ತೊಗಲುಗೊಂಬೆ ಪ್ರದರ್ಶನ


ಸಂಜೆವಾಣಿ ವಾರ್ತೆ
ಬಳ್ಳಾರಿ, ಅ.6: ಮುನಿರತ್ನ ಟ್ರಸ್ಟ್ (ರಿ),  ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬಳ್ಳಾರಿ ಇವರ ವಿಶೇಷ ಘಟಕ ಯೋಜನೆಯಡಿಯಲ್ಲಿ ನಗರದ ಡಾ. ರಾಜ್‍ಕುಮಾರ್ ರಸ್ತೆಯಲ್ಲಿರುವ ಸಾಂಸ್ಕೃತಿಕ ಸಮುಚ್ಛಯದ ಆವರಣದಲ್ಲಿರುವ ಹೊಂಗಿರಣದಲ್ಲಿ ಪ್ರಭು ಮತ್ತು ತಂಡದವರಿಗೆ ಶ್ರೀಕೃಷ್ಣದೇವರಾಯ ತೊಗಲುಗೊಂಬೆ ಪ್ರದರ್ಶನ ಮತ್ತು ಸಾಂಸ್ಕೃತಿಕ ಪ್ರದರ್ಶನಗಳನ್ನು ಹಮ್ಮಿಕೊಳ್ಳಲಾಗಿತ್ತು. ಬಳ್ಳಾರಿ ನಗರದ ಶಾಸಕರಾದ  ಜಿ.ಸೋಮಶೇಖರರೆಡ್ಡಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ, ತೊಗಲುಗೊಂಬೆ ಕಲಾವಿದರಾದ ಎರ್ರಿಸ್ವಾಮಿ ಅವರ ನಿಧನದ ನಂತರವೂ ಅವರ ಮಕ್ಕಳು ತೊಗಲುಗೊಂಬೆ ಕಲೆಯನ್ನು ಮುಂದುವರೆಸಿಕೊಂಡು ಹೋಗುತ್ತಿರುವುದು ಶ್ಲಾಘನೀಯ. ಹಿರಿಯರ ಮಾರ್ಗದರ್ಶನದಂತೆ ತೊಗಲುಗೊಂಬೆ ಕಲೆಯನ್ನು ಮರೆಯದೇ ಯುವಜನರಿಗೆ ಮಾದರಿಯಾಗುತ್ತಿರುವುದು ಹೆಮ್ಮೆಯ ವಿಷಯವಾಗಿದೆ ಎಂದರು. ಇಂತಹ ಯುವಕರನ್ನು ಸ್ಪೂರ್ತಿಯಾಗಿಸಿಕೊಂಡು ಜಾನಪದ ಕಲಾವಿದರ ಮಕ್ಕಳು ಅವರವರ ಕಲೆಯನ್ನು ಮುಂದುವರೆಸಿಕೊಂಡು ಹೋದಲ್ಲಿ, ಗ್ರಾಮೀಣ ಭಾಗಗಳಲ್ಲಿ ಜನಪದ ಕಲೆಗಳನ್ನು ಉಳಿಸಿ ಬೆಳೆಸಿದಂತಾಗುತ್ತದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಸಿದ್ದಲಿಂಗೇಶ ಕೆ. ರಂಗಣ್ಣವರ ವಹಿಸಿದ್ದರು. ಕಾರ್ಯಕ್ರಮದಲ್ಲಿ ಮುನಿರತ್ನ ಟ್ರಸ್ಟ್‍ನ ಹರಿಕೃಷ್ಣಾರೆಡ್ಡಿ, ಲಕ್ಷ್ಮಿ ಕಲಾಕ್ಷೇತ್ರದ ಎಸ್.ಕೆ.ಆರ್.ಜಿಲಾನಿಬಾಷ, ಕುರುಗೋಡು ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಜಿ.ಶಿವಶಂಕರ್ , ವಂದನಾ ಶಾಲೆಯ ಕಾರ್ಯದರ್ಶಿ ಕೆ.ಬಿ.ಈಶ್ವರ್, ಶ್ರೀ ಹುಲಿಕುಂಟೆರಾಯ ತೊಗಲುಗೊಂಬೆ ಕಲಾ ತಂಡ (ರಿ)ನ ಅಧ್ಯಕ್ಷರಾದ ಹೊನ್ನೂರುಸ್ವಾಮಿ ಉಪಸ್ಥಿತರಿದ್ದರು. ನಂತರ ವೈ.ಪ್ರಭು ಮತ್ತು ತಂಡದವರಿಂದ ಶ್ರೀಕೃಷ್ಣದೇವರಾಯ ತೊಗಲುಗೊಂಬೆ ಪ್ರದರ್ಶನ ನಡೆಯಿತು. ಕಾರ್ಯಕ್ರಮವನ್ನು ಗೌತಮ್ ನಿರೂಪಿಸಿದರೆ, ವೈ.ಉಮೇಶ ವಂದಿಸಿದರು.