
ಎನ್.ವೀರಭದ್ರಗೌಡ
ಬಳ್ಳಾರಿ: ಪರಿವರ್ತನಾ ಶೀಲ ಯುಗಕ್ಕೆ ಅನುಸಾರವಾಗಿ ಸಂಪ್ರದಾಯ ಬದ್ದ ತೊಗಲುಗೊಂಬೆಯಾಟದಲ್ಲಿ ಹೊಸ ಹೊಸ ಪ್ರಯೋಗಗಳನ್ನು ಮಾಡುವ ಮೂಲಕ ಅದಕ್ಕೊಂದು ಹೊಸ ಆಯಾಮ ನೀಡಿದವರು ಬೆಳಗಲ್ಲು ವೀರಣ್ಣನವರು. ಜಾನಪದ ಕಲೆಯೆಂದರೆ ಬಾಯಿಂದ ಬಾಯಿಗೆ ಹಾಗೂ ವಂಶಪಾರಂಪರೆಯಾಗಿ ಕಲೆಯನ್ನು ಮುಂದುವರೆಸಿಕೊಂಡು ಹೋಗುವುದು ಸಂಪ್ರದಾಯ. ಆದರೆ ಪ್ರಾಚೀನ ಮೌಖಿಕ ಮತ್ತು ದೃಶ್ಯ ಪರಂಪರೆಗೆ ಒಂದು ಹೊಸ ಆಯಾಮವನ್ನು ನೀಡಿದ್ದ ಅವರು ಮೂಲತಃ ಬಳ್ಳಾರಿ ತಾಲ್ಲೂಕಿನ ಬಿ.ಬೆಳಗಲ್ಲು ಗ್ರಾಮದವರಾದರು ಕಳೆದ 55 ವರ್ಷಗಳಿಂದ ಬಳ್ಳಾರಿ ನಗರದ ರೇಡಿಯೋ ಪಾರ್ಕ್‍ನ ಗಣೇಶಗುಡಿ ಹತ್ತಿರದ ಮನೆಯೊಂದರಲ್ಲಿ ವಾಸವಾಗಿದ್ದಾರೆ. ಜಾನಪದ ಕಲಾವಿದರಿಗೂ ಮಾರ್ಗದರ್ಶನ ನೀಡುವುದು. ಅವರ ಬದುಕಿಗೂ ಸಹಾಯ ಮಾಡುವಂತಹ ದೊಡ್ಡ ಗುಣ ಅವರದು. ಅವರ ಇಡೀ ಕುಟುಂಬದ ಸದಸ್ಯರೆಲ್ಲರೂ ಅವರೊಂದಿಗೆ ಕೈಜೋಡಿಸಿ ಗೊಂಬೆಯಾಟಕ್ಕೆ ತಂಡವಾಗಿ ನಿಂತಿದ್ದರು.
ಶಿಷ್ಟ ಮತ್ತು ಜಾನಪದ ರಂಗಭೂಮಿಯಲ್ಲಿ ಪರಿಣಿತಿಯನ್ನು ಪಡೆದಿರುವ ಬೆಳಗಲ್ಲು ವೀರಣ್ಣನವರು ಸೃಜನಶೀಲತೆಯನ್ನು ಸಹಜವಾಗಿಯೇ ಮೈಗೂಡಿಸಿಕೊಂಡಿದ್ದರು. ಇದಕ್ಕೆ ಪೂರಕವಾಗಿ ಅವರು ಬೆಳೆದು ಬಂದ ಪರಿಸರವಾಗಿರಬಹುದು ಅಥವಾ ಬಾಲ್ಯದಲ್ಲಿಯೇ ರಂಗಭೂಮಿಯ ದಿಗ್ಗಜರ ಶಿಷ್ಯರಾಗಿ ಸಂಪರ್ಕ ಪಡೆದಿದ್ದೂ ಇರಬಹುದು. ಹಾಗಾಗಿ ಅವರಲ್ಲಿ ರಂಗಭೂಮಿಯು ಅವರ ಬದುಕಿಗೊಂದು ದಿಕ್ಸೂಚಿಯನ್ನು ನೀಡಿತೆಂದರೆ ಉತ್ಪ್ರೇಕ್ಷೆಯಾಗದು. ಬಾಲ್ಯದಲ್ಲಿ ವೀರಣ್ಣನವರು ತಮ್ಮ ತಲೆಮಾರಿನ ಕಲೆಯಾಗಿರುವ ತೊಗಲುಗೊಂಬೆಯಾಟಕ್ಕಿಂತಲೂ ಹೆಚ್ಚು ಸೆಳೆತಕ್ಕೆ ಒಳಗಾಗಿದ್ದು ಶಿಷ್ಟ ರಂಗಭೂಮಿಯತ್ತ. ಅವರ ಗುರುಗಳಾಗಿದ್ದ ಶಿಡಿಗಿನಮೊಳ ಚಂದ್ರಯ್ಯ ಸ್ವಾಮಿ, ಡಾ.ಜೋಳದರಾಶಿ ದೊಡ್ಡನಗೌಡ, ಹೊನ್ನಪ್ಪ ಭಾಗವತರ್, ಮಹಾಬಲರಾಯರು, ಈಶ್ವರಪ್ಪ, ಎಲಿವಾಳ ಸಿದ್ದಯ್ಯಸ್ವಾಮಿ ಸೇರಿದಂತೆ ಬಳ್ಳಾರಿ ಜಿಲ್ಲೆಯ ಅನೇಕ ಪ್ರತಿಭಾನ್ವಿತ ಕಲಾವಿದರೊಂದಿಗೆ ಒಡನಾಟ ಹೊಂದಿ ಸ್ತ್ರೀ ಮತ್ತು ಪುರುಷ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಆ ಮೂಲಕವಾಗಿ ಅದ್ವಿತೀಯ ಕಲಾವಿದರಾಗಿ ಹೊರಹೊಮ್ಮಿದ್ದರು.
ತಮ್ಮ ನೆಚ್ಚಿನ ಕಲೆ ನಾಟಕ ಕ್ಷೇತ್ರದೊಂದಿಗೆ ಜಾನಪದ ರಂಗಭೂಮಿಯಾದ ತೊಗಲುಗೊಂಬೆಯಾಟವನ್ನು ಸಹ ಅವರು ಕೈಬಿಡುವಂತಿರಲಿಲ್ಲ. ದೃಶ್ಯ ಹಾಗೂ ಶ್ರವಣ ಮಾಧ್ಯಮಗಳನ್ನು ಸಮರ್ಪಕವಾಗಿ ಬಳಸಿಕೊಂಡು ಕಿಳ್ಳೇಕ್ಯಾತರಾಟವನ್ನು ಕರಗತ ಮಾಡಿಕೊಂಡು ತೊಗಲು ಗೊಂಬೆಯಾಟಕ್ಕೂ ಕಾಯಕಲ್ಪ ನೀಡಿದ ಮಹಾನ್ ಕಲಾವಿದ ಅವರಾಗಿದ್ದರು.
ಕಿಳ್ಳೇಕ್ಯಾತರ ಆಟವೆಂದರೆ ಕೇವಲ ರಾಮಾಯಣ, ಮಹಾಭಾರತ ಮತ್ತು ಭಾಗವತ ಪ್ರಸಂಗಗಳನ್ನು ಅಳವಡಿಸಿಕೊಂಡು ಗ್ರಾಮಗಳಲ್ಲಿ ಕಿಳ್ಳೇಕ್ಯಾತರು ಜನತೆಗೆ ಪ್ರದರ್ಶನ ಮಾಡುತ್ತಿರುವುದು ಕಂಡು ಕೇಳಿದ್ದೇವೆ. ಈ ಆಟವು ಕೆಲವು ಆಂತರಿಕ ಮತ್ತು ಬಾಹ್ಯ ಕಾರಣಗಳಿಂದಾಗಿ ತನ್ನ ಮೂಲದ ಜನಪ್ರಿಯತೆಯನ್ನು ಕಳೆದುಕೊಳ್ಳ ತೊಡಗಿದೆ. ಅದಕ್ಕೆ ಕಾರಣ ಟಿ.ವಿ. ಮತ್ತು ಸಿನಿಮಾ ಗಳಾಗಿರಬಹುದು. ಆದರೆ ಇಂದಿಗೂ ಕೂಡ ಕಿಳ್ಳೇಕ್ಯಾತರೆಲ್ಲರೂ ಹಳೆಯ ಸಂಪ್ರದಾಯಿಕ ಪ್ರಸಂಗಗಳನ್ನೇ ಪ್ರದರ್ಶಿಸುತ್ತಿದ್ದಾರೆ. ಈ ಪ್ರಸಂಗಗಳಲ್ಲಿ ಯಾವುದೇ ಹೊಸ ನಾವಿನ್ಯತೆಯನ್ನು ತರುವ ಪ್ರಯತ್ನಗಳು ನಡೆದೇ ಇರಲಿಲ್ಲ. ಅಂತಹ ಒಂದು ನಾವಿನ್ಯತೆಗೆ ಮೆರಗು ನೀಡಿದ ಕೀರ್ತಿ ವೀರಣ್ಣನವರಿಗೆ ಸಲ್ಲುತ್ತದೆ.
ಕೌಲ್‍ಬಜಾರಿನಲ್ಲಿ ಕಿಳ್ಳೇಕ್ಯಾತರ ಮನೆಗಳು ಹೆಚ್ಚೇನು ಇಲ್ಲ. ಇರುವ ಒಂದೆರಡು ಮನೆಗಳಿದ್ದರೂ ಅವರಲ್ಲಿ ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ತೊಗಲುಗೊಂಬೆಯಾಟದ ಪ್ರದರ್ಶನವನ್ನು ನೀಡುತ್ತಾರೆ ಎಂದರೆ ಅವರ ಕೈಚಳಕ ಮತ್ತು ಅವರ ಸೃಜನಶೀಲತೆಯನ್ನು ಪ್ರತಿಬಿಂಬಿಸುತ್ತದೆ. ರಾಜ್ಯ ಅಥವಾ ರಾಷ್ಟ್ರಮಟ್ಟದಲ್ಲಿ ತೊಗಲುಗೊಂಬೆಯಾಟವನ್ನು ಪ್ರದರ್ಶಿಸಬೇಕೆಂದರೆ ಮೊದಲು ಬೆಳಗಲ್ಲು ವೀರಣ್ಣನವರ ಹೆಸರೇ ಪ್ರಥಮವಾಗಿ ಕೇಳಿಬರುತ್ತಿತ್ತು. ಬೆಳಗಲ್ಲು ವೀರಣ್ಣನವರು ತೊಗಲುಗೊಂಬೆಯಾಟದಲ್ಲಿ ಯಶಸ್ಸು ಕಾಣಲು ಸ್ಫೂರ್ತಿ ನೀಡಿದವರು ಅವರ ಮಾವ ಹುಲೆಯಪ್ಪ.
ಕಿಳ್ಳೇಕ್ಯಾತರು ತೊಗಲುಗೊಂಬೆಯಾಟಕ್ಕೆ ಗೊಂಬೆಗಳನ್ನು ತಯಾರಿಸಲು ಈ ಹಿಂದೆ ಜಿಂಕೆ ಅಥವಾ ಮೇಕೆಯ ಚರ್ಮವನ್ನು ಬಳಸುತ್ತಾರೆ. ಅದನ್ನು ಹದಮಾಡಿ ಅದರ ಮೇಲೆ ಚಿತ್ರಗಳನ್ನು ಬರೆಯುತ್ತಾರೆ. ಆದರೆ ವೀರಣ್ಣನವರು ಆ ರೀತಿಯಲ್ಲ. ಸಾಮಾಜಿಕ ಮತ್ತು ಐತಿಹಾಸಿಕ ಕಥನಗಳನ್ನು ಬಳಸಿಕೊಂಡು ಅ ಕಥೆಗಳಿಗೆ ತಕ್ಕಂತೆ ಚಿತ್ರಣಗಳನ್ನು ರಚಿಸುವಲ್ಲಿ ಸಫಲರಾಗಿದ್ದಾರೆ. ಪೌರಾಣಿಕ ಪಾತ್ರಗಳಲ್ಲಿ ಹೇಗೆ ಪಾತ್ರಗಳಿಗೆ ಕೈಯಲ್ಲಿ ತಂಬೂರಿ, ಕೊಳಲು ಇರುತ್ತದೆಯೋ ಅದೇ ರೀತಿಯಲ್ಲಿ ಸಾಮಾಜಿಕ ಮತ್ತು ಐತಿಹಾಸಿಕ ಪಾತ್ರಗಳಾದ ಬ್ರಿಟಿಷರಿಗೆ ಟೋಪಿ, ಬೂಟು, ಕೈಯಲ್ಲಿ ಬಂದೂಕು ಸೇರಿದಂತೆ ಹಲವು ವಸ್ತ್ರ ವಿನ್ಯಾಸಗಳನ್ನು ಗೊಂಬೆಗಳಲ್ಲಿಯೇ ಚಿತ್ರ ಬರೆಸುವ ಕಾರ್ಯವನ್ನು ಆರಂಭಿಸಿದರು. ಗಾಂಧಿ ಪಾತ್ರಕ್ಕೆ ತಕ್ಕಂತೆ ವೇಷ ಭೂಷಣಗಳನ್ನು ಚಿತ್ರದಲ್ಲಿಯೇ ತಂದು ವೀಕ್ಷಕರಲ್ಲಿ ಭಾವನೆಗಳನ್ನು ಮೂಡುವಂತೆ ಮಾಡಿದ್ದರು.
ಪ್ರದರ್ಶನಾತ್ಮಕ ಕಲೆಗಳಲ್ಲಿ ಸಂಗೀತಕ್ಕೆ ಹೆಚ್ಚು ಸ್ಥಾನವಿದೆ. ಆಧುನಿಕ ಪ್ರಸಂಗಗಳಲ್ಲಿ ಸಂಗೀತದಲ್ಲಿ ಇವರಿಗೆ ಬದಲಾವಣೆ ತರುವುದು ಅಗತ್ಯವಾಗಿತ್ತು. ಶಿಷ್ಟ ರಂಗಭೂಮಿಯ ಪ್ರಭಾವವನ್ನು ಹೊಂದಿದ್ದ ವೀರಣ್ಣನವರು ರಂಗಗೀತೆಗಳ ಮಾದರಿಯಲ್ಲಿ ಹಾಡುಗಳನ್ನು ರಚಿಸಿ, ಮಟ್ಟುಗಳನ್ನು, ಲಾವಣಿಗಳನ್ನು ಅಳವಡಿಸಿಕೊಂಡರು. ಗ್ರಾಮಗಳಲ್ಲಿ ರಾತ್ರಿಯಲ್ಲಾ ಗಂಟೆಗಟ್ಟಲೆ ಆಡುತ್ತಿದ್ದ ತೊಗಲುಗೊಂಬೆಯಾಟದ ಪ್ರದರ್ಶನವನ್ನು ಸಿನಿಮಾ ರೀತಿಯಲ್ಲಿ ತಾಸುಗಳ ಲೆಕ್ಕದಲ್ಲಿ ತಂದಿದ್ದಾರೆ. ಇಷ್ಟೆಲ್ಲಾ ಬದಲಾವಣೆಗಳನ್ನು ತಂದಿರುವ ಇವರಿಗೆ ಕೆಲವು ವರ್ಷಗಳ ವರೆಗೆ ತಮ್ಮ ಸಾಂಪ್ರದಾಯಿಕ ವೃತ್ತಿ ತೊಗಲುಗೊಂಬೆಯಾಟದಲ್ಲಿ ಆಸಕ್ತಿ ಇರಲಿಲ್ಲ. ಕೇವಲ ರಂಗಭೂಮಿಯಲ್ಲಿ ಮಾತ್ರ ಆಸಕ್ತಿ ಇತ್ತು. ಏಕೆಂದರೆ ಇವರ ತಂದೆ ಹನುಮಂತಪ್ಪನವರು ಬಯಲಾಟದ ಮಾಸ್ತರರಾಗಿ ಹಳ್ಳಿಗಳಲ್ಲಿ ಬಯಲಾಟ ಕಲಿಸುತ್ತಿದ್ದರು. ಈ ಹಿನ್ನಲೆಯಲ್ಲಿ ನಾಲ್ಕು ದಶಕಗಳಿಗೂ ಹೆಚ್ಚು ಕಾಲ ರಂಗಭೂಮಿಯ ಚಟುವಟಿಕೆಯಲ್ಲಿ ತೊಡಗಿದ್ದರು.
1980ರಲ್ಲಿ ನಾಟಕ ಆಡಳು ಅವಕಾಶ ಕೇಳಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಗೆ ವೀರಣ್ಣವರು ಹೋದಾಗ, ಇಲಾಖೆಯ ಆಗಿನ ನಿರ್ದೇಶಕರಾಗಿದ್ದ ವಿಜಯಸಾಸನೂರು, ನಾಟಕದ ಬದಲು ಯಾವುದಾದರೊಂದು ಜನಪದ ಕಲೆಯನ್ನು ಪ್ರದರ್ಶಿಸಿ ಎಂದರು. ವೀರಣ್ಣವರು ತೊಗಲುಗೊಂಬೆಯಾಟವನ್ನು ಪ್ರಸ್ತಾಪಿಸಿದಾಗ, ಅಪೂರ್ವವಾದ ಕಲೆ ನಶಿಸಿ ಹೋಗುತ್ತಿದೆ. ನಿಮ್ಮಂತಹವರು ಇಂತಹ ಕಲೆಯ ಕಡೆ ಗಮನ ಹರಿಸಿ, ಅದರ ಉಳಿವಿಗಾಗಿ ಶ್ರಮಿಸಬೇಕು ಎಂಬ ಸಾಸನೂರರ ಮಾತುಗಳಿಂದ ಪ್ರೇರಣೆ ಪಡೆದ ವೀರಣ್ಣವರು ತೊಗಲುಗೊಂಬೆಯಾಟದ ಬಗ್ಗೆ ಏನೂ ಗೊತ್ತಿಲ್ಲದಿದ್ದರೂ ಮೊದಲು ಮನೆಯ ಹಿರಿಯರಿಂದ ಕಲಿತು ಮೊದಲಿಗೆ ಪಂಚವಟಿ ಪ್ರಸಂಗವನ್ನು ಪ್ರದರ್ಶಿಸಿದರು. ಇದಕ್ಕೆ ಜನರು ಪ್ರೋತ್ಸಾಹ ನೀಡಿದರು.
ಕೇಂದ್ರ ಸಾಹಿತ್ಯ ಮತ್ತು ನಾಟಕ ಅಕಾಡೆಮಿಯ ಅಧ್ಯಕ್ಷರಾಗಿದ್ದ ಕಮಲಾದೇವಿ ಚಟ್ಟೋಪಾಧ್ಯಾಯರ ಸಂಪರ್ಕದ ಪರಿಣಾಮವಾಗಿ ತೊಗಲುಗೊಂಬೆಯಾಟದಲ್ಲಿ ಮತ್ತಷ್ಟು ಆಸಕ್ತಿ ಚಿಗುರೊಡೆಯುವಂತಾಯಿತು. ಆ ನಂತರ ತಮ್ಮ ಸೋದರ ಮಾವ ಹುಲೆಪ್ಪ ಅವರಿಂದ ಈ ಕಲೆಯ ಒಳಹೊರಗನ್ನು ಕರಗತ ಮಾಡಿಕೊಂಡರು. ಬರೀ ಪೌರಾಣಿಕ ಪ್ರಸಂಗಗಳನ್ನೇ ಮಾಡಿದರೆ ಸಾಕೆ? ಆಧುನಿಕ ಭಾರತದ ಇತಿಹಾಸಕ್ಕೆ ಸ್ಪಂದಿಸಿದರೆ ಹೇಗಿರುತ್ತದೆ ಎಂಬ ಆಲೋಚನೆ ಅವರಲ್ಲಿ ತಲೆಯಲ್ಲಿ ಹೊಳೆದದ್ದೇ ತಡ, ಕೂಡಲೆ ವೀರಣ್ಣ ಕಾರ್ಯೋನ್ಮುಖರಾಗಿ ಬಿಟ್ಟರು.
ಕೇಂದ್ರ ನಾಟಕ ಅಕಾಡೆಮಿಗೆ ಅರ್ಜಿ ಸಲ್ಲಿಸಿ ಧನಸಹಾಯವನ್ನು ಪಡೆದು ಗೊಂಬೆಗಳನ್ನು ತಯಾರಿಸಿಕೊಳ್ಳಲು ಮುಂದಾದರು. ಇತಿಹಾಸಕಾರರು, ಸಂಗೀತಗಾರರು, ಸಾಹಿತಿಗಳನ್ನು ಸಂಪರ್ಕಿಸಿ ಆ ನಿಟ್ಟಿನಲ್ಲಿ ಕಥಾ ಪ್ರಸಂಗವನ್ನು ದೃಶ್ಯ ರೂಪಕ್ಕೆ ಅನುಗುಣವಾಗಿ ಸಾಹಿತ್ಯವನ್ನು ಸಿದ್ದಪಡಿಸಿಕೊಂಡು ಝಾನ್ಸಿರಾಣಿ ಲಕ್ಷ್ಮಿಬಾಯಿ, ಬಾಪು, ಸೇರಿದಂತೆ ಹಲವು ಪ್ರಸಂಗಗಳಿಗೆ ತಕ್ಕಂತಹ ಗೊಂಬೆಗಳನ್ನು ರೂಪಿಸಿಕೊಂಡರು. ಕೆಲವು ಗೊಂಬೆಗಳನ್ನು ತಮ್ಮ ಮಕ್ಕಳಿಂದಲೇ ಬರೆಯಿಸಿದರು. ಇನ್ನು ಕೆಲವು ಗೊಂಬೆಗಳನ್ನು ಆಂಧ್ರಪ್ರದೇಶದ ಲೇಪಾಕ್ಷಿಯಲ್ಲಿ ಹೋಗಿ ತಯಾರಿಸಿಕೊಂಡು ಬಂದರು. ಬ್ರಿಟೀಷರಿಗೆ ಸಂಬಂಧಿಸಿದ ಚಿತ್ರಗಳನ್ನು ಸಂಡೂರಿನ ವಿ.ಟಿ.ಕಾಳೆಯವರ ಬಳಿಯಲ್ಲಿ ಹೋಗಿ ರಚಿಸಿಕೊಂಡು ಬಂದರು. ಹೀಗೆ ಆಧುನಿಕ ಭಾರತದ ಇತಿಹಾಸವನ್ನು ಪ್ರತಿಬಿಂಬಿಸುವ ವಿವಿಧ ಸ್ವಾತಂತ್ರ್ಯ ಸಂಗ್ರಾಮದ ಕಥಾ ಪ್ರಸಂಗಗಳನ್ನು ಬಳ್ಳಾರಿಯಲ್ಲಿ ಪ್ರಥಮ ಪ್ರದರ್ಶನ ಮಾಡಿದರು. ನಂತರ ಕರ್ನಾಟಕ, ಕೇರಳ, ತಮಿಳುನಾಡು, ಬಿಹಾರ, ಪಾಂಡಿಚೇರಿ ಮತ್ತು ದೆಹಲಿ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಯಶಸ್ವಿ ಪ್ರದರ್ಶನ ನೀಡಿದರು. ಇದರ ಬೆನ್ನಲ್ಲೇ ಮತ್ತೊಂದು ಅವಕಾಶ ಅರಸಿ ಬಂದಿತು. ದೆಹಲಿಯ ಇಂದಿರಾಗಾಂಧಿ ರಾಷ್ಟ್ರೀಯ ಕಲಾ ಕೇಂದ್ರದ ಸಹಯೋಗದೊಂದಿಗೆ ಗಾಂಧೀಜಿ ಕುರಿತು ತೊಗಲುಗೊಂಬೆಯಾಟ ಆಡಿಸುವ ಯೋಜನೆ ರೂಪಿಸಿಕೊಂಡರು. ಇವರಿಗೆ ಹಿಂದಿ ಸಾಹಿತ್ಯವನ್ನು ಅನುವಾದ ಮಾಡುವುದರಿಂದ ಹಿಡಿದು ಕನ್ನಡದಲ್ಲಿ ಸಾಹಿತ್ಯವನ್ನು ರಚನೆ ಮಾಡುವವರೆಗೆ ಸಾಹಿತಿ ವೈ.ರಾಘವೇಂದ್ರರಾವ್ ಅವರು ಬೆನ್ನಿಗೆ ನಿಂತರು. ಗಾಂಧೀಜಿಯವರು ದಕ್ಷಿಣ ಆಫ್ರಿಕಾದಲ್ಲಿ ವರ್ಣದ್ವೇಷದ ವಿರುದ್ಧ ನಡೆಸಿದ ಹೋರಾಟ, ಚಂಪಾರಣ್ಯ ಪ್ರಸಂಗ, ಹರಿಜನ ದೇವಾಲಯ ಪ್ರವೇಶ, ಉಪ್ಪಿನ ಸತ್ಯಾಗ್ರಹ ಸೇರಿದಂತೆ ಹಲವು ಪ್ರಸಂಗಗಳು ಪ್ರೇಕ್ಷಕರನ್ನು ರೋಮಾಂಚನಗೊಳಿಸಿದವು. 1991ರಲ್ಲಿ ರಾಷ್ಟ್ರಪತಿ ಭವನದಲ್ಲಿ ಅರ್ಧಗಂಟೆ ಕಾಲ ಪ್ರದರ್ಶನ ನೀಡಿದರು. ರಾಷ್ಟ್ರಪತಿ ಆರ್.ವೆಂಕಟರಾಮನ್ ಅವರು ಪ್ರದರ್ಶನಕ್ಕೆ ಪ್ರತಿಕ್ರಿಯಿಸುತ್ತಾ “ಬೊಂಬೆಗಳು ತಮ್ಮನ್ನು ಅರ್ಧ ತಾಸು ಬೇರೊಂದು ಜಗತ್ತಿಗೆ ಒಯ್ದವು” ಎಂದು ಉದ್ಗಾರ ವ್ಯಕ್ತಪಡಿಸಿದ್ದರು.
ಇಷ್ಟೆಲ್ಲಾ ಹೊಸತನದಲ್ಲಿ ಹೆಸರು ಪಡೆದ ಬೆಳಗಲ್ಲು ವೀರಣ್ಣನವರಿಗೆ ಹಲವು ಅವಕಾಶಗಳು ಒದಗಿ ಬಂದವು. ಕರ್ನಾಟಕ ಸ್ವಾತಂತ್ರ್ಯ ಸಂಗ್ರಾಮ, ಕಿತ್ತೂರು ರಾಣಿ ಚೆನ್ನಮ್ಮ, ಸಂಗೊಳ್ಳಿರಾಯಣ್ಣ, ಬಸವಣ್ಣ, ಹೀಗೆ ವಿವಿಧ ಇತಿಹಾಸ ಪ್ರಸಿದ್ಧ ಜೀವನ ಚರಿತ್ರೆ ಆಧಾರಿತ ಪ್ರದರ್ಶನಗಳನ್ನು ನೀಡಲು ಅವಕಾಶ ದೊರೆತವು. ನಂತರ ಸಾಕ್ಷರತಾ ಆಂದೋಲನ, ಕುಟುಂಬ ಯೋಜನೆ, ಸಣ್ಣ ಉಳಿತಾಯ, ಆರೋಗ್ಯ ಜಾಗೃತಿ, ಸಾಮಾಜಿಕ ಕಲ್ಯಾಣ ಕುರಿತು ಪ್ರದರ್ಶನ ನೀಡಿದರು.
ವಯಸ್ಸು 90 ದಾಟಿದ್ದರೂ ಅವರಲ್ಲಿರುವ ಕಲೆಗೆ ಮುಪ್ಪು ಬಂದಿರಲಿಲ್ಲ. ಯಾವುದೇ ಸಮಾರಂಭದಲ್ಲಿ ವೀರಣ್ಣನವರು ಭಾಗವಹಿಸುತ್ತಾರೆ ಎಂದರೆ ಅಲ್ಲಿ ಒಂದು ರಕ್ತರಾತ್ರಿ ನಾಟಕದ ಶಕುನಿ ಪಾತ್ರದ ಸಂಭಾಷಣೆ ಇದ್ದೇ ಇರುತ್ತದೆ. ಜೊತೆಗೆ ರಂಗಗೀತೆಯ ಕೆಲವು ಸಾಲುಗಳನ್ನು ಗಾಯನ ಮಾಡಿ ಇಡೀ ಸಮಾರಂಭವನ್ನು ಮಂತ್ರಮುಗ್ಧಗೊಳಿಸುವ ಶಕ್ತಿ ಅವರಲ್ಲಿದೆ. ವೀರಣ್ಣನವರು ಕಂಡರೆ ಸಾಕು ಎಲ್ಲರೂ ಅವರನ್ನು ಗೌರವ ಅಭಿಮಾನದಿಂದ ಕಾಣುತ್ತಾರೆ. ಸದಾ ಬಳ್ಳಾರಿಯಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ವೀರಣ್ಣನವರು, 2008ರಲ್ಲಿ ಸ್ವಿಡ್ಜರ್ಲ್ಯಾಂಡ್, 2011ರಲ್ಲಿ ಜರ್ಮನಿ ದೇಶಗಳಲ್ಲಿ ತೆರಳಿ ಭಾರತದ ಸಾಂಸ್ಕೃತಿಕ ಹಿರಿಮೆಯನ್ನು ಎತ್ತಿಹಿಡಿದ್ದರು.
ರಾಷ್ಟ್ರಕವಿ ಕುವೆಂಪುರವರ ಶ್ರೀರಾಮಾಯಣ ದರ್ಶನಂ ಮಹಾಕಾವ್ಯದ ಲಂಕಾದಹನಂ ಕಾವ್ಯ ವಸ್ತರುವಿಗೆ, ಕಲ್ಪನಾಹಂದರಕ್ಕೆ ಪಾತ್ರಗಳಿಗೆ ತಕ್ಕ ಹಾಗೆ ಧ್ವನಿ ಬಳಕೆಗೆ ಬಳಸಿಕೊಂಡರು. ಶಾಲಾ ಶಿಕ್ಷಕ, ಶಿಕ್ಷಕಿಯರು, ಕಾಲೇಜುಗಳ ಪ್ರಾಧ್ಯಾಪಕರು, ವಿಶ್ವವಿದ್ಯಾಲಯಗಳ ಪ್ರಾಧ್ಯಾಪಕರು, ರಂಗ ಕಲಾವಿದರನ್ನು ಪ್ರಾಚೀನ ಜನಪದ ಕಲೆ ತೊಗಲುಗೊಂಬೆಯಾಟವನ್ನು ಪುನಶ್ಚೇತನಗೊಳಿಸಬೇಕೆಂದು ನಿತ್ಯ ಹೊಸತನ ಅವರಲ್ಲಿದೆ. ಯಾರನ್ನೇ ಆಗಲಿ ಅವರು ಒಳಿತು ಕೆಡಕುಗಳನ್ನು ಕೇಳದೇ ಎಲ್ಲರನ್ನು ಶಬ್ಬಾಸ್ ಎಂಬ ಪ್ರೋತ್ಸಾಹವನ್ನು ನೀಡುತ್ತಲೇ ಇರುತ್ತಾರೆ. ಲಂಕಾಂದಹನಂ ತೊಗಲುಗೊಂಬೆಯಾಟದ ಪ್ರದರ್ಶನದಲ್ಲಿ ಪ್ರೇಕ್ಷಕರ ಜೊತೆ ಕುಳಿತು ಅವರ ಐದಾರು ವರ್ಷದ ಮೊಮ್ಮಕ್ಕಳು ರೂಪಕದ ಹಾಡುಗಳನ್ನು ಭಾವ, ತುಂಬಿ ಹಾಡುವುದನ್ನು ನೋಡುವುದೇ ಸಂಭ್ರಮ.
ಲಂಕಾದಹನಂ ನಲ್ಲಿ ತೊಗಲು ಗೊಂಬೆಯಾಟದ ಕಲೆಯ ಬಗ್ಗೆ ಜನರಿಗೆ ತಿಳಿಯುವಂತೆ ಮಾಡಲು ಶಿಕ್ಷಕರು, ಉಪನ್ಯಾಸಕರಿಂದ ವಿಚಾರ ಸಂಕಿರಣಗಳಲ್ಲಿ ತೊಡಗಿಸಿಕೊಳ್ಳುತ್ತಾರೆ.
ವರ್ಷದಲ್ಲಿ ಒಂದೆರಡು ಬಾರಿ ತೊಗಲುಗೊಂಬೆಯ ಬಗ್ಗೆ ಪ್ರಾತ್ಯಕ್ಷಿಕೆ ಮತ್ತು ವಿಚಾರ ಸಂಕಿರಣಗಳನ್ನು ಏರ್ಪಡಿಸುವ ಮೂಲಕ ಕಲೆಯನ್ನು ಜೀವಂತವಾಗಿರಿಸಲು ಶ್ರಮಿಸುತ್ತಿದ್ದರು.
ಶ್ರೀರಾಮಾಂಜನೇಯ ತೊಗಲುಬೊಂಬೆ ಮೇಳ ಟ್ರಸ್ಟ್‍ನ್ನು ಸ್ಥಾಪಿಸಿರಾಷ್ಟ್ರೀಯ ಗೊಂಬೆಯಾಟ ರಂಗೋತ್ಸವವನ್ನು ನಡೆಸುತ್ತಿದ್ದಾರೆ. ದೇಶದ ವಿವಿಧ ರಾಜ್ಯಗಳಲ್ಲಿರುವ ತೊಗಲುಗೊಂಬೆ ಕಲಾವಿದರನ್ನು ಕರೆಯಿಸಿ ಪ್ರದರ್ಶನ ನೀಡಿದ್ದರು. ಇವರನ್ನು ಕುರಿತು ನಾಡಿನ ಹಿರಿಯ ಬರಹಗಾರರು ವಿಶಿಷ್ಟ ರೀತಿಯಲ್ಲಿ ಲೇಖನಗಳನ್ನು ರಚಿಸಿದ್ದಾರೆ. ಆಂಗ್ಲ, ಹಿಂದಿ, ಕನ್ನಡ, ತೆಲುಗು, ಸೇರಿದಂತೆ ದೇಶದ ಪತ್ರಿಕೆಗಳಲ್ಲಿ ಹಾಗೂ ನಿಯತಕಾಲಿಕೆಗಳಲ್ಲಿ ಇವರ ಕುರಿತು ಸುದ್ದಿಗಳು ಪ್ರಕಟಗೊಂಡಿವೆ.
ಎಲ್ಲಿ ಪ್ರತಿಭೆ ಇರುತ್ತದೆಯೋ ಅಲ್ಲಿಗೆ ಪ್ರಶಸ್ತಿ, ಸನ್ಮಾನ, ಪುರಸ್ಕಾರಗಳು ಅರಸಿಕೊಂಡು ಬರುತ್ತವೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಹಲವು ಪ್ರಶಸ್ತಿಗಳಿಗೆ ಭಾಜನರಾಗಿರುವ ಇವರಿಗೆ ಭಾರತ ಸರ್ಕಾರದ ನಾಟಕ ಮತ್ತು ಸಂಗೀತ ಅಕಾಡೆಮಿಯಿಂದ ಪ್ರಶಸ್ತಿ, ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ನಾಡೋಜ ಪದವಿ, ಕರ್ನಾಟಕ ನಾಟಕ ಅಕಾಡೆಮಿ , ರಾಜ್ಯೋತ್ಸವ ಪ್ರಶಸ್ತಿ, ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಪ್ರಶಸ್ತಿಗಳು ದೊರೆತಿವೆ. ಕರ್ನಾಟಕ ಬಯಲಾಟ ಅಕಾಡೆಮಿಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. ¸ವೀರಣ್ಣನವರು ತೊಗಲುಗೊಂಬೆ ಮಾತ್ರವಲ್ಲದೆ ಜನಪದ ರಂಗಭೂಮಿ ಕಲೆಗಳಿಗೆ ಹೆಚ್ಚಿನ ಮನ್ನಣೆಯನ್ನು ನೀಡುತ್ತಾ ಅವುಗಳನ್ನು ಸಹ ಪ್ರೋತ್ಸಾಹಿಸಿದ್ದರು.