ತೊಗರಿ ಬೆಳೆ ಬಗ್ಗೆ ಕ್ಷೇತ್ರೋತ್ಸವ ಕಾರ್ಯಕ್ರಮ-ಡಾ.ಎಸ್‌ಎನ್‌ಭಟ್

ದೇವದುರ್ಗ.ಡಿ.೦೮-ಮಣ್ಣು ಭೂಮಿ ಮೇಲಿನ ಅಮೂಲ್ಯ ಸಂಪತ್ತು. ಕೃಷಿ ಚಟುವಟಿಕೆಗಳಿಗೆ ಮಣ್ಣೇ ಆಧಾರ. ಇಂಥ ಮಣ್ಣನ್ನು ರೈತರು ಕಾಪಾಡಿಕೊಳ್ಳಬೇಕಿದೆ. ರಾಸಾಯನಿಕ ಗೊಬ್ಬರ ಬಳಕೆ ಕೈಬಿಡಬೇಕು ಎಂದು ಕೃಷಿವಿಜ್ಞಾನ ಕೇಂದ್ರದ ಮಣ್ಣು ವಿಜ್ಞಾನಿ ಡಾ.ಎಸ್.ಎನ್.ಭಟ್ ಹೇಳಿದರು.
ತಾಲೂಕಿನ ಅಡಕಲಗುಡ್ಡ ಗ್ರಾಮದ ರೈತ ಮೂಕಪ್ಪ ಅವರ ಜಮೀನಿನಲ್ಲಿ ರಾಯಚೂರು ಕೃಷಿ ವಿಜ್ಞಾನಗಳ ವಿವಿ, ಕೃಷಿ ವಿಜ್ಞಾನ ಕೇಂದ್ರದಿಂದ ರಾಷ್ಟ್ರೀಯ ಆಹಾರ ಭದ್ರತೆ ಯೋಜನೆಯಡಿ ಆಯೋಜಿಸಿದ್ದ ತೊಗರಿಯಲ್ಲಿ ಸಮಗ್ರ ಬೆಳೆ ನಿರ್ವಹಣೆಯ ಕ್ಷೇತ್ರೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕೀಟಶಾಸ್ತ್ರ ವಿಜ್ಞಾನಿ ಡಾ.ಜಿ.ಎನ್.ಶ್ರೀವಾಣಿ ಮಾತನಾಡಿ, ರೈತರು ಸಮಗ್ರ ಪೀಡೆ ನಿರ್ವಹಣೆ ಬಗ್ಗೆ ಮಾಹಿತಿ ಪಡೆಯಬೇಕು. ಕೀಟ ನಿರ್ವಹಣೆಗೆ ಜೈವಿಕ ಪೀಡೆನಾಶಕಗಳ ಬಳಕೆ, ಮೋಹಕ ಬಲೆಗಳ ಉಪಯೋಗ ಹೆಚ್ಚಾಗಿ ಕೈಗೊಳ್ಳಬೇಕು. ತೊಗರಿ ಬೆಳೆಯಲ್ಲಿ ಸಮಗ್ರ ಕೀಟ ನಿರ್ವಹಣೆ ಅಂಗವಾಗಿ ಬಿತ್ತನೆ ಪೂರ್ವದಲ್ಲಿ ಪ್ರತಿ ಕಿ.ಗ್ರಾಂ ಬೀಜಕ್ಕೆ ೪ಗ್ರಾಂ ಟ್ರೈಕೋಡರ್ಮಾ ಬೀಜೋಪಚಾರ ಮಾಡಿ ಬಿತ್ತನೆ ಕೈಗೊಂಡಲ್ಲಿ ನೆಟೆರೋಗದ ನಿರ್ವಹಣೆ ಮಾಡಬಹುದು. ಕೀಟಗಳ ಸಮೀಕ್ಷೆಗಾಗಿ ಪ್ರತಿ ಎಕರೆಗೆ ೨ರಂತೆ ಮೊಹಕ ಬಲೆಗಳನ್ನು ಅಳವಡಿಸಬೇಕು ಎಂದರು.
ಬೀಜ ವಿಜ್ಞಾನಿ ಡಾ.ಉಮೇಶ, ರೈತ ಮೂಕಪ್ಪ ಸೇರಿ ಕೃಷಿ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಇದ್ದರು.