ತೋಟಗಾರಿಕೆ ಬೆಳೆಯಲ್ಲಿ ಯಶಸ್ಸುಕಂಡ ಸ್ವಾವಲಂಬಿ :ರೈತಮಹಿಳೆ ಮೋದಿನ್ ಬೀ
“ಬರಡು ನೆಲಕ್ಕೆ : ಹಸಿರು ತೊಡಿಸಿದ ರೈತಮಹಿಳೆ “


ಜಾಲಿಹಾಳ್ ರಾಜಾಸಾಬ್
ಸಿರುಗುಪ್ಪ, ಮಾ.25: ಪುರುಷರು ಮಾತ್ರವಲ್ಲ, ಮಹಿಳೆಯರು ಕೂಡ ಯಶಸ್ವಿಯಾಗಿ ವ್ಯವಸಾಯ ಮಾಡಬಹುದು ಎಂದು ಸಾಧಿಸಿ ತೋರಿಸಿದ್ದಾರೆ ಸಿರುಗುಪ್ಪ ತಾಲ್ಲೂಕಿನ ಶಾನವಾಸಪುರ ಗ್ರಾಮದ ರೈತಮಹಿಳೆ ಮೋದಿನ್ ಬೀ.
ಶಾನವಾಸಪುರ ಗ್ರಾಮದ ಮೋದಿನ್ ಬೀ ಗಂಡ ಖಾನ್ ಸಾಬ್ ತೀರಿದ ಮೇಲೆ ಕೃಷಿ ಭೂಮಿಯ ಸಂಪೂರ್ಣ ಜವಾಬ್ದಾರಿ ಹೊತ್ತುಕೊಂಡರು. ಅವರಿಗೆ ಈಗ 62 ವರ್ಷ, 6ವರ್ಷಗಳಿಂದ ಕೃಷಿಯಲ್ಲಿ ತೊಡಗಿಕೊಂಡಿದ್ದಾರೆ. ವ್ಯವಸಾಯವೇ ಜೀವನ ಎನ್ನುವಷ್ಟರ ಮಟ್ಟಿಗೆ ಕೃಷಿಯನ್ನು ಮೈಗೂಡಿಸಿಕೊಂಡು, ಹಳ್ಳಿಗಾಡಿನ ಮಹಿಳೆಯರು ಕೂಲಿಗಾಗಿ ಪಟ್ಟಣದ ಕಡೆ ಮುಖ ಮಾಡಿರುವಾಗ, ಇವರು ಸಹಜಕೃಷಿಯತ್ತ ಒಲವು ತೋರಿ ಸಾಧನೆ ಮಾಡಿ ಮಹಿಳೆಯರಿಗೆ ಮಾದರಿಯಾಗಿದ್ದಾರೆ.
ಭತ್ತದ ನಾಡಿನಲ್ಲಿ ಸಾಂಪ್ರದಾಯಿಕ ಬೆಳೆಗಳಿಗೆ ಜೋತು ಬೀಳದೆ ಮಿಶ್ರ ಬೇಸಾಯ, ಅರಣ್ಯ ಆಧಾರಿತ ಕೃಷಿಯತ್ತ ಒಲವು ತೋರಿ ನುಗ್ಗೆ, ಪೇರಲ, ಸೀತಾಫಲ, ನಿಂಬೆ, ಟೊಮೆಟೊ ಜೊತೆಗೆ ಮಹಾಗನಿ, ಶ್ರೀಗಂಧ, ರಕ್ತಚಂದನ ಮುಂತಾದ ಹತ್ತಾರು ವಾಣಿಜ್ಯ ಬೆಳೆಗಳನ್ನು ಬೆಳೆದು ಪುರುಷರಿಗೆ ಸರಿಸಾಟಿಯಾಗಿ ಬೆಳೆದು ನಿಂತ ರೈತಮಹಿಳೆ ಮೋದಿನ್ ಬೀ ಮಹಿಳೆಯರಿಗೆ ಪ್ರೇರಣೆಯಾಗಿದ್ದಾರೆ.
“ಹಸಿರು ಕಂಡ ಬರಡು ನೆಲೆ ” : ಯಾವುದೇ ನೀರಾವರಿಯ ಸೌಲಭ್ಯ ಇಲ್ಲದ ಬರಡು ಭೂಮಿಗೆ ಮೂರು ಕೊಳವೆ ಬಾವಿ ಕೊರೆಯಿಸಿ ಜಮೀನಿಗೆ ಹನಿ ನೀರಾವರಿ ಮೂಲಕ 7 ಎಕರೆಯಲ್ಲಿ ಹಸಿರು ನಳನಳಿಸುವಂತೆ ಮಾಡಿದ್ದಾರೆ. ತೋಟಗಾರಿಕೆ ಹಾಗೂ ಅರಣ್ಯ ಇಲಾಖೆಯ ಸಹಕಾರದಿಂದ ಬೆಳೆಗಳ ಕುರಿತು ಮಾಹಿತಿ ಪಡೆದು ಈ ಸಾಹಸಕ್ಕೆ ಕೈ ಹಾಕಿದ್ದಾರೆ. ಅವರು 4.50 ಎಕರೆಯಲ್ಲಿ ತೋಟಗಾರಿಕೆ ಬೆಳೆಗಳಾದ ನುಗ್ಗೆ 600ಗಿಡ, ಪೇರಲ 200ಗಿಡ, ಸೀತಾಫಲ 500ಗಿಡ, ನಿಂಬೆ50 ಗಿಡಗಳು ಬೆಳೆದಿದ್ದಾರೆ.
ಜೊತೆಗೆ ಅರಣ್ಯ ಬೆಳೆಗಳಾದ ಮಹಾಗನಿ 2500ಗಿಡ, ಶ್ರೀಗಂಧ 300ಗಿಡ, ರಕ್ತ ಚಂದನ 100ಗಿಡ, ಹೆಬ್ಬೇವು 150ಗಿಡ ಮತ್ತು ಜಂಬೂನೇರಳೆಯ 50ಗಿಡ ಬೆಳೆಸಿದ್ದಾರೆ.
ಕೊತಂಬರಿ, ಪಾಲಕ್, ಮೆಂತೆ ಪಲ್ಲೆ, ಬೆಂಡೆಕಾಯಿ, ಬದನೆ, ಟೊಮೊಟೊ ಮುಂತಾದ  ತರಕಾರಿಯನ್ನು ಅಂತರ ಬೆಳೆಯಾಗಿ ಬೆಳೆದು ಆದಾಯ ಗಳಿಸುತ್ತಿದ್ದಾರೆ.
ಸಾವಯವ ಕೃಷಿಯೇ ಜೀವಾಳ : ಗಿಡಮರಗಳಿಂದ ಉದುರಿದ ಎಲೆ ಮತ್ತು ನುಗ್ಗೇಸೊಪ್ಪು ದನಕರುಗಳ ಗಂಜಲದಿಂದ ಜೀವಾಮೃತ ಮತ್ತು ಪಂಚಗವ್ಯ ತಯಾರಿಸಿಕೊಂಡು ಸಿಂಪರಣೆ ಮಾಡುತ್ತಾರೆ. ಮೋದಿನ್ ಬೀ ಇವರ ನಾಲ್ಕು ಮಕ್ಕಳಲ್ಲಿ ಇಮಾಂ ಹುಸೇನ್ ಮತ್ತು ನೂರ್ ಮೊಹಮ್ಮದ್ ತಾಯಿಯೊಂದಿಗೆ ಕೃಷಿ ಕೆಲಸದಲ್ಲಿ ತೊಡಗಿದ್ದಾರೆ.
2022-23ನೇ ಸಾಲಿನ ಕೃಷಿ ಇಲಾಖೆಯ ಆತ್ಮಯೋಜನೆ ಅಡಿಯಲ್ಲಿ ಸಿರುಗುಪ್ಪ ತಾಲ್ಲೂಕು ಮಟ್ಟದ ಶ್ರೇಷ್ಠ ಕೃಷಿಕ ಪ್ರಶಸ್ತಿಗೆ ರೈತಮಹಿಳೆ ಮೋದಿನ್ ಬೀ ಭಾಜನರಾಗಿದ್ದಾರೆ.