ತೊಗರಿ, ಕಬ್ಬಿನ ಬೆಂಬಲ ಬೆಲೆ ಹೆಚ್ಚಳಕ್ಕೆ ಆಗ್ರಹಿಸಿ ರೈತರ ಬೃಹತ್ ಪ್ರತಿಭಟನೆ

ಕಲಬುರಗಿ,ನ.18:ತೊಗರಿ ಮತ್ತು ಕಬ್ಬಿನ ಬೆಂಬಲ ಬೆಲೆಯನ್ನು ಹೆಚ್ಚಿಸುವಂತೆ ಹಾಗೂ ಇನ್ನಿತರ ಬೇಡಿಕೆಗಳನ್ನು ಮುಂದಿಟ್ಟುಕೊಂಡು ನಗರದ ಜಗತ್ ವೃತ್ತದಿಂದ ಜಿಲ್ಲಾಧಿಕಾರಿಗಳ ಕಚೇರಿಯವರೆಗೆ ಶುಕ್ರವಾರ ಬೃಹತ್ ಪ್ರತಿಭಟನಾ ಮೆರವಣಿಗೆ ಮಾಡಿದ ರೈತರು ಸರ್ದಾರ್ ವಲ್ಲಭಬಾಯಿ ಪಟೇಲ್ ವೃತ್ತದಲ್ಲಿ ಮಾನವ ಸರಪಳಿ ಹಾಗೂ ಧರಣಿ ಮೂಲಕ ಆಕ್ರೋಶ ಹೊರಹಾಕಿದರು.
ಪ್ರತಿಭಟನೆಕಾರರು ಜಿಲ್ಲಾಧಿಕಾರಿಗಳ ಮೂಲಕ ಪ್ರಸ್ತುತ ಬೆಳೆಯಾದ ಜೆ. ಟ್ಯಾಗ್ ಸರ್ಕಾರ ಘೋಷಣೆ ಮಾಡಿದ ವಿಶೇಷ ಉತ್ಪನ್ನವಾದಂತಹ ಬೆಳೆಯಾದ ತೊಗರಿ ಬೆಳೆಗೆ ನೈಜವಾದ ಬೆಲೆ ಕ್ವಿಂಟಲಿಗೆ 13000ರೂ.ಗಳನ್ನು ಕೊಡುವಂತೆ ಹಾಗೂ ರೈತರು ಬೆಳೆದ ಎಲ್ಲ ಬೆಳೆಯನ್ನು ಸರ್ಕಾರವೇ ಖರೀದಿಸುವಂತೆ ಮತ್ತು ಖರೀದಿ ಕೇಂದ್ರಗಳನ್ನು ಸ್ಥಾಪಿಸುವಂತೆ ಒತ್ತಾಯಿಸಿದರು.
ಕಬ್ಬು ಬೆಳೆಗಾರರಿಗೆ ಉತ್ತರ ಪ್ರದೇಶ ರಾಜ್ಯದಲ್ಲಿ ಕೊಡಲಾಗುತ್ತಿರುವ 4400ರೂ.ಗಳು ಹಾಗೂ ಗುಜರಾತ್‍ನಲ್ಲಿ ಕೊಡುತ್ತಿರುವ 3500ರೂ.ಗಳಂತೆ ರಾಜ್ಯದಲ್ಲಿಯೂ ದರ ನಿಗದಿಪಡಿಸುವಂತೆ ಆಗ್ರಹಿಸಿದ ಅವರು, ಜಿಲ್ಲೆಯಲ್ಲಿ ನಾಲ್ಕು ಮತ್ತು ಯಾದಗಿರಿ ಜಿಲ್ಲೆಯಲ್ಲಿನ ಒಂದು ಸಕ್ಕರೆ ಕಾರ್ಖಾನೆ ಮತ್ತು ರಾಜ್ಯದಲ್ಲಿನ 73 ಸಕ್ಕರೆ ಕಾರ್ಖಾನೆಗಳ ಮಂಡಳಿಯವರು ಪ್ರತಿ ಟನ್ ಕಬ್ಬಿಗೆ 4500ರೂ.ಗಳ ಬೆಲೆಯನ್ನು ಘೋಷಿಸಬೇಕು ಎಂದು ಅವರು ಆಗ್ರಹಿಸಿದರು.
ಅದೇ ರೀತಿ ಸರ್ಕಾರವು ಒಂದು ಟನ್ ಕಬ್ಬಿನಿಂದ ಕಾರ್ಖಾನೆಯವರಿಂದ ಸುಮಾರು 4ರಿಂದ 5000ರೂ.ಗಳು ತೆರಿಗೆಯನ್ನು ವಸೂಲಿ ಮಾಡುತ್ತಿದ್ದು, ಆ ವಸೂಲಿ ಮಾಡಿದ ತೆರಿಗೆಯಲ್ಲಿ ಪ್ರತಿ ಟನ್ನಿಗೆ ಸೇರಿಸಿ 6500ರೂ.ಗಳನ್ನು ಘೋಷಣೆ ಮಾಡಬೇಕು ಎಂದು ಅವರು ಒತ್ತಾಯಿಸಿದರು.
ರೈತರ ಜಮೀನುಗಳಿಗೆ ಅಳವಡಿಸಲಾದ ವಿದ್ಯುತ್‍ನ್ನು 12 ಗಂಟೆಗಳ ಕಾಲ ಒದಗಿಸಲು ಆದೇಶ ಹೊರಡಿಸುವಂತೆ, ಜಿಲ್ಲೆಯಲ್ಲಿ ಇರುವ ಕರ್ನಾಟಕ ನೀರಾವರಿ ನಿಗಮದ ಬೆಣ್ಣೆತೊರಾ, ಗಂಡೋರಿ ನಾಲಾ, ಮುಲ್ಲಾಮಾರಿ ಯೋಜನೆ ಕುರಿತು ಬೃಹತ್ ಭ್ರಷ್ಟಾಚಾರದ ವಿರುದ್ಧ ಹಾಗೂ ಈಗಾಗಲೇ ನಿರ್ಮಿಸಿದ ಕಾಲುವೆಗೆ ನೀರು ಒದಗಿಸುವ ಕುರಿತು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.
ಜಿಲ್ಲಾ ಸಹಕಾರ ಬ್ಯಾಂಕ್‍ದಲ್ಲಿ ಬೃಹತ್ ಪ್ರಮಾಣದ ಭ್ರಷ್ಟಾಚಾರದ ವಿರುದ್ಧ ಕ್ರಮ ಕೈಗೊಳ್ಳುವಂತೆ, ಸರ್ಕಾರದಿಂದ ನಬಾರ್ಡ್ ಯೋಜನೆಯಲ್ಲಿ ಬಿಡುಗಡೆಯಾದ ಯೋಜನೆಗಳು ಅಡಿಯಲ್ಲಿ ಇಲ್ಲಿಯವರೆಗೆ ಯಾರೊಬ್ಬ ರೈತರಿಗೂ ಮುಟ್ಟಿಲ್ಲ. ಈ ಕುರಿತು ಪರಿಶೀಲಿಸಿ ನೇರವಾಗಿ ಯೋಜನೆಯ ಲಾಭ ತಲುಪಿಸುವಂತೆ ಅವರು ಒತ್ತಾಯಿಸಿದರು.
ಕೃಷಿ ಇಲಾಖೆಯಲ್ಲಿ ನಡೆಯುತ್ತಿರುವ ರೈತರಿಗೆ ಸರ್ಕಾರದಿಂದ ಬರುತ್ತಿರುವ ಅನುದಾನಗಳು ಮತ್ತು ಪರಿಕರಗಳು ರೈತರಿಗೆ ಸರಿಯಾಗಿ ದೊರಕುವಂತೆ ಕ್ರಮ ಕೈಗೊಳ್ಳಲು ಮತ್ತು ಬಾಗೋಡಿಯಲ್ಲಿನ ಅಕ್ರಮ ಮರಳು ದಂಧೆಯನ್ನು ತಡೆಯುವಂತೆ ಅವರು ಆಗ್ರಹಿಸಿದರು.
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ರೈತ ಸೇನೆ ಜಿಲ್ಲಾಧ್ಯಕ್ಷ ಅಣವೀರಪ್ಪ ಎಸ್. ಹೆಬ್ಬಾಳ್ ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ರಾಜ್ಯ ಉಪಾಧ್ಯಕ್ಷ ಲಕ್ಷ್ಮೀಕಾಂತ್ ಪಾಟೀಲ್ ಮದ್ದರಕಿ ಮುಂತಾದವರು ಪಾಲ್ಲೊಂಡಿದ್ದರು.