳೆ ಸುರಿಯುತ್ತಿದೆ.
೨೦ ಸೆಂ.ಮೀ ಮಳೆ:
ಹಾಸನದಲ್ಲಿ ಮಳೆಯ ನಡುವೆಯೂ ವಾಹನ ಸಂಚಾರ ಕಡಿಮೆಯಾಗಿಲ್ಲ.ರಸ್ತೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ವಾಹನಗಳು ಓಡಾಡುತ್ತಿವೆ. ಜಿಲ್ಲೆಯಲ್ಲಿ ಕೊರೊನಾ ಮಹಾ ಸ್ಪೋಟವಾದರೂ ಜನ ಮಾತ್ರ ನಿರ್ಲಕ್ಷ್ಯದಿಂದ ಅಗತ್ಯ ವಸ್ತುಗಳ ಖರೀದಿ ನೆಪದಲ್ಲಿ ಓಡಾಡುತ್ತಿದ್ದಾರೆ.
ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ ಜಿಲ್ಲೆ ಸೇರಿದಂತೆ ಹಲವೆಡೆ ಇಂದು ಮುಂಜಾನೆ ಯಿಂದಲೇ ಮಳೆ ಆರಂಭವಾಗಿದೆ ಮುನ್ನೆಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ.
ಕೆಲವೆಡೆ ೨೦ ಸೆಂ.ಮೀಗೂ ಅಧಿಕ ಮಳೆಯಾಗುವ ಸಂಭವವಿದೆ. ತೌಕ್ತೆ ಪರಿಣಾಮ ಕರಾವಳಿ ಜಿಲ್ಲೆಗಳಲ್ಲಿ ಮೇ ೧೮ರವರೆಗೆ ಭಾರೀ ಮಳೆಯನ್ನು ನಿರೀಕ್ಷಿಸಲಾಗಿದ್ದು, ದಕ್ಷಿಣ ಒಳನಾಡಿನ ಕೆಲವು ಜಿಲ್ಲೆಗಳಿಗೆ ಉತ್ತಮ ಮಳೆಯಾಗಲಿದೆ.
ವೇಗವಾದ ಗಾಳಿ:
ಅಲ್ಲದೇ ಬೆಂಗಳೂರಿನಲ್ಲೂ ಇಂದು ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ತೌಕ್ತೆ ಚಂಡಮಾರುತದ ಅಬ್ಬರ ಜೋರಾಗಿರಲಿದ್ದು ಗಂಟೆಗೆ ೧೫೦ರಿಂದ ೧೬೦ ಕಿ.ಮೀ ವೇಗದಲ್ಲಿ ಗಾಳಿ ಬೀಸಲಿದೆ. ಇದು ೧೭೫ ಕಿ.ಮೀ ವೇಗವನ್ನು ಪಡೆಯುವ ಸಾಧ್ಯತೆಯೂ ಇದೆ. ಕೇರಳದ ಸಮುದ್ರ ಭಾಗದ ಕೆಲವೆಡೆ ರಸ್ತೆಗಳೇ ಕೊಚ್ಚಿ ಹೋಗಿವೆ ಎಂದು ವರದಿಯಾಗಿದ್ದು, ಈ ಭಾಗದಲ್ಲಿ ಅತಿ ಹೆಚ್ಚು ಮಳೆಯಾಗುವ ಎಚ್ಚರಿಕೆಯನ್ನು ಹವಾಮಾನ ಇಲಾಖೆ ನೀಡಿದೆ.
ಚಂಡಮಾರುತ ಉಲ್ಬಣ:
ಇದರಿಂದಾಗಿ ಕೇರಳದ ತಿರುವನಂತಪುರಂ ಸೇರಿದಂತೆ ಎಂಟು ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಣೆಯನ್ನೂ ಮಾಡಲಾಗಿದೆ.
ಲಕ್ಷದ್ವೀಪ ಭಾಗದ ಸಮುದ್ರದಲ್ಲಿ ನಿನ್ನೆ ಅತಿ ಹೆಚ್ಚು ಒತ್ತಡ ಕಂಡುಬಂದಿದ್ದು, ಮುಂದಿನ ೨೪ ಗಂಟೆಗಳಲ್ಲಿ ಚಂಡಮಾರುತ ಉಲ್ಬಣಿಸಲಿದೆ ಎಂದು ಹವಾಮಾನ ಇಲಾಖೆ ಸೂಚನೆ ನೀಡಿತ್ತು. ಅಲ್ಲದೇ ಮೇ.೧೮ರ ವೇಳೆಗೆ ತೌಕ್ತೆ ಚಂಡಮಾರುತವು ಗುಜರಾತ್ ಕರಾವಳಿ ಭಾಗಕ್ಕೆ ಹೋಗಿ ಅಪ್ಪಳಿಸಲಿದೆ ಎನ್ನುವುದಾಗಿಯೂ ಹವಾಮಾನ ಇಲಾಖೆ ಅಂದಾಜಿಸಿದೆ. ಈ ಮೂಲಕ ೨೦೨೧ರ ಮೊದಲ ಚಂಡಮಾರುತ ಕೇರಳ, ಕರ್ನಾಟಕ ಸೇರಿದಂತೆ ಅನೇಕ ಭಾಗಗಳಿಗೆ ಮಳೆಯನ್ನು ಹೊತ್ತು ತರಲಿದೆ.