ತೋಟದಲ್ಲಿ ರೈತ ಮಹಿಳೆಯರಿಂದ ಮಹಿಳಾ ದಿನಾಚರಣೆ

ಸಂಜೆವಾಣಿ ವಾರ್ತೆ,
ವಿಜಯಪುರ,ಮಾ.11 :ಸಮೃದ್ಧವಾಗಿ ಬೆಳೆದ ದ್ರಾಕ್ಷಿ ಬೆಳೆಗೆ ಕಾರಣಿಕರ್ತರು ರೈತ ಮಹಿಳೆಯರು. ಕೃಷಿ ಈ ದೇಶದ ಬೆನ್ನೆಲುಬು. ಆದರೆ ಕೃಷಿಯ ಬೆನ್ನೆಲುಬು ಮಹಿಳೆ ಎಂದು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ತಮ್ಮ ತೋಟದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಪ್ರಗತಿಪರ ರೈತ ಸುರೇಶ ಗೆಜ್ಜಿ ಅವರು ಅಭಿಪ್ರಾಯ ಪಟ್ಟರು.
ರೈತ ಬೆಳೆದಾಗ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ. ಹಣದಿಂದ ಹೊಟ್ಟೆ ತುಂಬುವುದಿಲ.್ಲ ಹೊಟ್ಟೆ ತುಂಬಬೇಕಾದರೆ ಅನ್ನವೇ ಬೇಕೆಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಬಸವನ ಬಾಗೇವಾಡಿಯ ಭಾರತೀಯ ಸ್ಟೇಟ್ ಬ್ಯಾಂಕ್ ಆರ್ಥಿಕ ಆಪ್ತ ಸಮಾಲೋಚಕ ವೀರಣ್ಣ ಚಿಮ್ಮಲಗಿ ಅವರು, ಬ್ಯಾಂಕಿನಿಂದ ಮಹಿಳೆಯರಿಗೆ ದೊರೆಯುವ ಸಾಲ ಮತ್ತು ಸೇವೆಗಳ ಬಗ್ಗೆ ವಿವರಿಸಿದರು.
ಇದೇ ವೇಳೆ ಪ್ರಧಾನಮಂತ್ರಿ ಜೀವನ ಸುರಕ್ಷಾ ಮತ್ತು ಜೀವನ ಜ್ಯೋತಿ ವಿಮೆಗಳ ಬಗ್ಗೆ ಮಹತ್ವ ತಿಳಿಸಿ, ಎಲ್ಲರೂ ಈ ಸಾಮಾಜಿಕ ಭದ್ರತಾ ವಿಮಾ ಯೋಜನೆಗಳಿಗೆ ಒಳಪಡಲು ಒತ್ತಾಯಿಸಿದರು.
ಪ್ರೌಢಶಾಲಾ ಮುಖ್ಯೋಪಾಧ್ಯಾಯರಾದ ಕಮಲಾ ಗೆಜ್ಜಿ (ಮುರಾಳ) ಅವರು ಮಹಿಳಾ ಸಬಲೀಕರಣ ಬಗ್ಗೆ ವಿವರಿಸಿ, ಮಹಿಳೆಯರು ಮಕ್ಕಳಿಗೆ ಒಳ್ಳೆಯ ಸಂಸ್ಕಾರ ಕೊಡಲು ತಿಳಿಸಿದರು.
ಎಲ್ಲ ರೈತ ಮಹಿಳೆಯರಿಗೆ ಗೆಜ್ಜಿ ದಂಪತಿಗಳು ಸನ್ಮಾನಿಸಿ, ಸಿಹಿ ಹಂಚಿದರು. ರೈತ ಮಹಿಳೆಯರಾದ ಈರಮ್ಮ ಉಳ್ಳಾಗಡ್ಡಿ, ಭಾಗ್ಯ ಹಡಪದ ಮತ್ತು ನಂದಿಹಾಳ ಗ್ರಾಮದ 40 ರೈತ ಮಹಿಳೆಯರು ಉಪಸ್ಥಿತರಿದ್ದರು.
ಡಾ. ಜ್ಯೋತಿ ಗೆಜ್ಜಿ ಅವರ ಶಿವರಾತ್ರಿಯ ಸುಶ್ರಾವ್ಯ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮ ಅಶೋಕ ರಾಠೊಡ ಅವರ ವಂದನಾರ್ಪಣೆಯೊಂದಿಗೆ ಮುಕ್ತಾಯವಾಯಿತು.