ತೊಗರಿ ನೆಟೆರೋಗ ಪರಿಹಾರ ಕೂಡಲೇ ವಿತರಣೆ ಮಾಡುವಂತೆ ಆಗ್ರಹ

ಕಲಬುರಗಿ:ಜೂ.19: ನೆಟರೋಗದಿಂದ ತೊಗರಿಬೆಳೆಗಳು ಹಾಳಾಗಿದ್ದರಿಂದ ಕಳೆದಬಾರಿ ಬಸವರಾಜ ಬೊಮ್ಮಾಯಿರವರ ನೇತೃತ್ವದ ಬಿಜೆಪಿ ಸರಕಾರ ತೊಗರಿ ಬೆಳೆ ಹಾಳಾದ ರೈತರಿಗೆ ಹೆಕ್ಟರಗೆ 10ಸಾವಿರ ರೂಪಾಯಿ ಕೊಡುವುದಾಗಿ ಘೋಷಣೆ ಮಾಡಿದ್ದು, ಆದರೆ ಇಲ್ಲಿಯವರೆಗೆ ಯಾವೊಬ್ಬರ ರೈತರ ಖಾತೆಗೆ ಹಣ ಜಮಾವಣೆಯಾಗಿರುವುದಿಲ್ಲ. ಚುನಾಯಿತ ಪ್ರತಿನಿಧಿಗಳು ಅಧಿಕಾರದ ಗದ್ದುಗೆ ಏರುವ ಮುನ್ನ ರೈತರ ಹೆಸರಿನಮೇಲೆ ಆಣೆ ಪ್ರಮಾಣಗಳು ಮಾಡಿ, ಪ್ರಮಾಣವಚನ ಸ್ವೀಕರಿಸುವ ಈ ರಾಜಕಾರಣಿಗಳು, ರೈತರ ಗೋಳು ಕೇಳಲು ಮುಂದಾಗದೆ ಇರುವುದು, ನಾಚಿಕೆಗೇಡಿನ ಸಂಗತಿಯಾಗಿದೆ. ಕೂಡಲೇ ಕಾಂಗ್ರೆಸ್ ನೇತೃತ್ವದ ಸರಕಾರ ಎಚ್ಚೆತ್ತುಕೊಂಡು ನೆಟೆರೋಗದಿಂದ ತೊಗರಿ ಬೆಳೆ ಹಾಳಾದ ರೈತರಿಗೆ ಹೆಕ್ಟರ್‍ಗೆ 20ಸಾವಿರ ರೂಪಾಯಿ ಪರಿಹಾರ ಕೂಡಲೇ ನೀಡಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ಪ್ರಶಾಂತಗೌಡ ಆರ್. ಮಾಲಿ ಪಾಟೀಲ ಒತ್ತಾಯಿಸಿದ್ದಾರೆ.
ಅಲ್ಲದೆ ಪ್ರಸಕ್ತ ಸಾಲಿನಲ್ಲಿ ಬಿತ್ತನೆ ಕಾರ್ಯಕ್ಕೆ ರೈತರೊಂದಿಗೆ ಅಧಿಕಾರಿಗಳು ಸಹಕರಿಸಿ ಮಾರ್ಗದರ್ಶನ ನೀಡಬೇಕು, ಮಾನ್ಸೂನ್ ಮಳೆಗಳು ಪ್ರಾರಂಭವಾಗುತ್ತಿದೆ. ರೈತ ಬಾಂಧವರು ಬಿತ್ತನೆಗಾಗಿ ಹೊಲಗಳನ್ನು ಸಿದ್ಧಪಡಿಸಿಕೊಂಡಿದ್ದಾರೆ. ಉತ್ತಮ ಗುಣಮಟ್ಟದ ಬೀಜ ಹಾಗೂ ಗೊಬ್ಬರದ ಅಗತ್ಯತೆ ಹೆಚ್ಚಾಗಿದ್ದು, ಕೊರತೆಯಾಗದಂತೆ ಸಂಗ್ರಹ ಮಾಡಿಕೊಂಡು ವಿತರಣಾ ಕಾರ್ಯ ನಡೆಬೇಕಾಗಿದೆ. ಯಾವುದೇ ತೊಂದರೆಯಾಗದಂತೆ ಈ ನಿಟ್ಟಿನಲ್ಲಿ ಸಂಬಂಧಪಟ್ಟ ಕೃಷಿ ಇಲಾಖೆಯ ಅಧಿಕಾರಿಗಳು ನಿಗಾವಹಿಸಲು ಕೋರಲಾಗಿದೆ. ಇತ್ತಿಚಿಗೆ ಕಳಪೆ ಬೀಜಗಳ ಮಾರಾಟ, ನಕಲಿ ಗೊಬ್ಬರಗಳ ವ್ಯವಹಾರ ಆಗುತ್ತಿರುವ ಪ್ರಸಂಗಗಳು ಜಾಸ್ತಿಯಾಗಿದೆ. ಇದ್ಯಾವುದಕ್ಕೂ ಅವಕಾಶ ಕೊಡದೆ ಅಧಿಕಾರಿ, ಸಿಬ್ಬಂದಿ ವರ್ಗದವರು ಸಹಕರಿಸಬೇಕಾಗಿದೆ. ಅನ್ನದಾನಿಗೆ ಕೈ ಜೋಡಿಸಬೇಕಾಗಿದೆ. ರೈತ ಸಂಪರ್ಕ ಕೇಂದ್ರಗಳು, ಕೃಷಿ ವಿಜ್ಞಾನಿ ಕೇಂದ್ರಗಳು, ಜಾಗೃತೆ ವಹಿಸಿ ರೈತ, ಕಾರ್ಯ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲು ರೈತರಿಗೆ ಸಹಕರಿಸಬೇಕೆಂದು ಮಾಲಿ ಪಾಟೀಲ ಅವರು ಮನವಿ ಮಾಡಿದ್ದಾರೆ.