ತೌಕ್ತೆ ಅಬ್ಬರ: ಕಲ್ಲಂಗಡಿ ಬೆಳೆ ಹಾನಿ

ಉಡುಪಿ, ಮೇ ೨೦- ಅರಬಿ ಸಮುದ್ರದಲ್ಲಿ ಕಾಣಿಸಿಕೊಂಡ ತೌಕ್ತೆ ಚಂಡಮಾರುತದ ಪರಿಣಾಮ ಭಾರೀ ಗಾಳಿ-ಮಳೆಗೆ ಬೈಂದೂರು ತಾಲೂಕು ಶಿರೂರು ಗ್ರಾಮದ ರವೀಂದ್ರ ಶೆಟ್ಟಿ ಎಂಬವರು ಮೂರು ಎಕರೆ ಪ್ರದೇಶದಲ್ಲಿ ಬೆಳೆಸಿದ ಕಲ್ಲಂಗಡಿ ಬೆಳೆ ಸಂಪೂರ್ಣವಾಗಿ ಹಾನಿಗೊಂಡಿದೆ.
ಶಿರೂರು ಕರಾವಳಿ ಪ್ರದೇಶದಲ್ಲಿ ಅವರು ತಮ್ಮ ಮೂರು ಎಕರೆ ಪ್ರದೇಶದಲ್ಲಿ ಬೆಳೆದ ಕಲ್ಲಂಗಡಿ ಹಣ್ಣು ಕಟಾವಿಗೆ ಸಿದ್ಧವಾಗಿದ್ದು, ಪಶ್ಚಿಮ ಕರಾವಳಿ ಯಲ್ಲಿ ಹಠಾತ್ತನೆ ಉಂಟಾದ ಚಂಡಮಾರುತದಿಂದ ಮೂರು ದಿನಗಳ ಕಾಲ ಜಿಲ್ಲೆಯ ಕರಾವಳಿ ತೀರದಲ್ಲಿ ಭಾರೀ ಮಳೆ ಸುರಿದಿತ್ತು. ಈ ಮಳೆಯಿಂದ ರವೀಂದ್ರ ಶೆಟ್ಟಿ ಅವರು ಮೂರು ಎಕರೆ ಪ್ರದೇಶದಲ್ಲಿ ಬೆಳೆದು ಕಟಾವಿಗೆ ಸಿದ್ಧವಾದ ಕಲ್ಲಂಗಡಿ ಬೆಳೆಯ ಗದ್ದೆಯಲ್ಲಿ ನೀರು ನಿಂತು ಹಣ್ಣುಗಳು ಸಂಪೂರ್ಣ ಕೊಳೆತುಹೋಗಿವೆ. ಬೆಳೆ ಬೆಳೆಯಲು ಅವರು ಸುಮಾರು ಒಂದು ಲಕ್ಷ ರೂ. ಖರ್ಚುಮಾಡಿದ್ದಾರೆ ಎಂದು ಶಿರೂರಿನ ಗ್ರಾಮ ಲೆಕ್ಕಾಧಿಕಾರಿ ಸತೀಶ್ ಹೋಬಳಿದಾರ ತಿಳಿಸಿದ್ದಾರೆ. ಗದ್ದೆಯಲ್ಲಿರುವ ಕಲ್ಲಂಗಡಿ ಹಣ್ಣು ಹಾಗೂ ಬೆಳೆ ಸಂಪೂರ್ಣ ನಾಶವಾಗಿದೆ. ಇದರಿಂದ ಸುಮಾರು ಎರಡು ಲಕ್ಷ ರೂ. ನಷ್ಟದ ಅಂದಾಜು ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಕಚೇರಿಯ ದೈನಂದಿನ ಮಳೆ ಹಾನಿ ವರದಿ ತಿಳಿಸಿದೆ. ಮಂಗಳವಾರ ಸಂಜೆ ವೇಳೆ ಗಾಳಿ-ಮಳೆಯೊಂದಿಗೆ ಸಿಡಿಲು ಬಡಿದು ಕಾರ್ಕಳ ತಾಲೂಕು ಕಡ್ತಲ ಗ್ರಾಮದ ಸುಂದರ, ಜಯಂತ್ ನಾಯಕ್ ಆಗೂ ಸಂಜೀವ ಹೆಗ್ಡೆ ಎಂಬವರ ವಾಸ್ತವ್ಯದ ಮನೆಗಳಿಗೆ ಅಪಾರ ಹಾನಿ ಸಂಭವಿಸಿದೆ. ಒಟ್ಟಾರೆಯಾಗಿ ೮೦,೦೦೦ರೂ. ಗಳಿಗೂ ಅಧಿಕ ಹಾನಿ ಸಂಭವಿಸಿರುವ ಅಂದಾಜು ಮಾಡಲಾಗಿದೆ. ಗಾಳಿ-ಮಳೆಯಿಂದ ಬೈಂದೂರು ತಾಲೂಕು ಶಿರೂರು ಗ್ರಾಮದ ರಾಮ ಶುಕ್ರ ಎಂಬವರ ಮನೆಗೆ ೫೦,೦೦೦, ಬಿಜೂರು ಗ್ರಾಮದ ಪರಮೇಶ್ವರ ಎಂಬವರ ವಾಸ್ತವ್ಯದ ಪಕ್ಕಾ ಮನೆಗೆ ೭೫,೦೦೦ರೂ.ನಷ್ಟವಾಗಿದೆ. ಅದೇ ರೀತಿ ಶಿರೂರು ಗ್ರಾಮದ ಇಮಾಂ ಹುಸೈನ್ ಕರಿಕಟ್ಟೆ, ಗೋಳಿಹೊಳೆಯ ರಂಗು ಮರಾಠಿ, ಕಾಲ್ತೋಡು ಗ್ರಾಮದ ಬಸವರಾಜ ಎಂಬವರ ಮನೆಗೆ ಸುಮಾರು ಒಂದು ಲಕ್ಷ ರೂ.ಗಳಷ್ಟು ಹಾನಿ ಸಂಭವಿಸಿದೆ. ಬ್ರಹ್ಮಾವರ ತಾಲೂಕಿನ ೫೨ ಹೇರೂರು ಗ್ರಾಮದ ಸಂಜೀವ ಶೆಟ್ಟಿ,ಗಿಳಿಯಾರು ಗ್ರಾಮದ ಗಿರಿಜಾ ದೇವಾಡಿಗ, ಜಲಜ ದೇವಾಡಿಗ ಎಂಬವರ ಪಕ್ಕಾ ಮನೆಗಳಿಗೆ ಭಾಗಶ: ಹಾನಿಯಾಗಿದ್ದು ೫೦,೦೦೦ದಷ್ಟು ನಷ್ಟದ ಅಂದಾಜು ಮಾಡಲಾಗಿದೆ. ಬುಧವಾರ ಬೆಳಗ್ಗೆ ೮:೩೦ಕ್ಕೆ ಮುಕ್ತಾಯಗೊಂಡಂತೆ ಹಿಂದಿನ ೨೪ ಗಂಟೆಗಳಲ್ಲಿ ಉಡುಪಿ ಜಿಲ್ಲೆಯಲ್ಲಿ ಸರಾಸರಿ ೧೧ಮಿ.ಮೀ. ಮಳೆಯಾಗಿದೆ. ಹೆಬ್ರಿಯಲ್ಲಿ ೧೯, ಕುಂದಾಪುರದಲಿಲ ೧೩, ಕಾರ್ಕಳದಲ್ಲಿ ೧೨, ಬೈಂದೂರಿನಲ್ಲಿ ೯, ಬ್ರಹ್ಮಾವರದಲ್ಲಿ ೭, ಉಡುಪಿಯಲ್ಲಿ ೫ ಹಾಗೂ ಕಾಪುವಲ್ಲಿ ೪ ಮಿ.ಮೀ. ಮಳೆಯಾದ ಬಗ್ಗೆ ವರದಿ ಬಂದಿದೆ.