ತೊಟ್ಟಿಲ ತೂಗುವ ಕೈಗಳಿಗೆ ಸಮಾಜ ಮುನ್ನಡೆಸುವ ಶಕ್ತಿ ಇದೆ: ಡಾ. ದಾಕ್ಷಾಯಣಿ ಅಪ್ಪಾ

ಕಲಬುರಗಿ.ಏ.5: ಮಹಿಳೆ ಕೇವಲ ಕುಟುಂಬಕ್ಕೆ ಸೀಮಿತವಾಗಿಲ್ಲ, ತೊಟ್ಟಿಲ ತೂಗುವ ಕೈಗಳಿಗೆ ಅವಕಾಶ ನೀಡಿದರೆ ಸಮಾಜವನ್ನು ಮುನ್ನಡೆಸುವ ಶಕ್ತಿ ಇದೆ ಎಂದು ಶ್ರೀ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಶ್ರೀಮತಿ ಡಾ. ದಾಕ್ಷಾಯಣಿ ಎಸ್. ಅಪ್ಪಾ ಅವರು ಹೇಳಿದರು.
ಅವರು ಇಂದು ನಗರದ ಲೋಹಾರ ಗಲ್ಲಿಯ ಮಹಾದೇವ ನಗರದ ಮಹಾದೇವ ಮಂದಿರದಲ್ಲಿ ಅಕ್ಕಮಹಾದೇವಿ ಮಹಿಳಾ ಮಂಡಳದಿಂದ ಹಮ್ಮಿಕೊಂಡಿದ್ದ ವೈರಾಗ್ಯ ನಿಧಿ ಅಕ್ಕ ಮಹಾದೇವಿ ಜಯಂತಿ ಹಾಗೂ ಮುತ್ತೈದಿಯರಿಗೆ ಉಡಿ ತುಂಬುವ ಕಾರ್ಯಕ್ರಮದ ಸಾನಿಧ್ಯವನ್ನು ವಹಿಸಿ ಮಾತನಾಡಿದ ಅವರು, ಮಹಿಳೆಯರು ಶಾಂತಿಯನ್ನು ಹೊಂದಬೇಕು. ನಕರಾತ್ಮಕ ವಿಚಾರದಿಂದ ಹೊರಗೆ ಬಂದು ಸಕರಾತ್ಮಕ ವಿಚಾರಗಳಿಗೆ ಮಹತ್ವ ನೀಡಬೇಕು. ಅಕ್ಕ ಮಹಾದೇವಿ ಅವರು ತಮ್ಮ ವೈರಾಗ್ಯ ಜೀವನ ನಡೆಸಿ ಇಂದು ಎಲ್ಲರಿಗೂ ಅಕ್ಕನಾಗಿ ಅಮರರಾಗಿದ್ದಾರೆ. ಅವರು ಹುಟ್ಟಿ, ಬೆಳೆದು, ನಡೆದಾಡಿದ ನಾಡಿನಲ್ಲಿ ನಾವು ಇದ್ದೇವೆ ಎಂದರೆ ಅದು ನಮ್ಮ ಪುಣ್ಯವಾಗಿದೆ. ಮಹಿಳೆಯರಲ್ಲಿ ಸಮಾಜಕ್ಕೆ ಏನಾದರೂ ಕೊಡುಗೆ ಕೋಡಬೇಕು ಎನ್ನುವ ಮನೋಭಾವನೆ ಇರಬೇಕು. ಒಳ್ಳೆಯದನ್ನು ಕಲಿಯುವದರೊಂದಿಗೆ ನಮ್ಮ ಸಂಪ್ರದಾಯಗಳನ್ನು ಮರೆಯಬಾರದು. ಆ ನಿಟ್ಟಿನಲ್ಲಿ ಶರಣಬಸವೇಶ್ವರರ ಸಂಸ್ಥಾನದಿಂದ ಮೊದಲಬಾರಿಗೆ ಕಲ್ಯಾಣ ನಾಡಿನಲ್ಲಿ ಮಹಿಳಾ ಶಾಲೆಯೊಂದು ತೆರೆದು ವಿದ್ಯಾರ್ಥಿನಿಯರಿಗೆ ಶಿಕ್ಷಣ ನೀಡಿದ್ದು ಹೆಮ್ಮೆಯ ವಿಷಯವಾಗಿದೆ. ಇಂದು ಶರಣಬಸವೇಶ್ವರ ಸಂಸ್ಥೆಯಲ್ಲಿ ಸುಮಾರು 30 ಸಾವಿರ ವಿದ್ಯಾರ್ಥಿಗಳು ವಿದ್ಯೆಯನ್ನು ಪಡೆಯುತ್ತಿದ್ದಾರೆ. ಅವರೊಂದಿಗೆ ಸುಮಾರು 20 ಸಾವಿರಕ್ಕೂ ಅಧಿಕ ಜನ ಸಂಸ್ಥೆಯನ್ನು ವಿವಿಧ ರೀತಿಯಲ್ಲಿ ಸಂಸ್ಥೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ ಎಂದರೆ ಅದು ಈ ಭಾಗದಲ್ಲಿ ಶರಣಬಸವೇಶ್ವರರು ಮಾಡಿದ ಸಾಮಾಜಿಕ ಕಳಕಳಿಯ ಕೆಲಸವಾಗಿದೆ. ಪ್ರತಿ ಮಹಿಳೆಯರು ವಿದ್ಯೆಯೊಂದಿಗೆ ಉತ್ತಮ ಸಂಸ್ಕಾರ ಪಡೆಯಬೇಕು ಎಂದು ಕರೆ ನೀಡಿದರು.
ಜಯಂತ್ಯೋತ್ಸವದ ಉದ್ಘಾಟನೆಯನ್ನು ಎಸ್.ಬಿ. ಪಾಟೀಲ ಗ್ರೂಪ್‍ನ ಸದಸ್ಯರಾದ ಶ್ರೀಮತಿ ಪ್ರಿಯಾಂಕಾ ಚಂದು ಪಾಟೀಲ ಅವರು ನೆರವೇರಿಸಿದರು. ಅಧ್ಯಕ್ಷತೆಯನ್ನು ಅಕ್ಕಮಹಾದೇವಿ ಮಹಿಳಾ ಮಂಡಳ ಅಧ್ಯಕ್ಷೆ ಶ್ರೀಮತಿ ಜಗದೇವಿ ಹಣಮಂತಪ್ಪ ಗಂಗಸಿರಿ ಅವರು ವಹಿಸಿ ಮಾತನಾಡುತ್ತಾ, ನಮ್ಮ ಮಹಿಳಾ ಮಂಡಳವು ಸುಮಾರ 50 ವರ್ಷಗಳ ಹಿಂದೆ ಸ್ಥಾಪನೆ ಮಾಡಲಾಗಿದೆ. ಬಹುಶಃ ಕಲಬುರಗಿ ನಗರದಲ್ಲಿ ಇದು ಮೊದಲ ಅಕ್ಕಮಹಾದೇವಿ ಮಹಿಳಾ ಮಂಡಳವಾಗಿದೆ ಎಂದು ಹೆಮ್ಮೆಯಿಂದ ಹೇಳಿದರು.
ವಿಶೇಷ ಆಹ್ವಾನಿತರಾಗಿ ಶ್ರೀಮತಿ ಪೂಜಾ ಜಿತೇಂದ್ರ ಏರಿ ಅವರು ಆಗಮಿಸಿದರು.
ಮಹಿಳಾ ಮಂಡಳದ ಕಾರ್ಯದರ್ಶಿ ಶ್ರೀಮತಿ ಸುನಂದಾ ಜೀವಣಗಿ ಅವರು ಎಲ್ಲರನ್ನು ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಉಪಾದ್ಯಕ್ಷೆ ಶ್ರೀಮತಿ ಕಾವೇರಿ ಮೋದಿ, ಖಜಾಂಚಿ ಮಹಾದೇವಿ ಹೆಬ್ಬಾಳ, ಸೇರಿದಂತೆ ಆಸಿಫ್ ಗಂಜ್‍ನ ವಿವಿಧ ಬಡಾವಣೆಯ ಮಹಿಳೆಯರು ಭಾಗವಹಿಸಿದರು.