ತೌಕ್ತೆ ಚಂಡಮಾರುತ: ಕರಾವಳಿಯಲ್ಲಿ ಜನಜೀವನ ಅಸ್ತವ್ಯಸ್ತ


ಕಾರವಾರ,ಮೇ.16: ‘ತೌಕ್ತೆ’ ಚಂಡಮಾರುತದಿಂದ ಉತ್ತರಕನ್ನಡ ಜಿಲ್ಲೆಯ ಕರಾವಳಿಯಲ್ಲಿ ಶನಿವಾರ ರಾತ್ರಿಯಿಂದ ಭಾರೀ ಗಾಳಿ ಬೀಸುತ್ತಿದ್ದು, ಜನ ಜೀವನ ಸಂಪೂರ್ಣವಾಗಿ ಅಸ್ತವ್ಯಸ್ತವಾಗಿದೆ. ಅಗತ್ಯವಿದ್ದೇಡೆ ತಾಲೂಕಾ ಆಡಳಿತ ಕಾಳಜಿ ಕೇಂದ್ರ ಆರಂಭಿಸಿದೆ.
ಹಲವಡೆ ಮರಗಳು ಬುಡಮೇಲಾಗಿ ರಸ್ತೆಗೆ ಅಡ್ಡಲಾಗಿ ಬಿದ್ದಿದೆ. ನೂರಾರು ವಿದ್ಯುತ್ ಕಂಬಗಳಿಗೆ ಹಾಗೂ ಪರಿವರ್ತಕಗಳಿಗೂ ವ್ಯಾಪಕವಾಗಿ ಹಾನಿಯಾಗಿದೆ. ಇದರಿಂದ ಕಳೆದ ರಾತ್ರಿಯಿಂದ ಕಾರವಾರ ಸೇರಿದಂತೆ ಹಲವಡೆ ವಿದ್ಯುತ್ ಸಂಪರ್ಕ ಸಂಪೂರ್ಣವಾಗಿ ಕಡಿತಗೊಂಡಿದೆ.
ಕಾರವಾರದ ಹಬ್ಬುವಾಡ ಹಾಗೂ ಬಾಡದ ಬಳಿ ಬೃಹತ್ ಮರಗಳು ರಸ್ತೆಯ ಮೇಲೆ ಬಿದ್ದ ಪರಿಣಾಮ, ಅಗತ್ಯ ವಸ್ತುಗಳಾದ ಹಾಲು ತರಕಾರಿ ಮುಂತಾದವುಗಳ ಪೂರೈಕೆಗೆ ಅಡ್ಡಿಯಾಗಿತ್ತು. ನಂತರ ನಗರಸಭೆ ಸಿಬ್ಬಂದಿಗಳು ಮರ ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟರು.
ಚಂಡಮಾರುತದ ಪರಿಣಾಮ ಅರಬ್ಬಿ ಸಮುದ್ರದಲ್ಲಿ ಭಾರಿ ಗಾತ್ರದ ಅಲೆಗಳು ಏಳುತ್ತಿವೆ. ಕರಾವಳಿ ಭಾಗದಲ್ಲಿ ಮಳೆಗಿಂತ ಭಾರಿ ಪ್ರಮಾಣದ ಗಾಳಿ ಕರಾವಳಿ ತೀರದ ಜನರಲ್ಲಿ ಆತಂಕ ಸೃಷ್ಠಿಸಿದೆ. ಇನ್ನು ಕಾರವಾರ, ಅಂಕೋಲಾ, ಕುಮಟಾ, ಹೊನ್ನಾವರ, ಭಟ್ಕಳ ಸೇರಿದಂತೆ ಹಲವೆಡೆ ಕಡಲ ಕೊರೆತ ಶುರುವಾಗಿದೆ.
ಪ್ರಸಿದ್ಧ ಪ್ರವಾಸಿ ತಾಣ ಭಟ್ಕಳ ತಾಲೂಕಿನ ಮುರುಡೇಶ್ವರದಲ್ಲಿ ಚಂಡಮಾರುತದಿಂದ ವ್ಯಾಪಕ ಹಾನಿಯಾಗಿದೆ. ಕಡಲತೀರದ ಹತ್ತಿರದಲ್ಲಿದ್ದ ಅನೇಕ ಗೂಡಂಗಡಿಗಳು ನೀರು ಪಾಲಾಗಿದೆ. ಅಲ್ಲದೇ ದಡದಲ್ಲಿ ಲಂಗರು ಹಾಕಿದ್ದ ಮೀನುಗಾರಿಕಾ ದೋಣಿಗಳು ಭಾರಿ ಅಲೆಗಳ ಹೊಡೆತಕ್ಕೆ ಸಿಲುಕಿದ್ದವು. ಮೀನುಗಾರರು ತಮ್ಮ ದೋಣಿಗಳನ್ನು ರಕ್ಷಿಸಲು ಸಾಕಷ್ಟು ಪರದಾಡುತ್ತಿದ್ದರು.
ಕಾರವಾರ ತಾಲೂಕಿನ ದೇವಬಾಗ, ಮಾಜಾಳಿ ಸೇರಿದಂತೆ ಹಲವಡೆ ಸಮುದ್ರ ನೀರು ದಡದ ಅಕ್ಕಪಕ್ಕದ ಮನೆಗೆ ನುಗ್ಗಿ ಸಾಕಷ್ಟು ಆವಾಂತರ ಸೃಷ್ಠಿಸಿದೆ.
ಕುಮಟಾದ ಶಶಿ ಹಿತ್ತಲು ಹಾಗೂ ಕಲಭಾಗ ಪ್ರದೇಶದಲ್ಲಿ ಸಮುದ್ರದ ನೀರು ಮನೆಗಳಿಗೆ ಹೊಕ್ಕಿದ್ದು, ಹಲವು ಕುಟುಂಬಗಳನ್ನು ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ. ಹೊನ್ನಾವರ ತಾಲೂಕಿನ ಪಾವಿನಕುರ್ವಾದಲ್ಲಿ ಕಾಳಜಿ ಕೇಂದ್ರದಲ್ಲಿ ಸುಮಾರು ಐವತ್ತು ಹೆಚ್ಚು ಆಶ್ರಯ ಪಡೆದಿದ್ದಾರೆ. ಕುಮಟಾದ ಧಾರೇಶ್ವರ ಮಠದ ಬಳಿ ಸಮುದ್ರ ನೀರು ಉಕ್ಕಿ ಬೋಟುಗಳು ಹಾಗೂ ಬಲೆಗಳು ನೀರಿನಲ್ಲಿ ಕೊಚ್ವಿ ಹೋಗಿದೆ. ತೊಂದರೆಗೊಳಗಾದ ಪ್ರದೇಶಕ್ಕೆ ಕುಮಟಾದ ಉಪವಿಭಾಗಾಧಿಕಾರಿ ಎಂ.ಅಜೀತ್ , ತಹಶೀಲ್ದಾರ್ ಎಂ.ಎನ್.ನಾಯ್ಕ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ತೌಕ್ತೆ ಚಂಡಮಾರುತ:
ಸಿಬ್ಬಂದಿಗಳು ಕೇಂದ್ರ ಸ್ಥಾನದಲ್ಲಿರಲು ನಗರಸಭೆ ಪೌರಾಯುಕ್ತ ಆರ್.ಪಿ.ನಾಯ್ಕ ಸೂಚನೆ
ಕಾರವಾರ
ಚಂಡಮಾರುತದ ಅಲರ್ಟ್ ಹಿನ್ನೆಲೆಯಲ್ಲಿ ಕಾರವಾರ ನಗರಸಭೆಯ ಎಲ್ಲಾ ಸಿಬ್ಬಂದಿಗಳು ಕೇಂದ್ರ ಸ್ಥಾನದಲ್ಲಿರುವಂತೆ ನಗರಸಭೆ ಪೌರಾಯುಕ್ತ ಆರ್.ಪಿ.ನಾಯ್ಕ ಸಿಬ್ಬಂದಿಗಳಿಗೆ ಸೂಚನೆ ನೀಡಿದ್ದಾರೆ.
ತೌಕ್ತೆ ಚಂಡಮಾರುತದ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಈಗಾಗಲೇ ಮೂರು ದಿನಗಳ ಕಾಲ ರೆಡ್ ಅಲರ್ಟ ಘೋಷಣೆಯಾಗಿದೆ. ಈ ಮೂರು ದಿನಗಳ ಕಾಲ ಭಾರಿ ಗಾಳಿ, ಮಳೆ ಸಂಭವಿಸಲಿರುವದರಿಂದ ಜನತೆಗೆ ತೊಂದರೆಯಾಗಲಿದೆ. ಹೀಗಾಗಿ ಮುಂಜಾಗೃತಾ ಕ್ರಮವಾಗಿ ಇಂದು ರವಿವಾರ ನಗರಸಭೆಯ ಎಲ್ಲಾ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಕೇಂದ್ರ ಸ್ಥಾನದಲ್ಲಿದ್ದು, ತಮ್ಮ ಮೊಬೈಲ್‍ಗಳನ್ನು ಸ್ವಿಚ್ ಆಫ್ ಆಗದಂತೆ ನೋಡಿಕೊಳ್ಳಬೇಕು. ಇನ್ನು ಆಕಸ್ಮಿಕ ಘಟನೆಗಳು ಉಂಟಾದಲ್ಲಿ ನಗರಸಭೆಯ ಸುಪರವೈಸರ್‍ಗಳು, ಪೌರ ಕಾರ್ಮಿಕರು ಹಾಗೂ ನಗರಸಭೆಯ ವಾಹನ ಚಾಲಕರುಗಳು ಕರ್ತವ್ಯ ನಿರ್ವಹಿಸಬೇಕಾಗಿದೆ. ಹೀಗಾಗಿ ಇವರೆಲ್ಲರೂ ಕರ್ತವ್ಯ ನಿರ್ವಹಿಸಲು ಸಜ್ಜಾಗಿರುವಂತೆ ಪೌರಾಯುಕ್ತ ಆರ್.ಪಿ.ನಾಯ್ಕ ಸೂಚನೆ ನೀಡಿದ್ದಾರೆ.
ನಗರಸಭೆಯಿಂದ 247 ಹೆಲ್ಪ್‍ಲೈನ್ ಚಂಡಮಾರುತಕ್ಕೆ ಸಂಬಂಧಿಸಿದಂತೆ ಮಳೆ ಗಾಳಿಯಿಂದ ಆಗುವ ಸಮಸ್ಯೆಗಳನ್ನು ನಿವಾರಿಸುವ ನಿಟ್ಟಿನಲ್ಲಿ ಸಾರ್ವಜನಿಕರ ಸಮಸ್ಯೆಗಳನ್ನು ಸ್ವೀಕರಿಸಿ, ಸ್ಪಂಧಿಸಲು ಕಾರವಾರ ನಗರಸಭೆ 247 ಸಹಾಯವಾಣಿ ಕೌಂಟರ್‍ನ್ನು ತೆರೆಯಲಾಗಿದೆ. ಸಾರ್ವಜನಿಕರು ಮಳೆ ಗಾಳಿಯಿಂದಾಗುವ ತೊಂದರೆಗಳನ್ನು ಸಹಾಯವಾಣಿ ದೂರವಾಣಿ ಸಂಖ್ಯೆ 222973 ಗೆ ಕರೆ ಮಾಡಬಹುದು.
ಅಲ್ಲದೇ ನಗರಸಭೆಯ ಸಿಬ್ಬಂದಿಗಳಾದ ಮಹಾಂತೇಶ ಭಜಕ್ಕನವರ ಮೊ: 8495833315, ನಿತಿನ ಶಿಂಧೆ ಮೊ: 8951872575, ಪ್ರಭಾಕರ ನಾಯ್ಕ ಮೊ: 7996531016, ನೂತನ ಶಿರೂರು ಮೊ: 8147991033, ಸರೋಜಾ ಗೌಡರ ಮೊ: 8884196851 ಹಾಗೂ ಲಕ್ಷಣ ತಾಂಡೇಲ ಮೊ: 9035592741 ಇವರನ್ನು ಕರೆ ಮಾಡಿ ಅಥವಾ ವಾಟ್ಸ್ಯಾಪ್ ಮೂಲಕ ಸಂಪರ್ಕಿಸಬಹುದು ಎಂದು ನಗರಸಭೆ ಪೌರಾಯುಕ್ತ ಆರ್.ಪಿ.ನಾಯ್ಕ ತಿಳಿಸಿದ್ದಾರೆ.