
ಸಂಜೆವಾಣಿ ವಾರ್ತೆ
ಹೊಸಪೇಟೆ 7: ತೊಗಲು ಗೊಂಬೆಯಾಟಕ್ಕೆ ಐತಿಹಾಸಿಕ ಮತ್ತು ಸಾಮಾಜಿಕ ಪರಿಕಲ್ಪನೆಗೆ ಹಿರಿಯ ಕಲಾವಿದ ಬೆಳಗಲ್ ವೀರಣ್ಣನವರ ಕೊಡುಗೆ ಅಪಾರವಾಗಿದೆ ಎಂದು ಮುಖಂಡ ಎ ಕರುಣಾನಿಧಿ ಹೇಳಿದರು.
ನಗರದ ಶ್ರಮಿಕ ಭವನದಲ್ಲಿ ಇತ್ತೀಚಿಗೆ ನಿಧನಹೊಂದಿದ ಬೆಳಗಲ್ ವೀರಣ್ಣನವರ ಶ್ರದ್ದಾಂಜಲಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಾಮಾಜಿಕ ಬದಲಾವಣೆಯ ಸನ್ನಿವೇಶಗಳಿಗೆ ತಕ್ಕಂತೆ ಕಲಾ ಪ್ರಕಾರಗಳು ಕ್ರಾಂತಿಕಾರಕವಾಗಿ ರೂಪಗೊಂಡಾಗ ಮಾತ್ರ ಅವು ಪ್ರಸ್ತುತತೆ ಪಡೆಯಲು ಸಾಧ್ಯ ಎಂಬುದಕ್ಕೆ ಬೆಳಗಲ್ ವೀರಣ್ಣ ಅವರು ತಮ್ಮ ಸಾವಿನ ನಂತರವೂ ಜೀವಂತ ಸಾಕ್ಷಿಯಾಗಿ ಉಳಿಯುತ್ತಾರೆ ಎಂದು ಬಣ್ಣಿಸಿದರು.
ಎಂದೋ ಇತಿಹಾಸದ ಪುಟಗಳಲ್ಲಿ ಸೇರಬೇಕಾಗಿದ್ದ ತೊಗಲು ಗೊಂಬೆಯಾಟವು ವೀರಣ್ಣನವರ ಸಾಮಾಜಿಕ ಮತ್ತು ಐತಿಹಾಸಿಕ ಪರಿಕಲ್ಪನೆಗಳಿಂದಾಗಿ ಪ್ರಸಕ್ತ ದಿನಮಾನಗಳವರೆಗೆ ಮುಂದುವರೆದುಕೊಂಡು ಬಂದಿದೆ. ಮುಂದಿನ ಹಾದಿಯನ್ನು ಆ ಕಲಾ ಪ್ರಕಾರದಲ್ಲಿರುವ ವೃತ್ತಿನಿರತರು ನಿರ್ಧರಿಸಬೇಕು. ಇದನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯುವ ಕಾರ್ಯವನ್ನು ಮಾಡಬೇಕಿದೆ ಎಂದರು.
ಹಿರಿಯ ಕಲಾವಿದ ವೆಂಕನಗೌಡ ಮಾತನಾಡಿ, ತಮ್ಮ ಹಾಗೂ ವೀರಣ್ಣನವರ ನಡುವಿನ 40 ವರ್ಷಗಳ ರಂಗಭೂಮಿಯ ಸಂಬಂಧವಿದೆ. ಸಾಂಸ್ಕøತಿಕ ಲೋಕಕ್ಕೆ ವೀರಣ್ಣನವರ ಕೊಡುಗೆ ನಿಜಕ್ಕೂ ಅವಿಸ್ಮರಣೀಯವಾಗಿದೆ. ಬಾಲ್ಯದಿಂದಲೇ ಅವರು, ಅನೇಕ ಕಷ್ಟ ಕಾರ್ಪಣ್ಯಗಳನ್ನು ಎದುರಿಸಿ ಯಶಸ್ಸಿನ ಮೆಟ್ಟಿಲು ಏರಿದ್ದು, ನಿಜಕ್ಕೂ ಹೆಮ್ಮೆಯ ಸಂಗತಿಯಾಗಿದೆ. ಭಾರತ ರೂಪುಗೊಳ್ಳುವುದು ಬೆಳಗಲ್ ವೀರಣ್ಣನವರಂತಹ ನಿಜವಾದ ಭಾರತೀಯರಿಂದ ಎಂದು ಬಣ್ಣಿಸಿದರು.
ಸಮುದಾಯದ ಅಧ್ಯಕ್ಷ ದಯಾನಂದ ಕಿನ್ನಾಳ ಅಧ್ಯಕ್ತೆ ವಹಿಸಿದ್ದರು. ಮುಖಂಡರಾದ ಎಂ ಜಂಬಯ್ಯನಾಯಕ ಆರ್ ಭಾಸ್ಕರ್ ರೆಡ್ಡಿ, ಎಲ್ ಮಂಜುನಾಥ್, ವಿ ಸ್ವಾಮಿ, ಅಂಜಲಿ ಬೆಳಗಲ್, ಹಾಗೂ ಕಲಾವಿದರಾದ ಮಲ್ಲಿಕಾರ್ಜುನ ತುರುವನೂರು, ನಾಗರಾಜ್ ಪತ್ತಾರ, ಕಲ್ಲಂಭಟ್, ಇತರರು ಪಾಲ್ಗೊಂಡಿದ್ದರು.