ತೋಟಗಾರಿಕೆ ಉತ್ಪನ್ನ ಸರ್ಕಾರ ಖರೀದಿಸಲಿ

ಬೆಂಗಳೂರು,ಜೂ. ೧- ಲಾಕ್‌ಡೌನ್‌ನಿಂದ ಸಂಕಷ್ಟದಲ್ಲಿರುವ ರೈತರ ತರಕಾರಿ, ಹೂ, ಹಣ್ಣುಗಳನ್ನು ಸರ್ಕಾರವೇ ಖರೀದಿಸಿ ರೈತರಿಗೆ ನೆರವಾಗಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಒತ್ತಾಯಿಸಿದ್ದಾರೆ.
ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉತ್ತರ ಕರ್ನಾಟಕಕ್ಕೆ ಭೇಟಿ ನೀಡಿದ್ದೆ. ಅಲ್ಲಿನ ರೈತರ ಪರಿಸ್ಥಿತಿ ಅಯೋಮಯವಾಗಿದೆ. ಅವರನ್ನು ಯಾರು ಕಾಪಾಡುತ್ತಾರೋ ಗೊತ್ತಿಲ್ಲ. ಪರಿಸ್ಥಿತಿ ತೀರಾ ಕೆಟ್ಟಿದೆ. ಸರ್ಕಾರ ರೈತರ ನೆರವಿಗೆ ನಿಲ್ಲಬೇಕು ಎಂದರು.
ರೈತರ ತರಕಾರಿ, ಹೂ, ಹಣ್ಣು ಎಲ್ಲವನ್ನೂ ಕೃಷಿ ತೋಟಗಾರಿಕಾ ಇಲಾಖೆಯಿಂದ ಒಂದು ದರ ನಿಗದಿ ಮಾಡಿ ಖರೀದಿಸಿ ಎಂದು ಅವರು ಸರ್ಕಾರವನ್ನು ಆಗ್ರಹಿಸಿದರು.
ಸರ್ಕಾರ ಲಾಕ್‌ಡೌನ್ ಬಾಧಿತರಿಗೆ ಘೋಷಿಸಿರುವ ಪ್ಯಾಕೇಜ್ ರಿಯಲ್ ಅಲ್ಲ ರೀಲ್ ಪ್ಯಾಕೇಜ್ ಎಂದು ಅವರು ಟೀಕಿಸಿ, ಅಸಂಘಟಿತ ಕಾರ್ಮಿಕರು, ಬೀದಿ ಬದಿ ವ್ಯಾಪಾರಿಗಳಿಗೆ ಆನ್‌ಲೈನ್‌ನಲ್ಲಿ ಅರ್ಜಿ ಹಾಕೋದೆ ಗೊತ್ತಿಲ್ಲ. ಅದೆಲ್ಲ ಗೊತ್ತಿದ್ದರೆವಿಧಾಸೌಧಕ್ಕೆ ಬಂದು ಕೆಲಸ ಮಾಡುತ್ತಿದ್ದರು. ಸರ್ಕಾರ ಸರಿಯಾಗಿ ಪರಿಹಾರ ವಿತರಿಸಬೇಕು ಎಂದು ಒತ್ತಾಯಿಸಿದರು.
ಸಿನಿಮಾ ರಂಗದವರು ತಮ್ಮನ್ನು ಭೇಟಿ ಮಾಡಿ ಅವರ ನೋವು-ದುಃಖವನ್ನು ತೋಡಿಕೊಂಡಿದ್ದಾರೆ. ಸರ್ಕಾರದ ಪ್ಯಾಕೇಜ್‌ನಿಂದ ಯಾರಿಗೂ ಪ್ರಯೋಜನವಾಗಿಲ್ಲ ಎಂದರು.
ಕೊರೊನಾ ಸಾವಿನ ಬಗ್ಗೆ ಸುಳ್ಳು ಅಂಕಿ-ಅಂಶ ನೀಡುತ್ತಿಲ್ಲ ಎಂಬ ಸಚಿವ ಸುಧಾಕರ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಸುಧಾಕರ್ ಅಣ್ಣಾ ಔಷಧಿ ಕೊಡಿಸಣ್ಣ, ಔಷಧಿ ಕೊಡಿಸುವುದನ್ನು ನೋಡಣ್ಣ ಡೆತ್ ಆಡಿಟ್ ಕೆಲಸ ಬೇಡ. ಅದನ್ನು ಬಿಬಿಎಂಪಿ ಕಂದಾಯ ಇಲಾಖೆ ಮಾಡುತ್ತಾರೆ. ಔಷಧಿ, ವ್ಯಾಕ್ಸಿನ್ ನೋಡಿಕೋ ಎಂದು ವ್ಯಂಗ್ಯವಾಡಿದರು.
ರಾಜಸ್ಥಾನದಲ್ಲಿ ಡೆತ್ ಆಡಿಟ್ ರಿಪೋರ್ಟ್ ಬಿಡುಗಡೆಯಾಗಿದೆ. ಇಲ್ಲೂ ಬಿಡುಗಡೆ ಮಾಡಿ ಎಂದು ಒತ್ತಾಯಿಸಿದರು.
ಪವರ್ ಬೆಗ್ಗರ್‍ಸ್
ಮುಖ್ಯಮಂತ್ರಿ ಅವರ ಪುತ್ರ ವಿಜಯೇಂದ್ರ ಹಾಗೂ ಸಚಿವ ಯೋಗೇಶ್ವರ್ ಅವರ ದೆಹಲಿ ಭೇಟಿ, ನಾಯಕತ್ವ ಬದಲಾವಣೆಗೆ ಸಂಬಂಧಿಸಿದಂತೆ ಸಚಿವ ಯೋಗೇಶ್ವರ್ ಅವರ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಅವರು, ಇವರೆಲ್ಲ ಪವರ್ ಬೆಗ್ಗರ್‍ಸ್. ಯಡಿಯೂರಪ್ಪ ಎಲ್ಲರನ್ನೂ ಕರೆತಂದು ಈಗ ಅವರೇ ಅನುಭವಿಸುತ್ತಿದ್ದಾರೆ. ಯಾರು ಎಲ್ಲಿಗೆ ಬೇಕಾದರು ಹೋಗಲಿ ನಾನು ಆ ಬಗ್ಗೆ ಮಾತನಾಡಲ್ಲ ಎಂದರು.
ಅಭಿನಂದನೆ
ದೇವೇಗೌಡರು ಪ್ರಧಾನಿಯಾಗಿ ೨೫ ವರ್ಷ ಪೂರೈಸಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ದೆಹಲಿಯಲ್ಲಿ ದಕ್ಷಿಣದವರು ರಾಜಕಾರಣ ಮಾಡಲು ಆಗಲ್ಲ, ಅಂತದರಲ್ಲಿ ಅವರು ಪ್ರಧಾನಿಯಾಗಿ ರಾಜ್ಯದ ದುಃಖ-ದುಮ್ಮಾನಗಳಿಗೆ ಧ್ವನಿಯಾಗಿದ್ದರು. ಅವರ ಉತ್ಸಾಹವನ್ನು ಅಭಿನಂದಿಸುತ್ತೇನೆ ಎಂದರು.