ತೊಗರಿ ಬೆಳೆಯಲ್ಲಿ ಸಮಗ್ರ ಬೆಳೆ ನಿರ್ವಹಣೆಯ ಕ್ಷೇತ್ರೋತ್ಸವ

ರಾಯಚೂರು.ಡಿ.೦೪-ದೇವದುರ್ಗ ತಾಲೂಕಿನ ಅಡಕಲಗುಡ್ಡ ಗ್ರಾಮದಲ್ಲಿ “ತೊಗರಿಯಲ್ಲಿ ಸಮಗ್ರ ಬೆಳೆ ನಿರ್ವಹಣೆಯ ಕ್ಷೇತ್ರೋತ್ಸವ” ವನ್ನು ರಾಷ್ಟ್ರೀಯ ಆಹಾರ ಭದ್ರತಾ ಯೋಜನೆಯಡಿ ಮೂಕಪ್ಪ ಅವರ ಕ್ಷೇತ್ರದಲ್ಲಿ ಹಮ್ಮಿಕೊಳಲಾಯಿತು.
ಕೃಷಿ ವಿಜ್ಞಾನ ಕೇಂದ್ರದ ಮಣ್ಣು ವಿಜ್ಞಾನಿಗಳಾದ ಡಾ. ಎಸ್.ಎನ್.ಭಟ್ ರವರು ಪ್ರಾಸ್ತಾವಿಕವಾಗಿ ಮಾತನಾಡಿ ಕಾರ್ಯಕ್ರಮದ ಉದ್ದೇಶವನ್ನು ತಿಳಿಸಿದರು. ಅಂತೇಯೇ, ಮಣ್ಣಿನ ಬಗ್ಗೆ ಮಾತನಾಡುತ್ತ, ಮಣ್ಣಿನ ಆರೋಗ್ಯ ಹಾಗೂ ಮಣ್ಣು ಪರೀಕ್ಷೆಯ ಮಹತ್ವವನ್ನು ತಿಳಿಸಿದರು. ಮಣ್ಣು ಆರೋಗ್ಯ ಕಾಪಾಡಲು ರಾಸಾಯನಿಕಗಳ ಬಳಕೆಯನ್ನು ಕಡಿಮೆ ಮಾಡಲು ತಿಳಿಸಿದರು.
ಡಾ. ಶ್ರೀವಾಣಿ ಜಿ.ಎನ್. ವಿಜ್ಞಾನಿ (ಕೀಟಶಾಸ್ತ್ರ) ಇವರು ಸಮಗ್ರ ಪೀಡೆ ನಿರ್ವಹಣೆಯ ಕುರಿತು ಮಾತನಾಡುತ್ತಾ ಕೀಟ ಹಾಗೂ ರೋಗ ನಿರ್ವಹಣೆಯಲ್ಲಿ ಜೈವಿಕ ಪೀಡೆನಾಶಕಗಳ ಬಳಕೆ, ಮೋಹಕ ಬಲೆಗಳ ಉಪಯೋಗ ಹಾಗೂ ಸಮಗ್ರ ಕೀಟ ನಿರ್ವಹಣೆಯ ಬಗ್ಗೆ ಮನದಟ್ಟು ಮಾಡಿದರು. ತೊಗರಿ ಬೆಳೆಯಲ್ಲಿ ’ಸಮಗ್ರ ಕೀಟ ನಿರ್ವಹಣೆ ಅಂಗವಾಗಿ ಬಿತ್ತನೆ ಪೂರ್ವದಲ್ಲಿ ಪ್ರತಿ ಕಿ.ಗ್ರಾಂ. ಬೀಜಕ್ಕೆ ೪ ಗ್ರಾಂ ಟ್ರೈಕೋಡರ್ಮಾ ಬೀಜೋಪಚಾರ ಮಾಡಿ ಬಿತ್ತನೆ ಕೈಗೊಂಡಲ್ಲಿ ನೆಟೆರೋಗದ ನಿರ್ವಹಣೆ ಮಾಡಬಹುದಾಗಿದೆ. ಹಸಿರು ಕಾಯಿಕೊರಕದ ನಿರ್ವಹಣೆಗಾಗಿ ಬಿತ್ತನೆ ಸಮಯದಲ್ಲಿ ಪ್ರತಿ ಎಕರೆಗೆ ೨೦೦ ಗ್ರಾಂ ಸೂರ್ಯಕಾಂತಿ/ಜೋಳದ ಕಾಳು ಮಿಶ್ರಣ ಮಾಡಿ ಬಿತ್ತಿದಲ್ಲಿ ಪಕ್ಷಿಗಳು ಕೂರಲು ಆಶ್ರಯ ಸಸ್ಯಗಳಾಗಿ ಸಹಕಾರಿಯಗುತ್ತವೆ. ಹಾಗೂ ಕೀಟಗಳ ಸಮೀಕ್ಷೆಗಾಗಿ ಪ್ರತಿ ಎಕರೆಗೆ ೨ ರಂತೆ ಮೊಹಕ ಬಲೆಗಳನ್ನು ಅಳವಡಿಸಿ. ಆರ್ಥಿಕ ನಷ್ಠ ರೇಖೆಗೆ ಅನುಗುಣವಾಗಿ ಕೀಟ ನಿರ್ವಹಣಾ ಕ್ರಮಗಳನ್ನು ಕೈಗೊಳ್ಳಬೇಕು. ಮೊದಲನೆಯ ಸಿಂಪರಣೆಯಾಗಿ ತತ್ತಿನಾಶಕ ಕೀಟನಾಶಕವಾದ ಪ್ರೋಫೆನೊಪಾಸ್ ಕೀಟನಾಶಕವನ್ನು ಪ್ರತಿ ಲೀ. ನೀರಿಗೆ ೨ ಮಿ.ಲೀ. ನಂತೆ ಬೆರೆಸಿ ಸಿಂಪಡಿಸಬೇಕು. ನಂತರ ಎರಡನೆ ಸಿಂಪರಣೆಯಾಗಿ ನೂತನ ಕೀಟನಾಶಕವನ್ನು ಸಿಂಪಡಿಸಿ ಪರಿಣಾಮಕಾರಿಯಾಗಿ ಹತೋಟಿ ಮಾಡಬಹುದು ಎಂದು ತಿಳಿಸಿದರು.
ಡಾ. ಉಮೇಶ್., ವಿಜ್ಞಾನಿ (ಬೀಜ ವಿಜ್ಞಾನಿ), ಬೀಜ ಘಟಕ., ಕೃವಿವಿ., ರಾಯಚೂರು ರವರು ಕ್ಷೇತ್ರೋತ್ಸವದ ಬಗ್ಗೆ ಮಾತನಾಡುತ್ತಾ, ರಾಯಚೂರು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಏಕ ಬೆಳೆ ಹಾಗೂ ವರ್ಷದಿಂದ ವರ್ಷಕ್ಕೆ ಸರದಿ ಬೆಳೆಯಾಗಿ ಭತ್ತ/ಹತ್ತಿ /ಮೆಣಸಿನಕಾಯಿ ಬೆಳೆಯಲಾಗುತ್ತಿದ್ದು, ಇತ್ತೀಚ್ಛಿನ ವರ್ಷಗಳಲ್ಲಿ ಮಳೆ ಅಭಾವದಿಂದ ಅಚ್ಚುಕಟ್ಟು ಪ್ರದೇಶದಲ್ಲಿ ಕಾಲುವೆ ನೀರಿನ ಅಭಾವ ಕಂಡು ಬರುತ್ತಿದ್ದು, ರೈತರು, ತೊಗರಿ, ಜೋಳ ಮತ್ತು ಕಡಲೆ ಬೆಳೆಗಳನ್ನು ಬೆಳೆಯಲು ಶಿಫಾರಸ್ಸು ಮಾಡಲಾಗಿದೆ. ಈ ನಿಟ್ಟಿನಲ್ಲಿ ಅಡವಿಭಾವಿ ಗ್ರಾಮದಲ್ಲಿ ರಾಷ್ಟ್ರೀಯ ಆಹಾರ ಭದ್ರತಾ ಯೋಜನೆ ಅಡಿಯಲ್ಲಿ ಕಡಲೆಯಲ್ಲಿ ಸಮಗ್ರ ಬೆಳೆ ನಿರ್ವಹಣೆ ಪ್ರಾತ್ಯಾಕ್ಷಿಕೆಯನ್ನು ತೊಗರಿ ಬೆಳೆಯ ಟಿಎಸ್-೩ಆರ್ ತಳಿಯನ್ನು ಆಯ್ಕೆ ಮಾಡಿ ಆಯ್ದ ರೈತರ ಕ್ಷೇತ್ರಗಳಲ್ಲಿ ಕೈಗೊಳ್ಳಲಾಗಿತ್ತು. ಇದರ ವಿಶೇಷತೆ ಕುರಿತು ಅರಿವು ಮೂಡಿಸಲು ಕ್ಷೇತ್ರೋತ್ಸವ ಹಮ್ಮಿಕೊಳ್ಳಲಾಗಿದೆ.
ನಂತರ ಪ್ರಗತಿಪರ ರೈತ ಶ್ರೀ ಮೂಕಪ್ಪ ಅವರು ತೊಗರಿ ಬೇಸಾಯದಲ್ಲಿ ತಮ್ಮ ಅನುಭವ ಹಂಚಿಕೊಂಡರು ರೈತರು ತೊಗರಿ, ಜೋಳ ಹಾಗೂ ಹತ್ತಿ ಬೆಳೆಯ ತಳಿಗಳು, ಕಳೆನಾಶಕ ಹಾಗೂ ಕೀಟನಾಶಕಗಳ ಬಗ್ಗೆ ತಜ್ಞರೊಂದಿಗೆ ಮಾಹಿತಿಯನ್ನು ಪಡೆದು ತಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡರು.
ಈ ಕಾರ್ಯಕ್ರಮದಲ್ಲಿ ೪೮ ಜನರೈತರು ಭಾಗವಹಿಸಿ ಮಾಹಿತಿ ಪಡೆದುಕೊಂಡರು.