
ವಿಜಯಪುರ:ಫೆ.23: ತೊಗರಿ ಸಂಶೋಧನಾ ಕೇಂದ್ರ ಹಾಗೂ ಔಷಧಿ ಸಿಂಪರಣಾ ಪರೀಕ್ಷಾ ಘಟಕ ಸ್ಥಾಪನೆಗೆ ಪ್ರಾಮಾಣಿಕವಾಗಿ ಪ್ರಯತ್ನಿಸಲಾಗುವುದು ಎಂದು ಕೇಂದ್ರ ಕೃಷಿ ಹಾಗೂ ರೈತ ಕಲ್ಯಾಣ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಅವರು ಹೇಳಿದರು.
ವಿಜಯಪುರದ ಹಿಟ್ನಳ್ಳಿ ಕೃಷಿ ವಿಶ್ವವಿದ್ಯಾಲಯದಲ್ಲಿ ನವದೆಹಲಿಯ ಭಾರತೀಯ ಅನುಸಂಧಾನ ಪರಿಷತ್ತು ಹಾಗೂ ಧಾರವಾಡ ಕೃಷಿ ವಿಶ್ವವಿದ್ಯಾಲಯ ಇವರ ಸಹಯೋಗದಲ್ಲಿ ವಿವಿಧ ಕಾಮಗಾರಿಗಳಿಗೆ ಉದ್ಘಾಟನೆ ಹಾಗೂ ಶಂಕು ಸ್ಥಾಪನೆ ನೆರವೇರಿಸಿ, ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ಆಯೋಜಿಸಿದ ಸಮಾರಂಭವನ್ನು ಉದ್ಘಾಟಿಸಿ, ವಿಶ್ವವಿದ್ಯಾಲಯದಿಂದ ಹೊರತಲಾದ ವಿವಿಧ ವಿಸ್ತರಣಾ ಹಸ್ತ ಪ್ರತಿಗಳನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ದೇಶದ ಎರಡು ಕಡೆಗಳಲ್ಲಿ ಮಾತ್ರ ಔಷಧಿ ಸಿಂಪರಣಾ ಪರೀಕ್ಷಾ ಘಟಕಗಳಿದ್ದು, ರಾಜ್ಯದ ಕಲ್ಬುರ್ಗಿ, ಬಾಗಲಕೋಟೆ ಅಥವಾ ವಿಜಯಪುರದಲ್ಲಿ ತೊಗರಿ ಸಂಶೋಧನಾ ಕೇಂದ್ರ ಹಾಗೂ ದಕ್ಷಿಣ ಭಾರತದಲ್ಲಿ ಅವಶ್ಯಕ ಜಾಗವನ್ನು ಗುರುತಿಸಿ ಕೀಟನಾಶಕ ಔಷಧಿ ಸಿಂಪರಣಾ ಪರೀಕ್ಷಾ ಕೇಂದ್ರದ ಸ್ಥಾಪನೆಗೆ ಕೇಂದ್ರದ ಕೃಷಿ ಇಲಾಖೆ ಹಿರಿಯ ಅಧಿಕಾರಿಗಳೊಂದಿಗೆ ಸಮರ್ಪಕವಾಗಿ ಚರ್ಚಿಸಿ, ಕೇಂದ್ರಗಳ ಸ್ಥಾಪನೆಗೆ ಪ್ರಾಮಾಣಿಕವಾಗಿ ಪ್ರಯತ್ನಿಸಲಾಗುವುದು ಎಂದು ಅವರು ಹೇಳಿದರು.
ಧಾರವಾಡ ಕೃಷಿ ವಿಶ್ವವಿದ್ಯಾಲಯದ ವಿಜಯಪುರದ ರೈತರ ತರಬೇತಿ ಭವನಕ್ಕೆ ಇಂದು ಶಿಲಾನ್ಯಾಸ ನೇರವೇರಿಸಿದ್ದು, ಈ ಭವನ ರೈತರಿಗೆ, ವಿದ್ಯಾರ್ಥಿಗಳಿಗೆ, ಕೃಷಿ ತರಬೇತಿದಾರರಿಗೆ ಉಪಯುಕ್ತವಾಗಲಿದೆ. ರಾಜ್ಯದ ಹಲವು ಕಡೆಗಳಲ್ಲಿ ರೈತ ತರಬೇತಿ ಕೇಂದ್ರಗಳನ್ನು ನಿರ್ಮಾಣ ಮಾಡಲಾಗುತ್ತಿದ್ದು, ಕೆಲವು ಉದ್ಘಾಟನೆಗೆ ಸಿದ್ಧವಾಗಿವೆ. ಈ ತರಬೇತಿ ಕೇಂದ್ರಗಳಲ್ಲಿ ಹೊಸ, ಹೊಸÀ ಬೀಜ, ಸಸ್ಯ, ವಿವಿಧ ತಳಿಗಳನ್ನು ತರಿಸಿ, ಸಂಶೋಧನೆ ನಡೆಸಲು ಅನುಕೂಲವಾಗಲಿದೆ ಎಂದು ಹೇಳಿದರು.
ಕೃಷಿ ಪ್ರಧಾನವಾದ ನಮ್ಮ ದೇಶ ಕೃಷಿಕ ದೇಶದ ಬೆನ್ನೆಲುಬು. ಈ ಕೃಷಿಕನ ಬದುಕು ಹಸನಾಗಿಸುವ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹಲವು ಯೋಜನೆಗಳನ್ನು ಜಾರಿಗೊಳಿಸಿದ್ದು, ಕೇಂದ್ರ ಸರ್ಕಾರ 1 ಲಕ್ಷ 25 ಸಾವಿರ ಕೋಟಿ ರೂ. ಕೃಷಿ ಬಜೆಟ್ ಮಂಡಿಸುವ ಮೂಲಕ ಸರ್ಕಾರ ಕೃಷಿಗೆ ಒತ್ತು ನೀಡಿದೆ. 14 ಕೋಟಿ ರೈತರ ಖಾತೆಗಳಿಗೆ 2.70 ಲಕ್ಷ ಕೋಟಿ ರೂ.ಗಳನ್ನು ರೈತರ ಖಾತೆಗೆ ನೇರ ನಗದು ವರ್ಗಾವಣೆ ಮೂಲಕ ವಿಮೆ ಹಣ ಜಮೆ ಮಾಡಲಾಗುತ್ತಿದೆ. ರೈತರ ಅದಾಯ ದ್ವಿಗುಣಗೊಳಿಸಲು ಕೇಂದ್ರ ಸರ್ಕಾgವು ಹತ್ತು ಹಲವು ಕ್ರಮಗಳನ್ನು ಕೈಗೊಂಡಿದೆ ಎಂದು ಹೇಳಿದರು.
ಗುಣಮಟ್ಟದ, ಪೋಷಕಾಂಶವುಳ್ಳ ಆಹಾರ ಬೆಳೆಯಲು ಉತ್ತೇಜನ, ಆಹಾರ ಸಂಸ್ಕರಣೆ, ಆಹಾರ ಉತ್ಪನ್ನಗಳ ವ್ಯಾಪಾರಕ್ಕೆ ಉತ್ತೇಜನ, ವಹಿವಾಟು ವ್ಯವಸ್ಥೆ ಸುಧಾರಣೆಗೆ ಕ್ರಮ ಕೈಗೊಳ್ಳಲಾಗುತ್ತಿದ್ದು. ಒಂದು ಲಕ್ಷ ಕೋಟಿ ರೂ. ಕೃಷಿ ಮೂಲಭೂತ ಸೌಕರ್ಯ ನಿಧಿಗೆ ಮೀಸಲಿಡಲಾಗಿದೆ. ಈ ನಿಧಿಯಡಿ ಮೀಸಲಿಡಲಾದ ಅನುದಾನವನ್ನು ಆಹಾರ ಸಂಸ್ಕರಣೆ, ಸುಧಾರಣೆ, ದೇಶದಲ್ಲಿ ಬೆಳೆಯುವ ಬೆಳೆಗಳಿಗೆ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಾರುಕಟ್ಟೆ ವ್ಯವಸ್ಥೆ ಸುಧಾರಣೆ, ಇಲ್ಲಿ ಬೆಳೆಯು ಉತ್ಪನ್ನಗಳನ್ನು ಹೊರ ದೇಶಗಳಿಗೆ ರಫ್ತು ಉತ್ಪನ್ನಗಳ ದಾಸ್ತಾನು, ಕೋಲ್ಡ್ ಸ್ಟೋರೇಜ್‍ಗೆ ಈ ಅನುದಾನ ಬಳಸಿಕೊಂಡು ರೈತರ ಆದಾಯ ವೃದ್ಧಿಗಳ ಕ್ರಮ ವಹಿಸಲಾಗುತ್ತಿದೆ ಎಂದು ಹೇಳಿದರು.
ರೈತರು ಬೆಳೆದ ಬೆಳೆಗಳಿಗೆ ಉತ್ತಮ ಬೆಲೆ ಸಿಗುವ ನಿಟ್ಟಿನಲ್ಲಿ ಆನ್‍ಲೈನ್ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಲಾಗಿದೆ. ಈ ವ್ಯವಸ್ಥೆಯಡಿ ಜಿಲ್ಲೆಯಲ್ಲಿ ಬೆಳೆಯಲಾದ ಬೆಳೆಗೆ ಇತರೆ ಜಿಲ್ಲೆ, ರಾಜ್ಯದಲ್ಲಿರುವ ಬೆಲೆ ದೊರೆಯುವ ನಿಟ್ಟಿನಲ್ಲಿ ಆನ್‍ಲೈನ್ ಮಾರುಕಟ್ಟ ವ್ಯವಸ್ಥೆ ಕಲ್ಪಿಸಲಾಗಿದೆ. ರಾಜ್ಯದಲ್ಲಿ ಬೆಳೆಯುವ ಕೃಷಿ ಉತ್ಪನ್ನಗಳ ರಫ್ತಿಗೆ ಪ್ರತ್ಯೇಕ ವ್ಯವಸ್ಥೆ ಕಲ್ಪಿಸುವಂತೆ ಈಗಾಗಲೇ ರಾಜ್ಯದ ಮುಖ್ಯಮಂತ್ರಿಗಳನ್ನು ಕೋರಿದ್ದು, ಅವರು ಸಹ ಸಕಾರಾತ್ಮಕವಾಗಿ ಸ್ಪಂದಿಸಿ, ಪ್ರತ್ಯೇಕ ವ್ಯವಸ್ಥೆ ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದು. ನಕಲಿ ರಸಗೊಬ್ಬರ, ಬೀಜಗಳ ಕಡಿವಾಣಕ್ಕೆ ಕ್ಯೂಆರ್ ಕೊಡ್ ಅಳವಡಿಸಲು ಸೂಚನೆ ನೀಡಲಾಗಿದೆ. ಹೊಸ ತಂತ್ರಜ್ಞಾನ ಅಳವಡಿಸಿ, ಬೀಜ, ಯಂತ್ರ, ಆವಿಷ್ಕರಣೆÉ ಕೇವಲ ಅವಿಷ್ಕಾರಕ್ಕೆ ಮಾತ್ರ ಸೀಮಿತವಾಗದೇ ಪ್ರತಿ ರೈತರಿಗೆ ಇದರ ಲಾಭ ದೊರೆಯುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ.
ಕೃಷಿ ವಿಜ್ಞಾನಿಗಳು ವಿವಿಧ ತಳಿಗಳನ್ನು ಆವಿಷ್ಕರಿಸಿದ್ದಾರೆ. ಹೆಚ್ಚುವರಿ ಇಳುವರಿ, ಉತ್ತಮ ಸಾಂದ್ರತೆವುಳ್ಳ ತಳಿಗಳ ಅಭಿವೃದ್ದಿ ಮಾಡಲಾಗುತ್ತಿದೆ. ಕೇಂದ್ರ ಸರ್ಕಾರವು ಸಹ ಸಂಶೋಧನೆಗೆ ಒತ್ತು ನೀಡುತ್ತಿದೆ. ಕಾಶ್ಮೀರ ಸೇರಿದಂತೆ ವಿವಿಧ ರಾಜ್ಯ, ದೇಶಗಳಲ್ಲಿ ಬೆಳೆಯುವ ಹಣ್ಣು ಹಂಪಲುಗಳನ್ನು ರಾಜ್ಯದಲ್ಲಿ ಬೆಳೆಯುವ ನಿಟ್ಟಿನಲ್ಲಿಯೂ ಸಹ ಈಗಾಗಲೇ ಹಲವು ಕಡೆ ಪ್ರಾಯೋಗಿಕವಾಗಿ ಬೆಳೆಯಲಾಗುತ್ತಿದೆ. ಹೊಸ ತಳಿ ನೂತನ ತಂತ್ರಜ್ಞಾನವನ್ನು ಅಳವಡಿಸಲಾಗಿದೆ. ರೈತರ ಆದಾಯ ಹೆಚ್ಚಿಸುವ ನಿಟ್ಟಿನಲ್ಲಿ ಕಡಿಮೆ ವೆಚ್ಚದಲ್ಲಿ ಅತಿ ಕಡಿಮೆ ಪ್ರದೇಶದಲ್ಲಿ ವಾತಾವರಣ, ನೀರು, ಮಣ್ಣಿಗೆ ಪೂರಕವಾಗಿ ಸುಧಾರಿತೆ ಬೆಳೆ ಪದ್ಧತಿಯನ್ನು ಅನುಸರಿಸಿ, ತಂತ್ರಜ್ಞಾನ ಬಳಕೆ ಮಾಡಿ ರೈತರ ಆದಾಯ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.
ರೋಗವಿಲ್ಲದೇ ಇಳುವರಿ ನಮ್ಮ ನೆಲ, ವಾತಾವರಣ, ನೀರು, ಹೊಂದಿಕೊಳ್ಳುವ ರೀತಿಯಲ್ಲಿ ತಂತ್ರಜ್ಞಾನ ಅಳವಡಿಸಿ ಬೆಳೆ ಬೆಳೆಯಲಾಗುತ್ತಿದೆ.ರೈತರಿಗೆ ಲಾಭವಾಗುವ ನಿಟ್ಟಿನಲ್ಲಿ ಸಂಶೋಧನೆಗಳಾಗಬೇಕು. ಕೇಂದ್ರ ಸರ್ಕಾರವೂ ಸಹ ಸಂಶೋಧನೆಗೆ ಒತ್ತು ನಿಡುತ್ತಿದ್ದು, ಹೊಸ ಹೊಸ, ತಳಿಗಳ ಸಂಶೋಧನೆಯಾಗಬೇಕು. ರೈತರ ಬಾಳು ಹಸನಾಗಿಸಲು ಎಲ್ಲ ಆಯಾಮಗಳಿಂದ ಚಿಂತಿಸಲಾಗುತ್ತಿದೆ. ಎಲ್ಲ ಹೋಬಳಿಗಳಲ್ಲಿ ಟ್ರ್ಯಾಕ್ಟರ್ ಟ್ರಿಲರ್ ಸೇರಿದಂತೆ ರೈತರಿಗೆ ಬೇಕಾಗುವ ಕೃಷಿ ಯಂತ್ರೋಪಕರಣಗಳನ್ನು ಒದಗಿಸಲು ಪ್ರತಿ ಹೋಬಳಿಗೊಂದರಂತೆ ಬಾಡಿಗೆ ಕೇಂದ್ರಗಳನ್ನು ತೆರೆಯಲಾಗುತ್ತಿದೆ ಎಂದು ಅವರು ಹೇಳಿದರು.
ಕರ್ನಾಟಕ ರಾಜ್ಯ ಬೀಜ ಮತ್ತು ಸಾವಯವ ಪ್ರಮಾಣನ ಸಂಸ್ಥೆ ಅಧ್ಯಕ್ಷ ವಿಜುಗೌಡ ಎಸ್.ಪಾಟೀಲ, ಅಧ್ಯಕ್ಷತೆ ವಹಿಸಿದ್ದ ಕೃಷಿ ವಿಶ್ವವಿದ್ಯಾಲಯ ಕುಲಪತಿ ಪಿ.ಎಲ್.ಪಾಟೀಲ ಅವರು ಮಾತನಾಡಿದರು. ಸಮಾರಂಭದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹನಾಧಿಕಾರಿ ರಾಹುಲ್ ಶಿಂಧೆ,ಕೃಷಿ ತಂತ್ರಜ್ಞಾನ ಹಾಗೂ ಅನ್ವಯಿಕ ಸಂಶೋಧನಾ ಸಂಸ್ಥೆಯ ಐಸಿಎಆರ್ ನಿರ್ದೇಶಕ ವೆಂಕಟ ಸುಬ್ರಮಣಿಯನ್, ಶ್ರೀಮತಿ ಶೈಲಜಾ ಬಸನಗೌಡ ಪಾಟೀಲ ಯತ್ನಾಳ, ಕೃಷಿ ವಿಶ್ವವಿದ್ಯಾಲಯದ ಆಡಳಿತ ಮಂಡಳಿ ಸದಸ್ಯರಾದ ವಾಯ್.ಎಲ್.ಪಾಟೀಲ, ಮಲ್ಲೇಶ, ಶ್ರೀನಿವಾಸ ಕೋಟ್ಯಾನ್, ವಿದ್ಯಾಧಿಕಾರಿ ಡಾ.ಐ.ಎಂ.ಸಾರವಾಡ, ವಿಸ್ತರಣಾ ನಿರ್ದೇಶಕ ಡಾ.ಎ.ಎಸ್.ವಸ್ತ್ರದ, ಸಹ ವಿಸ್ತರಣಾಧಿಕಾರಿ ಡಾ.ಆರ್.ಬಿ.ಬೆಳ್ಳಿ ಸೇರಿದಂತೆ ಇತರರು ಉಪಸ್ಥಿತರಿದ್ದರು.