ತೌಕ್ತೆ ಚಂಡಮಾರುತಕ್ಕೆ ನಲುಗಿದ ಗುಜರಾತ್: 1000 ಕೋಟಿ ಪರಿಹಾರ ಪ್ರಕಟಿಸಿದ ಪಿಎಂ

ಅಹಮದಾಬಾದ್, ಮೇ19-ಗುಜರಾತ್​ನಲ್ಲಿ ತೌಕ್ತೆ ಚಂಡಮಾರುತದ ಅಬ್ಬರದಿಂದ ಹಾನಿಗೊಳಗಾದ ಪ್ರದೇಶಗಳಲ್ಲಿ ಪ್ರಧಾನಿ ನರೇಂದ್ರ ಇಂದು ವೈಮಾನಿಕ ಸಮೀಕ್ಷೆ ನಡೆಸಿ ಪರಿಸ್ಥಿತಿ ಅವಲೋಕಿಸಿದರು.
ಈ ವೇಳೆ ಅವರು ರಾಜ್ಯದಲ್ಲಿ ತಕ್ಷಣದ ಪರಿಹಾರ ಕ್ರಮಗಳಿಗಾಗಿ 1,000 ಕೋಟಿ ರೂ ಘೋಷಿಸಿದ್ದಾರೆ. ಇದರ ಜೊತೆಗೆ ಅವರು ಚಂಡ ಮಾರುತದಿಂದ ಪ್ರಾಣಕಳೆದುಕೊಂಡವ ಸಂತ್ರಸ್ತ ಕುಟುಂಬಗಳಿಗೆ 2 ಲಕ್ಷ, ಗಾಯಗೊಂಡವರಿಗೆ 50 ಸಾವಿರ ಪರಿಹಾರ ಪ್ರಕಟಿಸಿದ್ದಾರೆ.
ಗುಜರಾತ್​ ಮತ್ತು ಡಿಯುನಲ್ಲಿ ಚಂಡಮಾರುತದಿಂದ ಹಾನಿಗೊಳಗಾದ ಪ್ರದೇಶಗಳಿಗೂ ಪ್ರಧಾನಿ ಭೇಟಿ ನೀಡಿದರು. ಈ ವೇಳೆ ಅವರು ಉನಾ, ಡಿಯು, ಜಫರಾಬಾದ್​ ಮತ್ತು ಮಹುವಂತಹ ಪ್ರದೇಶಗಳಲ್ಲಿ ವೈಮಾನಿಕ ಸಮೀಕ್ಷೆ ನಡೆಸಿದರು. ಬಳಿಕ ಅಹಮದಾಬಾದ್​ನಲ್ಲಿ ಪರಿಶೀಲನಾ ಸಭೆ ನಡೆಸಿದರು.
ಗುಜರಾತ್​ನಲ್ಲಿ ಇದುವರೆಗೂ 2 ಲಕ್ಷ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ.​
ಅಹಮದಾಬಾದ್ ಏರ್​ಪೋರ್ಟ್​ ಸುತ್ತಲೂ ನೀರು ಆವರಿಸಿಕೊಂಡು, ವಿಮಾನ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ಗುಜರಾತ್​ನ ಬಹುತೇಕ ಎಲ್ಲ ಪ್ರಮುಖ ವಿಮಾನ ನಿಲ್ದಾಣಗಳೂ ಬಂದ್ ಆಗಿದೆ. ಗುಜರಾತ್​ನಲ್ಲಿ 1998ರ ನಂತರ ಕಳೆದ 23 ವರ್ಷಗಳಲ್ಲಿ ಉಂಟಾಗಿರುವ ಅತ್ಯಂತ ಭೀಕರ ಚಂಡಮಾರುತ ಇದು ಇದಾಗಿದೆ.