ತೊಗರಿ ಖರೀದಿ ಅವಧಿ ವಿಸ್ತರಣೆಗೆ ಆಗ್ರಹಿಸಿ ಪ್ರಾಂತ ರೈತ ಸಂಘ ಪ್ರತಿಭಟನೆ

ಕಲಬುರಗಿ.ಡಿ.24: ತೊಗರಿ ಖರೀದಿಗೆ ಫೆಬ್ರವರಿ 15ರ ವರೆಗೆ ನೊಂದಣಿ ಕಾರ್ಯ ವಿಸ್ತರಿಸಿ ಏಪ್ರಿಲ್ 30ರವರೆಗೆ ಖರೀದಿಸಬೇಕೆಂದು ಕರ್ನಾಟಕ ಪ್ರಾಂತ ರೈತ ಸಂಘದ ಕಾರ್ಯಕರ್ತರು ಗುರುವಾರ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನಾ ಪ್ರದರ್ಶನ ಮಾಡಿದರು.

ಪ್ರತಿಭಟನೆಕಾರರು ನಂತರ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಿ, ಜಿಲ್ಲಾಡಳಿತ ಡಿಸೆಂಬರ್ ಕೊನೆಯವರೆಗೆ ನೊಂದಣಿ ಹಾಗೂ ಜನವರಿ ಕೊನೆಯವರೆಗೆ ಖರೀದಿಗೆ ಸಮಯ ನಿಗದಿಪಡಿಸಿರುವುದು ರೈತ ವಿರೋಧಿ ನೀತಿಯಾಗಿದೆ ಎಂದು ಟೀಕಿಸಿದರು.
ಕೊರೋನಾ ಹಾಗೂ ಅತಿವೃಷ್ಟಿಯಿಂದ ತೊಗರಿ ಬೆಳೆಗಾರರು ಸಂಕಷ್ಟದಲ್ಲಿದ್ದಾರೆ. ಸತತ ಮಳೆಯಿಂದ ಇಳುವರಿ ಕಡಿಮೆಯಾಗಿದೆ. ಇಂಥ ಪರಿಸ್ಥಿತಿಯಲ್ಲಿ ರೈತರ ಬೆನ್ನಿಗೆ ನಿಲ್ಲಬೇಕಾದ ಸರ್ಕಾರ, ಜಾಣಕುರುಡನಂತೆ ವರ್ತಿಸುತ್ತಿದೆ ಎಂದು ಅವರು ದೂರಿದರು.
ತೊಗರಿ ಬೆಳೆದ ಎಲ್ಲ ರೈತರ ತೊಗರಿ ಪ್ರತಿ ಕ್ವಿಂಟಲ್ 8000 ರೂಂ.ಗೆ ಖರೀದಿಸಬೇಕು ಎಂದು ಆಗ್ರಹಿಸಿದ ಅವರು, ಬೇಡಿಕೆ ಈಡೇರದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ರೂಪಿಸಲಾಗುವುದು ಎಂದು ಎಚ್ಚರಿಸಿದರು.
ಸಂಘಟನೆಯ ಅಶೋಕ್ ಮ್ಯಾಗೇರಿ ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಪಾಂಡುರಂಗ್ ಮಾವಿನಕರ, ಶಾಂತಪ್ಪ ಪಾಟೀಲ್, ಸುನಿಲ್ ಮಾನಪಡೆ, ಸುಧಾಮ್ ಧನ್ನಿ, ಮಲ್ಲಣಗೌಡ ಬನ್ನೂರು, ಸಿದ್ದಯ್ಯ ಸ್ವಾಮಿ, ಸಿದ್ದಲಿಂಗ್ ಪಾಳಾ, ರಾಯಪ್ಪ ಹುಗುರ್ಂಜಿ, ಮೈಲಾರಿ ಮುಂತಾದವರು ಪಾಲ್ಗೊಂಡಿದ್ದರು.