ತೊಗರಿ ತಂತ್ರಜ್ಞಾನ ಪಾರ್ಕ್ ರದ್ದು

ಕಲಬುರಗಿ ಮಾ 20: ದಶಕದ ಹಿಂದೆ ಕಲಬುರ್ಗಿಗೆ ಮಂಜೂರಾಗಿದ್ದ ತೊಗರಿ ತಂತ್ರಜ್ಞಾನ ಪಾರ್ಕ್ ಯೋಜನೆಯನ್ನು ಸೂಕ್ತ ಜಮೀನು ಸಿಗದ ಕಾರಣ ಸರ್ಕಾರ
ಕೈ ಬಿಟ್ಟಿದೆ.
ವಿಧಾನ ಪರಿಷತ್ ಸದಸ್ಯ ಬಿ.ಜಿ. ಪಾಟೀಲ ಅವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಅವರು ಈ ವಿಷಯ ಸ್ಪಷ್ಟಪಡಿಸಿದ್ದಾರೆ.
ಕಲಬುರ್ಗಿಯಲ್ಲಿ ತೊಗರಿ ಟೆಕ್ನಾಲಜಿ ಪಾರ್ಕ್ ಸ್ಥಾಪನೆ ಸಂಬಂಧ 250 ಎಕರೆ ಜಮೀನನ್ನು ಕೆಐಎಡಿಬಿ ಮೂಲಕ ಪಡೆಯಲು ಕ್ರಮ ವಹಿಸಲಾಗಿತ್ತು. ಆದರೆ, ನಂತರದ ದಿನಗಳಲ್ಲಿ ಕೆಐಎಡಿಬಿಯು ಭೂಸ್ವಾಧೀನ ಪ್ರಕ್ರಿಯೆಯನ್ನು ಕೈಬಿಟ್ಟಿದೆ. ಈ ಹಿನ್ನೆಲೆಯಲ್ಲಿ ಪಾರ್ಕ್ ಸ್ಥಾಪನೆಗೆ ಸೂಕ್ತ ಜಮೀನು ಸಿಗದ ಕಾರಣ ಉದ್ದೇಶಿತ ಯೋಜನೆಯನ್ನು ಕೈ ಬಿಡಲಾಗಿದೆ. ಮಾತ್ರವಲ್ಲದೇ, ಭೂಸ್ವಾಧೀನಕ್ಕಾಗಿ ಠೇವಣಿ ಇಡಲಾಗಿದ್ದ 489.50 ಲಕ್ಷ ರೂ ಹಣವನ್ನೂ ಮರಳಿ ಪಡೆಯಲಾಗಿದೆ ಎಂದು ಸಚಿವರು ತಮ್ಮ ಉತ್ತರದಲ್ಲಿ ತಿಳಿಸಿದ್ದಾರೆ.