ತೋಟದ ಕೆರೆಗೆ ಬಿದ್ದು ಕಾಡಾನೆಗಳ ಒದ್ದಾಟ

ದಕ್ಷಿಣ ಕನ್ನಡ,ಏ.೧೩-ಸುಳ್ಯದ ಅಜ್ಜಾವರ ಎಂಬಲ್ಲಿ ನಾಲ್ಕು ಕಾಡಾನೆಗಳು ತೋಟದ ಕೆರೆಗೆ ಬಿದ್ದು ಪರದಾಡಿದ ಘಟನೆ ನಡೆದಿದೆ. ರಾತ್ರಿ ಆಹಾರ ಹುಡುಕುತ್ತ ಬಂದ ಕಾಡಾನೆಗಳು ಸುಳ್ಯದ ಅಜ್ಜಾವರದ ಸನತ್ ರೈ ಎಂಬವರ ತೋಟದ ಕೆರೆಗೆ ಬಿದ್ದಿವೆ. ಬಿದ್ದಿರುವ ಆನೆಗಳಲ್ಲಿ ಎರಡು ದೊಡ್ಡ ಆನೆ ಮತ್ತು ಎರಡು ಮರಿಗಳಿವೆ.
ಸದ್ಯ ಸ್ಥಳಕ್ಕೆ ಸುಳ್ಯ ಅರಣ್ಯ ಅಧಿಕಾರಿಗಳು ಆಗಮಿಸಿದ್ದು, ಜೆಸಿಬಿ ಬಳಸಿ ಕೆರೆಯನ್ನು ಅಗಲಮಾಡಿ ಕಾಡಾನೆಗಳನ್ನು ಹೊರತೆಗೆಯುವ ಪ್ರಯತ್ನ ನಡೆಸಲಾಗುತ್ತಿದೆ. ಇನ್ನು ಕಾಡಾನೆಗಳನ್ನು ಸೆರೆಹಿಡಿದು ಸ್ಥಳಾಂತರ ಮಾಡುವಂತೆ ಸ್ಥಳೀಯರು ಆಗ್ರಹಿಸುತ್ತಿದ್ದಾರೆ.
ಸುಳ್ಯ ತಾಲೂಕಿನಲ್ಲಿ ಕಾಡಾನೆಗಳ ಹಾವಳಿ ಹೆಚ್ಚಾಗಿದ್ದು, ಕಾಫಿ ತೋಟಕ್ಕೆ ನುಗ್ಗಿ ಬೆಳೆ ನಾಶ ಮಾಡುವುದು ಸಾಮಾನ್ಯವಾಗಿ ಬಿಟ್ಟಿದೆ. ಅದೇ ರೀತಿ ಅಜ್ಜಾವರದ ಸನತ್ ರೈ ಎಂಬವರ ತೋಟಕ್ಕೆ ಆನೆಗಳು ಬಂದಿದ್ದು, ಅಚಾನಕ್ ಆಗಿ ಕೆರೆಗೆ ಬಿದ್ದು ಮೇಲೆ ಬರಲಾರದೇ ಫಜೀತಿ ಪಟ್ಟಿವೆ.