ತೋಟಗಾರಿಕೆಗೆ ಖಾತರಿ ಯೋಜನೆ ನೆರವು ಪಡೆಯಿರಿ

ಬೀದರ್: ಜು.28:ಗ್ರಾಮೀಣ ಪ್ರದೇಶದ ರೈತರು ತೋಟಗಾರಿಕೆ ಬೆಳೆ ಬೆಳೆದು ಆರ್ಥಿಕ ಅಭಿವೃದ್ಧಿ ಸಾಧಿಸಲು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ನೆರವು ಪಡೆಯಬೇಕು ಎಂದು ಮನ್ನಳ್ಳಿ ರೈತ ಸಂಪರ್ಕ ಕೇಂದ್ರದ ಸಹಾಯಕ ತೋಟಗಾರಿಕೆ ಅಧಿಕಾರಿ ಆನಂದ ಬಿರಾದಾರ ಸಲಹೆ ಮಾಡಿದರು.

ತಾಲ್ಲೂಕಿನ ಚಿಂತಲಗೇರಾ ಗ್ರಾಮದಲ್ಲಿ ರೈತರೊಂದಿಗೆ ಸಾಫ್ಟ್‍ವೇರ್ ಎಂಜಿನಿಯರ್ ಸಂದೀಪ್ ಧನರಾಜ ಅವರು ಬೆಳೆದ ಬಾಳೆಯನ್ನು ವೀಕ್ಷಿಸಿ ಅವರು ಮಾತನಾಡಿದರು.

ಕೋವಿಡ್ ವೇಳೆ ಕೆಲಸ ಕಳೆದುಕೊಂಡು ಊರಿಗೆ ಮರಳಿದ ಸಂದೀಪ್ ಕೃಷಿಯಲ್ಲಿ ಆಸಕ್ತಿ ತೋರಿ, ತೋಟಗಾರಿಕೆ ಇಲಾಖೆ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಖಾತರಿ ಯೋಜನೆ ನೆರವಿನಡಿ ಬಾಳೆ (ಅಂಗಾಂಶ ಕೃಷಿ) ಬೆಳೆದಿದ್ದಾರೆ ಎಂದು ಹೇಳಿದರು.

ಯೋಜನೆಯಡಿ ಬೆಳೆಗೆ ಸಂಬಂಧಿಸಿದ ಕಾಮಗಾರಿಯ ಕೂಲಿಗೆ ರೂ. 1.31 ಲಕ್ಷ ಪಡೆದಿದ್ದಾರೆ. ಬಾಳೆ ಸಮೃದ್ಧವಾಗಿ ಬೆಳೆದಿದೆ. ಅವರು ರೂ. 10 ಲಕ್ಷದಿಂದ ರೂ. 12 ಲಕ್ಷ ಆದಾಯದ ನಿರೀಕ್ಷೆಯಲ್ಲಿದ್ದಾರೆ ಎಂದು ತಿಳಿಸಿದರು.

ತೋಟಗಾರಿಕೆ ಇಲಾಖೆ ಸಹಾಯ ಧನ ಹಾಗೂ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಗ್ರಾಮದ ಮತ್ತೊಬ್ಬರು ರೈತ ಪಪ್ಪಾಯ ಬೆಳೆದಿದ್ದಾರೆ. ಅವರಿಗೆ ರೂ. 3 ಲಕ್ಷ ಆದಾಯ ದೊರಕುವ ನಿರೀಕ್ಷೆ ಇದೆ ಎಂದು ಹೇಳಿದರು.

ತೋಟಗಾರಿಕೆ ಇಲಾಖೆಯಿಂದ ಮಾವು, ನಿಂಬೆ, ಪಪ್ಪಾಯ, ಬಾಳೆ, ಸೀಬೆ, ನುಗ್ಗೆ, ನೆಲ್ಲೆಕಾಯಿ ತೋಟ ಅಭಿವೃದ್ಧಿಪಡಿಸಲು ಮಾರ್ಗದರ್ಶನ ನೀಡಲಾಗುತ್ತಿದೆ. ರೈತರು ಖಾತರಿ ಯೋಜನೆ ಅಡಿ ತೋಟಗಾರಿಕೆ ಬೆಳೆ ಬೆಳೆಯಲು ಗ್ರಾಮ ಪಂಚಾಯಿತಿಯ ವಾರ್ಷಿಕ ಕ್ರೀಯಾ ಯೋಜನೆಯಲ್ಲಿ ಹೆಸರು ಸೇರಿಸಬೇಕು ಎಂದು ಸಲಹೆ ಮಾಡಿದರು.

ನರೇಗಾ ಅಡಿ ಸರ್ಕಾರಿ ಶಾಲಾ ಕಾಲೇಜು, ಅಂಗನವಾಡಿಗಳಲ್ಲಿ ಪೌಷ್ಟಿಕ ಕೈತೋಟ, ಹೂ ತೋಟ ನಿರ್ಮಾಣ, ಮಾವು ಪುನಃಶ್ಚೇತನ, ಈರುಳ್ಳಿ ಶೇಖರಣಾ ಘಟಕ ಹಾಗೂ ಹೊಸ ಪ್ರದೇಶ ಕಾರ್ಯಕ್ರಮದ ಲಾಭ ಪಡೆಯಲು ಅಗತ್ಯ ಮಾಹಿತಿಗೆ ತೋಟಗಾರಿಕೆ ಇಲಾಖೆ ಕಚೇರಿಯನ್ನು ಸಂಪರ್ಕಿಸಬಹುದು ಎಂದು ಹೇಳಿದ್ದಾರೆ.

ರೈತರಾದ ಬಸವರಾಜ ಕಾಶೆಂಪುರ, ಪ್ರಕಾಶ ಮತ್ತಿತರರು ಇದ್ದರು.