ತೊಗರಿ ಬೆಳೆಯಲ್ಲಿ ಗೊಣ್ಣೆ ಹುಳುವಿನ ಬಾಧೆ :ರೈತರು ಹತೋಟಿ ಕ್ರಮಕೈಗೊಳ್ಳಲು ಸೂಚನೆ

ಕಲಬುರಗಿ,ಆ.31:ಕಲಬುರಗಿ ತಾಲೂಕಿನ ಫರಹತಾಬಾದ ಹೋಬಳಿಯ ಫೀರೊಜಾಬಾದ್ ನಡುವಿನಹಳ್ಳಿ ಮತ್ತು ಸೋಮನಾಥಹಳ್ಳಿಗೆ ಕಲಬುರಗಿ ಸಹಾಯಕ ಕೃಷಿ ನಿರ್ದೇಶಕ ಚಂದ್ರಕಾಂತ ಜೀವಣಗಿ, ಕೃಷಿ ಅಧಿಕಾರಿ ಶೃತಿ ಹಾಗೂ ಶಿವರಾಯ ಬಿ.ಟಿ.ಎಂ. ಅವರು ಕ್ಷೇತ್ರ ಭೇಟಿ ನೀಡಿದಾಗ ಮಣ್ಣಿನಲ್ಲಿ ತೇವಾಂಶ ಕೊರತೆಯಿಂದ ತೊಗರಿ ಬೆಳೆಯಲ್ಲಿ ಗೊಣ್ಣೆ ಹುಳುವಿನ ಬಾಧೆ ಕಂಡು ಬಂದಿರುತ್ತದೆ.

  ಬೇರು ಮತ್ತು ಕಾಂಡ ಕೊರೆದು ಗಿಡಗಳು ಬಾಡುವುದು ಈ ಬಾಧೆಯ ಲಕ್ಷಣಗಳಾಗಿದ್ದು, ರೈತರು ಈ ಕೆಳಕಂಡ ಹತೋಟಿ ಕ್ರಮಗಳನ್ನು ಅನುಸರಿಸಬೇಕೆಂದು ಕಲಬುರಗಿ ಸಹಾಯಕ ಕೃಷಿ ನಿರ್ದೇಶಕ ಚಂದ್ರಕಾಂತ ಜೀವಣಗಿ ಅವರು ತಿಳಿಸಿದ್ದಾರೆ. 

ಹತೋಟಿ ಕ್ರಮಗಳು ಇಂತಿವೆ. ನೀರು ಲಭ್ಯವಿದ್ದಲ್ಲಿ ಜಮೀನಿಗೆ ನೀರು ಹಾಯಿಸುವುದು. ಅಂತರ ಬೇಸಾಯ, ಕೈಯಿಂದ ಮಣ್ಣಿನಲ್ಲಿ ಇರುವ ಹುಳುವನ್ನು ಆರಿಸಿ ತೆಗೆಯುವುದು. ಬೇವಿನ ಹಿಂಡಿ 50 ಕೆ.ಜಿ + ಮೆಟಾರಿಜಿಯಂ ಪುಡಿ 2 ಕೆ.ಜಿ ಪ್ರತಿ ಎಕರೆಗೆ ಮಣ್ಣಿಗೆ ಹಾಕಬೇಕು. ಕ್ಲೋರೋಪೈರಿಫಾಸ್ 3 ಮಿ.ಲೀ. ಪ್ರತಿ ಒಂದು ಲೀಟರ ನೀರಿಗೆ ಬೇರಿಸಿ ಬೆಳೆಯ ಬೇರಿಗೆ ಸಿಂಪರಣೆ ಮಾಡಬೇಕು. ಪ್ರತಿ ಎಕರೆಗೆ 4 ಕೆ.ಜಿ. ಫೋರೇಟ್ ಅಥವಾ ಕಾರ್ಬೋಪ್ಯೊರಾನ್-3ಜಿ ಯನ್ನು ಬೆಳೆಯ ಸಾಲಿಗೆ ಸುರಿಸಬೇಕೆಂದು ಅವರು ತಿಳಿಸಿದ್ದಾರೆ.