ತೊರದೇವಂಡಹಳ್ಳಿ ಪ್ರೌಢಶಾಲಾ ಮಕ್ಕಳಿಗೆ ೪೩ ಪ್ರಶಸ್ತಿಗಳು

ಕೋಲಾರ,ಆ,೨೨- ಪ್ರಾಥಮಿಕ ಹಾಗೂ ಪ್ರೌಢಶಾಲಾ ಹಂತದ ತಾಲ್ಲೂಕು ಮಟ್ಟದ ಕ್ರೀಡಾಕೂಟದಲ್ಲಿ ತಾಲ್ಲೂಕಿನ ತೊರದೇವಂಡಹಳ್ಳಿ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಕುಸ್ತಿಯ ವಿವಿಧ ವಿಭಾಗಗಳಲ್ಲಿ ೧೪ ವರ್ಷ ವಯೋಮಿತಿಯಲ್ಲಿ ೯ ಮಂದಿ, ೧೭ ವರ್ಷ ವಯೋಮಿತಿಯಲ್ಲಿ ೧೨ ಮಂದಿ ಗೆಲುವು ಸಾಧಿಸಿ ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದ್ದು, ಜಿಲ್ಲಾ ದೈಹಿಕ ಶಿಕ್ಷಣ ಅಧೀಕ್ಷಕ ಮಂಜುನಾಥ್ ಅಭಿನಂದಿಸಿದರು.
ಉತ್ತಮ ಆರೋಗ್ಯ ಮಾತ್ರವಲ್ಲ, ನಿಮ್ಮಲ್ಲಿ ಕಲಿಕೆಗೆ ಅಗತ್ಯವಾದ ಕ್ರಿಯಾಶೀಲತೆ ತುಂಬಲೂ ಸಹಾ ಕ್ರೀಡೆಗಳು ಸಹಕಾರಿಯಾಗಿವೆ, ಜಿಲ್ಲಾ, ರಾಜ್ಯ, ರಾಷ್ಟ್ರಮಟ್ಟದಲ್ಲೂ ಉತ್ತಮ ಸಾಧನೆ ಮಾಡುವ ಮೂಲಕ ಜಿಲ್ಲೆಯ ಕೀರ್ತಿ ಹೆಚ್ಚಿಸಿ ಮತ್ತು ಕ್ರೀಡಾ ಸಾಧಕರಾಗಿ ಹೊರಹೊಮ್ಮಿ ಎಂದು ಶುಭ ಹಾರೈಸಿದರು.
ಇದೇ ಸಂದರ್ಭದಲ್ಲಿ ನಡೆದ ಜೂಡೋ ಪಂದ್ಯಗಳ ೧೪ರ ವರ್ಷ ವಯೋಮಿತಿಯಲ್ಲಿ ೧೨ ಮಂದಿ ಹಾಗೂ ೧೭ ವರ್ಷ ವಯೋಮಿತಿಯಲ್ಲಿ ೧೦ ಮಂದಿ ತೊರದೇವಂಡಹಳ್ಳಿ ಶಾಲೆಯ ವಿದ್ಯಾರ್ಥಿಗಳೇ ಆಯ್ಕೆಯಾಗಿದ್ದು, ಜಿಲ್ಲಾಮಟ್ಟದಲ್ಲೂ ಸಾಧಕರಾಗಿ ಎಂದು ತಿಳಿಸಿ ಎಲ್ಲರಿಗೂ ಶುಭ ಕೋರಿದರು.
ಶಾಲೆಯ ಮುಖ್ಯಶಿಕ್ಷಕ ಮುನಿಯಪ್ಪ ಮಾತನಾಡಿ, ನಮ್ಮ ಶಾಲೆಯ ಮಕ್ಕಳು ಪ್ರತಿ ವರ್ಷವೂ ಕುಸ್ತಿ ಹಾಗೂ ಜೂಡೋ ಪಂದ್ಯಗಳಲ್ಲಿ ಇಡೀ ಜಿಲ್ಲೆಯಲ್ಲೇ ಉತ್ತಮ ಸಾಧಕರಾಗಿ ಹೊರಹೊಮ್ಮುತ್ತಿದ್ದು, ಈ ಸಾಧನೆಗೆ ಕಾರಣರಾದ ಶಾಲೆಯ ದೈಹಿಕ ಶಿಕ್ಷಕ ಮುರಳಿ ಮೋಹನ್ ಅವರನ್ನು ಅಭಿನಂದಿಸಿದರು.
ತೊರದೇವಂಡಹಳ್ಳಿ ಶಾಲೆಯ ಮಕ್ಕಳು ಒಟ್ಟಾರೆ ೪೩ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದು, ವಿಧ್ಯಾರ್ಥಿ/ನಿಯರನ್ನು ಹಾಗೂ ತರಭೇತಿ ನೀಡಿದ ದೈ.ಶಿ.ಶಿ ಮುರಳಿ ಮೋಹನ್‌ರನ್ನು ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಮಂಜುನಾಥ್, ತಾಲ್ಲೂಕು ದೈಹಿಕ ಪರಿವಿಕ್ಷಕ ಚೌಡಪ್ಪ, ದೈಹಿಕ ಶಿಕ್ಷಕರ ಸಂಘದ ತಾಲ್ಲೂಕು ಅಧ್ಯಕ್ಷ ಆರ್.ನಾಗರಾಜ್, ಉಪಾಧ್ಯಕ್ಷ ವೆಂಕಟೇಶ್, ಸಂಘಟನಾ ಕಾರ್ಯದರ್ಶಿ ಶ್ರೀನಿವಾಸಪ್ಪ ಅಭಿನಂದಿಸಿದರು.