ಬೀದರ,ಜೂ 6: ಇಲ್ಲಿನ ತೋಟಗಾರಿಕೆ ಮಹಾವಿದ್ಯಾಲಯದಲ್ಲಿ ವಿಶ್ವ ಪರಿಸರ ದಿನ ಆಚರಿಸಲಾಯಿತು.
ಮಹಾ ವಿದ್ಯಾಲಯದ ಡೀನ್‍ಡಾ. ಎಸ್.ವಿ. ಪಾಟೀಲ ಅವರು ವಿವಿಧ ಸಸಿಗಳನ್ನು ನೆಡುವ ಮುಖಾಂತರ ಕಾರ್ಯಕ್ರಮವನ್ನು ಉದ್ಘಾಟಿಸಿದರು.ನಂತರ ಮಾತನಾಡಿದ ಅವರು ಪರಿಸರದ ಬಗ್ಗೆ ಕಾಳಜಿ ವಹಿಸಬೇಕಾಗಿರುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಈ ವರ್ಷದ ವಿಶ್ವ ಪರಿಸರ ದಿನವನ್ನು ಬೀಟ್ ಪ್ಲಾಸ್ಟಿಕ್ ಪೊಲ್ಯುಷನ್ ಎಂಬ ಥೀಮ್‍ನೊಂದಿಗೆ ಪ್ಲಾಸ್ಟಿಕ್‍ನ ಉತ್ಪಾದನೆ, ಬಳಕೆ, ವಿಲೇವಾರಿ ಮತ್ತು ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸುವ ಸಂಬಂಧ ಹಾಗೂ ಸಕಲ ಜೀವ ಸಂಕುಲಕ್ಕೆ ಪರಿಸರ ಬಹಳ ಮಹತ್ವ ಪಾತ್ರ ವಹಿಸುತ್ತದೆ ಆದ್ದರಿಂದ ಎಲ್ಲಾ ವಿದ್ಯಾರ್ಥಿಗಳು ಕನಿಷ್ಟ ಒಂದೊಂದು ಸಸಿಗಳನ್ನು ನೆಡುವುದನ್ನು ನಿಶ್ಚಯಿಸಬೇಕೆಂದು ಕರೆ ನೀಡಿದರು. ಈ ಸಂದರ್ಭದಲ್ಲಿ ಶಿಕ್ಷಕ, ಶಿಕ್ಷಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳೆಲ್ಲರೂ ಮಹಾವಿದ್ಯಾಲಯದ ಆವರಣದಲ್ಲಿ ಪಾರ್ಥೇನಿಯಂ ಕಳೆಗಳನ್ನು ಕೀಳುವ ಮೂಲಕ ಶ್ರಮದಾನವನ್ನು ಮಾಡಿದರು.
ರಾಷ್ಟ್ರೀಯ ಸೇವಾ ಯೋಜನೆ ಅಧಿಕಾರಿ ಡಾ. ಕಾವಳೆ ನಾಗೇಂದ್ರ ಮತ್ತು ಡಾ. ರಾಜಕುಮಾರ ಎಂ., ಕಾರ್ಯಕ್ರಮವನ್ನು ಆಯೋಜಿಸಿದರು. ವಿದ್ಯಾರ್ಥಿನಿ ಪ್ರಕೃತಿ ಕಾರ್ಯಕ್ರಮನಿರೂಪಿಸಿದರು.ಲಗಮಣ್ಣ ಭಾವಿಮನಿಯವರು ಭಾವಗೀತೆ ಹಾಡಿದರು. ಸಹಾಯಕ ವಿದ್ಯಾರ್ಥಿಗಳ ಕಲ್ಯಾಣ ನಿರ್ದೇಶಕ ಡಾ. ಅಶೋಕ ಸೂರ್ಯವಂಶಿ, ಮಹಾವಿದ್ಯಾಲಯದ ಶಿಕ್ಷಕ, ಶಿಕ್ಷಕೇತರ ಸಿಬ್ಬಂದಿ, ಕಾರ್ಮಿಕ ವರ್ಗದವರು ಮತ್ತು ದ್ವಿತೀಯ ವರ್ಷದ ವಿದ್ಯಾರ್ಥಿಗಳು ಹಾಜರಿದ್ದು ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.