ತೋರಿಕೆ ಬದುಕಿಗಾಗಿ ನಮ್ಮನ್ನು ನಾವು ಕಳೆದುಕೊಳ್ಳುತ್ತಿದ್ದೇವೆ- ಡಾ.ಭಾಗ್ಯಲಕ್ಷ್ಮಿ ಭರಾಡೆ


ಸಂಜೆವಾಣಿ ವಾರ್ತೆ
ಹೊಸಪೇಟೆ ಜು16: ತೋರಿಕೆಯ ಬದುಕಿನ ಆಸೆಗೆ ಬಿದ್ದು ನಮ್ಮನ್ನು ನಾವು ಕಳೆದುಕೊಳ್ಳುತ್ತಿದ್ದೇವೆ ಎಂದು ಉಪನ್ಯಾಸಕರಾದ ಡಾ.ಭಾಗ್ಯಲಕ್ಷ್ಮಿ ಭರಾಡೆ ಅಭಿಪ್ರಾಯಪಟ್ಟರು. ಅವರು ವಿಕಾಸ ಬ್ಯಾಂಕಿನ ಬೆಳ್ಳಿಹಬ್ಬದ ಸಂಭ್ರಮಾಚರಣೆಯ ಪ್ರಯುಕ್ತ ಆನ್ಲೈನ್ ನಲ್ಲಿ ನಡೆದ ಮಹಿಳಾ ವಿಕಾಸ ಕಾರ್ಯಕ್ರಮದ ಭಾಗವಾಗಿ ಸ್ವಯಂ ಕಾಳಜಿ ವಿಷಯದ ಕುರಿತು ಉಪನ್ಯಾಸ ನೀಡಿದರು.
ಕೂಡು ಕುಟುಂಬವಿದ್ದಾಗ ಪರಸ್ಪರ ಕಾಳಜಿ ಇರುತ್ತಿತ್ತು, ಆದರೆ ಇಂದು ವಿಭಕ್ತ ಕುಟುಂಬಗಳು ಹೆಚ್ಚಾಗಿರುವುದರಿಂದ ನಮ್ಮ ಆರೋಗ್ಯದ ಬಗ್ಗೆ ನಾವೇ ಕಾಳಜಿ ವಹಿಸಬೇಕಾಗುತ್ತದೆ, ಅದರಲ್ಲೂ ಮಾನಸಿಕ ಆರೋಗ್ಯದ ಬಗ್ಗೆ ಹೆಚ್ಚು ಗಮನ ಹರಿಸಬೇಕೆಂದರು. ಸೌಕರ್ಯದ ಜೀವನದ ಆಸೆಗೆ ಬಿದ್ದು, ಒಳಗೆಲ್ಲೊ ನಾವು ಒಂಟಿತನ ಅನುಭವಿಸುತ್ತಿದ್ದೇವೆ. ಎಲ್ಲದರಲ್ಲೂ ಸಕಾರಾತ್ಮಕ ಆಲೋಚನೆಯನ್ನು ಅಳವಡಿಸಿಕೊಳ್ಳುವ ಮೂಲಕ ಆನಂದದಿಂದ ಹಾಗೂ ನೆಮ್ಮದಿಯಿಂದ ಬದುಕುವುದನ್ನು ಅಭ್ಯಾಸ ಮಾಡಿಕೊಳ್ಳೋಣ ಎಂಬ ಸಲಹೆ ನೀಡಿದರು.
ಕಾರ್ಯಕ್ರಮದ ಮುಖ್ಯ ಅತಿಥಿ   ನಿತ್ಯಾ ವಿಕಾಸ ರವರು ಮಾತನಾಡಿ ಗೃಹಿಣಿಯ ಒಳ್ಳೆಯ ಆರೋಗ್ಯ ಇಡಿ ಮನೆಗೆ ಭಾಗ್ಯ ಇದ್ದಹಾಗೆ ಎಂದರು.
 ಹೊಸಪೇಟೆ ಇಕ್ವಿಟಾಸ್ ಸಂಸ್ಥೆಯ ಉದ್ಯೋಗಿ ಕುಸುಮ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಉದ್ಯೋಗಿಕ ಮಹಿಳೆಗೆ ತಾಳ್ಮೆ ಮತ್ತು ಆರೋಗ್ಯ ಮುಖ್ಯವಾಗುತ್ತದೆ.
 ಅಧಿಕಾರಿ ಅರ್ಪಿತಾ ಖೋಡೆ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕಾರ್ಯಕ್ರಮವನ್ನು ಗಂಗಾವತಿ ಶಾಖೆ ಅಧಿಕಾರಿಗಳಾದ ಜಯಶ್ರೀ, ವಾರದ ಕಾವ್ಯ ಹಾಗೂ ಸೈಯದಾ ಫೈಸಿನ್ ನಿರ್ವಹಿಸಿದರು.